ADVERTISEMENT

IND vs NZ: ಭಾರತದ ಪ್ರಾಬಲ್ಯ ಮುಂದುವರಿವ ನಿರೀಕ್ಷೆ; ಒತ್ತಡದಲ್ಲಿ ಕಿವೀಸ್‌

ಪಿಟಿಐ
Published 27 ಜನವರಿ 2026, 14:08 IST
Last Updated 27 ಜನವರಿ 2026, 14:08 IST
   

ವಿಶಾಖಪಟ್ಟಣ: ಆತಿಥೇಯ ಭಾರತ ಈಗಾಗಲೇ ಟಿ20 ಸರಣಿ ಕೈವಶ ಮಾಡಿಕೊಂಡಿದೆ. ನ್ಯೂಜಿಲೆಂಡ್ ವಿರುದ್ಧ ಬುಧವಾರ ನಡೆಯುವ ನಾಲ್ಕನೇ ಪಂದ್ಯದಲ್ಲೂ ಇದೇ ರೀತಿಯ ಪ್ರಾಬಲ್ಯ ಮುಂದುವರಿಸುವ ವಿಶ್ವಾಸದಲ್ಲಿದೆ. ಇದರ ನಡುವೆ, ತಂಡವು ಪ್ರಮುಖ  ಸ್ಪಿನ್ನರ್‌ಗಳಿಂದ ಸುಧಾರಿತ ಪ್ರದರ್ಶನದ ನಿರೀಕ್ಷೆಯಲ್ಲಿದೆ.

ಆರಂಭ ಆಟಗಾರ ಅಭಿಷೇಕ್ ಶರ್ಮಾ, ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರು ಬಿರುಗಾಳಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಬ್ಯಾಟರ್‌ಗಳ ಅಬ್ಬರದಲ್ಲಿ ತಂಡದ ಪ್ರಮುಖ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಅವರು ಲಯದಲ್ಲಿ ಇಲ್ಲದಿರುವುದು ಎದ್ದುಕಂಡಿಲ್ಲ.

ಕುಲದೀಪ್ ಎರಡು ಪಂದ್ಯಗಳಿಂದ ಎರಡು ವಿಕೆಟ್‌ ಅಷ್ಟೇ ಪಡೆದಿದ್ದಾರೆ. ಅವರಿಗೆ ಇನ್ನೂ ಲಯ ಕಂಡುಕೊಳ್ಳಲು ಆಗಿಲ್ಲ. ಪ್ರತಿ ಓವರಿಗೆ ಅವರು 9.5 ರನ್ ತೆತ್ತಿದ್ದಾರೆ. ಭಾನುವಾರ ಮೂರನೇ ಪಂದ್ಯದಲ್ಲಿ ಜಸ್‌ಪ್ರೀತ್ ಬೂಮ್ರಾ, ರವಿ ಬಿಷ್ಣೋಯಿ ಮತ್ತು ಹಾರ್ದಿಕ್ ಪಾಂಡ್ಯ ಪರಿಣಾಮಕಾರಿ ದಾಳಿ ನಡೆಸಿ ಕಿವೀಸ್ ತಂಡವನ್ನು 9 ವಿಕೆಟ್‌ಗೆ 153 ರನ್‌ಗಳಿಗೆ ಸೀಮಿತಗೊಳಿಸಿದ್ದ ವೇಳೆ ಕುಲದೀಪ್ 3 ಓವರುಗಳಲ್ಲಿ 32 ರನ್ ಕೊಟ್ಟು ದುಬಾರಿಯಾಗಿದ್ದಾರೆ.

ADVERTISEMENT

ಈ ಸರಣಿಗೆ ಮೊದಲು ನಡೆದ ಏಕದಿನ ಸರಣಿಯ ಪಂದ್ಯದಲ್ಲಿ ಅವರು ಪ್ರತಿ ಓವರಿಗೆ 7.28 ರನ್ ನೀಡಿದ್ದರು. ಮೂರು ಪಂದ್ಯಗಳಲ್ಲಿ ಗಳಿಸಿದ್ದು ಮೂರೇ ವಿಕೆಟ್‌.  

ಮೂರನೇ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ಚಕ್ರವರ್ತಿ ಅವರ ವಿಷಯ ಕೊಂಚ ಭಿನ್ನವಾದುದು. ಎರಡು ಹೈಸ್ಕೋರಿಂಗ್ ಪಂದ್ಯಗಳಲ್ಲಿ (190 ಮತ್ತು 208) ದುಬಾರಿಯಾಗಿದ್ದರು. ಆದರೆ ಅವರ ಬೌಲಿಂಗ್ ಸಹ ಎಂದಿನ ಮೊನಚು ಹೊಂದಿರಲಿಲ್ಲ. 

ಕುಲದೀಪ್ ಅಥವಾ ಬಿಷ್ಣೋಯಿ?:

ಈ ಹಿನ್ನೆಲೆಯಲ್ಲಿ ತಂಡ ಬಿಷ್ಣೋಯಿ ಅವರನ್ನು ಉಳಿಸಿ ಕುಲದೀಪ್ ಅವರನ್ನು ನಾಲ್ಕನೇ ಪಂದ್ಯಕ್ಕೆ ಕೈಬಿಡುವ ಸಾಧ್ಯತೆಯಿದೆ. ವರುಣ್ ಅವರನ್ನು ಮರಳಿ ತಂಡಕ್ಕೆ ಸೇರ್ಪಡೆ ಮಾಡುವ ಸಾಧ್ಯತೆಯಿದೆ.

ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರ ಫಿಟ್ನೆಸ್‌ ಮೇಲೂ ಲಕ್ಷ್ಯ ಇಡಲಾಗಿದೆ. ನಾಗ್ಪುರದಲ್ಲಿ ನಡೆದ ಮೊದಲ ಪಂದ್ಯದ ನಂತರ ಅವರು ಆಡಿಲ್ಲ.

ಬೌಲಿಂಗ್ ಕಥೆ ಹೀಗಾದರೆ ಬ್ಯಾಟಿಂಗ್ ಮಾತ್ರ ಚೇತೋಹಾರಿಯಾಗಿದೆ. ಸರಣಿಯ ಮೂರನೇ ಪಂದ್ಯದಲ್ಲಿ ಅಭಿಷೇಕ್ 300ಕ್ಕೂ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ ರನ್ ಸೂರೆ ಮಾಡಿದ್ದರು. ಸಂಜು ಸ್ಯಾಮ್ಸನ್‌ ಅವರನ್ನು ಬಿಟ್ಟರೆ ಅಗ್ರ ಸರದಿಯ ಇತರ ಆಟಗಾರರು ಯಶಸ್ಸು ಕಂಡಿದ್ದಾರೆ. ಸೂರ್ಯಕುಮಾರ್ ಮತ್ತು ಇಶಾನ್ ಕಿಶನ್ 230ರ ಆಸುಪಾಸಿನ ಸ್ಟ್ರೈಕ್‌ರೇಟ್‌ನಲ್ಲಿ ರನ್ ಹರಿಸಿದ್ದಾರೆ. ತಂಡವು ಕಳೆದ ಎರಡು ಪಂದ್ಯಗಳಲ್ಲಿ ಅನಾಯಾಸವಾಗಿ (209 ಮತ್ತು 154 ರನ್‌ಗಳ) ಗುರಿಯನ್ನು ಮುಟ್ಟಿದೆ.  ವಿಶಾಖಪಟ್ಟಣದ ಪಿಚ್‌ ಕೂಡ ಬ್ಯಾಟರ್‌ಗಳಿಗೆ ಅನುಕೂಲವಾಗುವ ನಿರೀಕ್ಷೆಯಿದ್ದು ಇಲ್ಲೂ ರನ್‌ ಸುಗ್ಗಿ ಕಾಣಬಹುದು.

ಆದರೆ ಅನಿರೀಕ್ಷಿತ ಎಂಬಂತೆ ಆರಂಭ ಆಟಗಾರ ಸಂಜು ಸ್ಯಾಮ್ಸನ್ ನಿರಾಶೆ ಮೂಡಿಸಿದ್ದಾರೆ. ಹಿಂದಿನ ವರ್ಷ ಬಹುತೇಕ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದು ಅವರ ಲಯದ ಮೇಲೆ ಪರಿಣಾಮ ಬೀರಿರಬಹುದು. ಆದರೆ ತಂಡದಲ್ಲಿ ಸ್ಥಾನ ಗಳಿಸಲು ಇರುವ ಪೈಪೋಟಿ ಗಮನಿಸಿದರೆ, ಸಂಜು ಮೇಲೆ ಉತ್ತಮ ಇನಿಂಗ್ಸ್ ಆಡಬೇಕಾದ ಒತ್ತಡವಿದೆ. ಮೂರು ಪಂದ್ಯಗಳಲ್ಲಿ ಅವರು 5.33 ಸರಾಸರಿಯಲ್ಲಿ ಕೇವಲ 16 ರನ್ ಗಳಿಸಿದ್ದಾರೆ. 

ತಿಲಕ್‌ ವರ್ಮಾ ತಂಡಕ್ಕೆ ಸೇರ್ಪಡೆಯಾಗುವುದು ತಡವಾಗುವ ಕಾರಣ ಸಂಜು ಇನ್ನೊಂದು ಅವಕಾಶ ಪಡೆಯಬಹುದು.

ಕಿವೀಸ್‌ಗೆ ಒತ್ತಡ:

ಈ ಸರಣಿಯಲ್ಲಿ ನ್ಯೂಜಿಲೆಂಡ್ ಅಂದುಕೊಂಡಂತೆ ಯಾವುದೂ ನಡೆದಿಲ್ಲ. ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಿಲ್ಲ. ಬೌಲರ್‌ಗಳು ಭಾರತದ ಬ್ಯಾಟರ್‌ಗಳ ಅಬ್ಬರದ ಮುಂದೆ ನಲುಗಿಹೋಗಿದ್ದಾರೆ. ಪ್ರವಾಸಿ ಪಡೆಯ ಯಶಸ್ವಿ ಬೌಲರ್ ಜೇಕಬ್ ಡಫಿ ಅವರ ಇಕಾನಮಿಯೇ 10.30 ಎಂದರೆ ತಂಡದ ಇತರ ಬೌಲರ್‌ಗಳ ದಯನೀಯ ಸ್ಥಿತಿ ಊಹಿಸಬಹುದು. ಮ್ಯಾಟ್‌ ಹೆನ್ರಿ (13.80), ಕೈಲ್ ಜೇಮಿಸನ್ (14.20), ಮಿಚೆಲ್ ಸ್ಯಾಂಟ್ನರ್ (13.14) ಮತ್ತು ಈಶ್ ಸೋಧಿ (12.50) ಅವರು ಕೈಸುಟ್ಟುಕೊಂಡಿದ್ದಾರೆ.

ತಂಡದ ಮುಂದಿರುವ ಆಯ್ಕೆ ಉತ್ತಮ ಲಯದಲ್ಲಿರುವ ಡ್ಯಾರಿಲ್ ಮಿಚೆಲ್ ಅವರಿಗೆ ಬಡ್ತಿ ನೀಡುವುದು. ಆದರೆ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡದೇ ಹೋದರೆ ಈ ಪ್ರಯೋಗ ಹೆಚ್ಚಿನ ಪರಿಣಾಮ ಬೀರದು.

ಪಂದ್ಯ ಆರಂಭ: ರಾತ್ರಿ 7.00

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಹಾಟ್‌ಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.