ADVERTISEMENT

ದಕ್ಷಿಣ ಆಫ್ರಿಕಾ ‘ಎ’ ಎದುರಿನ ‘ಟೆಸ್ಟ್’ ಪಂದ್ಯ; ಭಾರತ ‘ಎ’ ತಂಡ ಜಯಭೇರಿ

ಮಿಂಚಿದ ರಿಕಿ, ಶಿವಂ ದುಬೆ

ಪಿಟಿಐ
Published 12 ಸೆಪ್ಟೆಂಬರ್ 2019, 11:44 IST
Last Updated 12 ಸೆಪ್ಟೆಂಬರ್ 2019, 11:44 IST
ದಕ್ಷಿಣ ಆಫ್ರಿಕಾ ‘ಎ’ ತಂಡದ ಎದುರು ನಡೆದ ‘ಟೆಸ್ಟ್‌’ ನಲ್ಲಿ ಎರಡು ಸಿಕ್ಸರ್ ಬಾರಿಸಿದ ಭಾರತ ‘ಎ’ ತಂಡದ ಶಿವಂ ದುಬೆ –ಪಿಟಿಐ ಚಿತ್ರ
ದಕ್ಷಿಣ ಆಫ್ರಿಕಾ ‘ಎ’ ತಂಡದ ಎದುರು ನಡೆದ ‘ಟೆಸ್ಟ್‌’ ನಲ್ಲಿ ಎರಡು ಸಿಕ್ಸರ್ ಬಾರಿಸಿದ ಭಾರತ ‘ಎ’ ತಂಡದ ಶಿವಂ ದುಬೆ –ಪಿಟಿಐ ಚಿತ್ರ   

ತಿರುವನಂತಪುರ: ಭಾರತ ‘ಎ’ ತಂಡವು ಗುರುವಾರ ಇಲ್ಲಿ ಮುಕ್ತಾಯವಾದ ದಕ್ಷಿಣ ಆಫ್ರಿಕಾ ‘ಎ’ ತಂಡದ ಎದುರಿನ ‘ಟೆಸ್ಟ್‌’ನಲ್ಲಿ ಜಯಿಸಿತು.

48 ರನ್‌ಗಳ ಅಲ್ಪಮೊತ್ತದ ಗುರಿಯನ್ನು ಬೆನ್ನಟ್ಟಿದ ಭಾರತ ‘ಎ’ ತಂಡವು 9.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 49 ರನ್‌ ಗಳಿಸಿ ಜಯಿಸಿತು. ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಪ್ರವಾಸಿ ತಂಡವು 164 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಆತಿಥೇಯರು 303 ರನ್‌ ಗಳಿಸಿ ಮುನ್ನಡೆ ಪಡೆದಿತ್ತು. ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಶಹಬಾಜ್ ನದೀಂ ಅವರ ಬೌಲಿಂಗ್‌ ದಾಳಿಗೆ ತತ್ತರಿಸಿತು. ಕೇವಲ 186 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದರಿಂದಾಗಿ ಭಾರತ ‘ಎ’ ತಂಡದ ಗೆಲುವಿಗೆ ಕಡಿಮೆ ಮೊತ್ತದ ಗುರಿ ಲಭಿಸಿತು.

ಆದರೂ ಪ್ರವಾಸಿ ಬಳಗದ ಅನುಭವಿ ವೇಗಿ ಲುಂಗಿ ಗಿಡಿ (22ಕ್ಕೆ2) ಆತಿಥೇಯರಲ್ಲಿ ತುಸು ಆತಂಕ ಮೂಡಿಸಿದರು. ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ (5 ರನ್) ಮತ್ತು ಅಂಕಿತ್ ಭಾವ್ನೆ (6 ರನ್) ಅವರ ವಿಕೆಟ್‌ಗಳನ್ನು ಕಬಳಿಸಿದರು.

ADVERTISEMENT

ಆದರೆ, ರಿಕಿ ಭುಯ್ (ಔಟಾಗದೆ 20; 26ಎಸೆತ, 3ಬೌಂಡರಿ) ಮತ್ತು ಶಿವಂ ದುಬೆ (ಔಟಾಗದೆ 12; 2ಎಸೆತ, 2ಸಿಕ್ಸರ್) ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರಿಂದಾಗಿ ತಂಡವು ಸರಣಿಯಲ್ಲಿ 1–0 ಮುನ್ನಡೆ ಪಡೆಯಿತು. ಎರಡನೇ ಪಂದ್ಯವು ಮೈಸೂರಿನಲ್ಲಿ ಮುಂದಿನ ವಾರ ನಡೆಯಲಿದೆ.

ಮೂರನೇ ದಿನವಾದ ಬುಧವಾರ ಸಂಜೆ ದಕ್ಷಿಣ ಆಫ್ರಿಕಾ ತಂಡವು55 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 179 ರನ್‌ ಗಳಿಸಿತ್ತು. ಕೊನೆಯ ದಿನ ಬೆಳಿಗ್ಗೆ ಈ ಮೊತ್ತಕ್ಕೆ ಏಳು ರನ್‌ಗಳೂ ಮಾತ್ರ ಸೇರಿದವು. ಲೂಥೊ ಸಿಪಾಮಿಯಾ ಕೊನೆಯವರಾಗಿ ಔಟಾದರು. ಶಾರ್ದೂಲ್ ಠಾಕೂರ್ ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ದಕ್ಷಿಣ ಆಫ್ರಿಕಾ ’ಎ’: 164, ಭಾರತ: 303; ದ್ವಿತೀಯ ಇನಿಂಗ್ಸ್‌ :ದಕ್ಷಿಣ ಆಫ್ರಿಕಾ: 186, ಭಾರತ: 9.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 49 (ರಿಕಿ ಭುಯ್ ಔಟಾಗದೆ 20, ಶಿವಂ ದುಬೆ ಔಟಾಗದೆ 12, ಲುಂಗಿ ಗಿಡಿ 22ಕ್ಕೆ2, ಡೇನ್ ಪೀಡ್ತ್‌ 26ಕ್ಕೆ1) ಫಲಿತಾಂಶ: ಭಾರತ ‘ಎ’ ತಂಡಕ್ಕೆ 7 ವಿಕೆಟ್‌ಗಳ ಜಯ. ಸರಣಿಯಲ್ಲಿ 1–0 ಮುನ್ನಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.