ADVERTISEMENT

IND vs SA Test: 2ನೇ ದಿನ 15 ವಿಕೆಟ್ ಪತನ; 3ನೇ ದಿನವೇ ಮುಗಿಯುವತ್ತ ಟೆಸ್ಟ್‌

ಮಧು ಜವಳಿ
Published 15 ನವೆಂಬರ್ 2025, 19:30 IST
Last Updated 15 ನವೆಂಬರ್ 2025, 19:30 IST
<div class="paragraphs"><p>ವಿಕೆಟ್ ಪಡೆದು ಸಂಭ್ರಮಿಸಿದ ಜಡೇಜಾ</p></div>

ವಿಕೆಟ್ ಪಡೆದು ಸಂಭ್ರಮಿಸಿದ ಜಡೇಜಾ

   

ಚಿತ್ರ: @BCCI

ಕೋಲ್ಕತ್ತ: ಎರಡನೇ ದಿನ 15 ವಿಕೆಟ್‌ಗಳು ಉರುಳಿದ್ದು, ಮೊದಲ ಕ್ರಿಕೆಟ್‌ ಟೆಸ್ಟ್ ಪಂದ್ಯ ಮೂರನೇ ದಿನದೊಳಗೆ ಮುಗಿಯುವುದು ಖಚಿತವಾದಂತೆ ಕಾಣುತ್ತಿದೆ. ಈಡನ್‌ ಗಾರ್ಡನ್‌ನ ಪಿಚ್‌ ಉಭಯ ತಂಡಗಳ ಬ್ಯಾಟರ್‌ಗಳಿಗೆ ಒಗಟಾಗಿ ಮುಂದುವರಿದಿದೆ.

ADVERTISEMENT

ಶನಿವಾರ ಎರಡನೇ ದಿನ ಆಟ ನಾಟಕೀಯ ವೇಗದಲ್ಲಿ ಸಾಗಿ ಭಾರತ ತಂಡ ಬಿಗಿ ಹಿಡಿತ ಸಾಧಿಸಿತು. ದಕ್ಷಿಣ ಆಫ್ರಿಕಾದ 159 ರನ್‌ಗಳಿಗೆ ಉತ್ತರವಾಗಿ 189 ರನ್ ಗಳಿಸಿದ ಭಾರತ 30 ರನ್‌ಗಳ ಅಲ್ಪ ಮುನ್ನಡೆ ಪಡೆಯಿತು. ಸ್ಪಿನ್ನರ್‌ಗಳು ಪ್ರವಾಸಿ ತಂಡವನ್ನು ಕಾಡಿದ್ದು ದಿನದಾಟ ಮುಗಿದಾಗ ಹರಿಣಗಳ ಪಡೆ 7 ವಿಕೆಟ್‌ಗೆ 93 ರನ್ ಗಳಿಸಿದ್ದು, ಕೇವಲ 63 ರನ್‌ಗಳ ಮುನ್ನಡೆ ಹೊಂದಿದೆ.

ನಾಯಕ ಶುಭಮನ್ ಗಿಲ್‌ ಅವರು ಸ್ಲಾಗ್‌–ಸ್ವೀಪ್‌ ಬೌಂಡರಿ ಹೊಡೆದ ನಂತರ ಕತ್ತಿನ ಸ್ನಾಯು ನೋವಿಗೆ ಒಳಗಾಗಿ ಮೈದಾನ ತೊರೆದಿದ್ದು ಭಾರತಕ್ಕೆ ಹಿನ್ನಡೆ ಎನಿಸಿತು. ಅವರ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ತಂಡವನ್ನು ಮುನ್ನಡೆಸಿದರು.

ಭಾರತದ ಮೇಲುಗೈ ಸಾಧಿಸುವಲ್ಲಿ ಕೇಂದ್ರ ಬಿಂದುವಾಗಿದ್ದವರು ಅನುಭವಿ ರವೀಂದ್ರ ಜಡೇಜ (27 ಮತ್ತು 4/29) ಅವರು. ತಂಡ ಬೇಗ ಕುಸಿಯುವ ಭೀತಿಯಲ್ಲಿದ್ದಾಗ ಅಮೂಲ್ಯ ಆಟವಾಡಿದ ಈ ಎಡಗೈ ಸ್ಪಿನ್ನರ್, ಅನುಕೂಲಕರ ಪಿಚ್‌ನಲ್ಲಿ ಎಂದಿನಂತೆ ಮೋಡಿ ಮಾಡಿದರು.

1 ವಿಕೆಟ್‌ಗೆ 37 ರನ್‌ಗಳೊಡನೆ ಎರಡನೇ ದಿನದಾಟ ಮುಂದುವರಿಸಿದ ಭಾರತ ತಂಡಕ್ಕೆ ಕೆ.ಎಲ್‌.ರಾಹುಲ್ (39) ಮತ್ತು ವಾಷಿಂಗ್ಟನ್ ಸುಂದರ್ (29) ಅವರು ಉತ್ತಮ ಆರಂಭ ನೀಡಿದರು. ಪ್ರತಿಯೊಂದು ರನ್‌ಗೂ ಹೋರಾಟ ನಡೆಸಿದರು. ಅನಿರೀಕ್ಷಿತ ತಿರುವು, ಅನಿಶ್ಚಿತ ಬೌನ್ಸ್‌ಗಳಿಂದಾಗಿ ಬ್ಯಾಟರ್‌ಗಳಿಗೆ ಆಡುವುದು ಸವಾಲಾಗಿ ಪರಿಣಮಿಸಿತು. ಬೇರೂರಿದಂತೆ ಕಾಣದಿದ್ದರೂ 57 ರನ್‌ಗಳ ಜೊತೆಯಾಟ ಆಡಿ ಮಹತ್ವದ ಕಾಣಿಕೆ ನೀಡಿದರು.

ದಕ್ಷಿಣ ಆಫ್ರಿಕಾದ ಬೌಲರ್‌ಗಳೂ ಸಂದರ್ಭಕ್ಕೆ ಸ್ಪಂದಿಸಿದರು. ಅದರಲ್ಲೂ ಸಿಮೋನ್ ಹಾರ್ಮರ್ (30ಕ್ಕೆ4) ಶಿಸ್ತಿನ ಬೌಲಿಂಗ್‌ಗೆ ನಡೆಸಿದರು. ಒಂದೇ ಸ್ಪೆಲ್‌ನಲ್ಲಿ ಅವರ ದಾಳಿ: 14.2–3–30–4. ಸುಂದರ್‌, ಜಡೇಜ, ಧ್ರುವ್ ಜುರೇಲ್ ಮತ್ತು ಅಕ್ಷರ್ ಪಟೇಲ್ ವಿಕೆಟ್‌ಗಳನ್ನು ಕಬಳಿಸಿ ಭಾರತ ದೊಡ್ಡ ಮೊತ್ತದತ್ತ ಸಾಗದಂತೆ ತಡೆದರು.

ಊಟಕ್ಕೆ ಸ್ವಲ್ಪ ಮೊದಲು ಪಂತ್ ನಿರ್ಗಮಿಸಿದರೂ ಮೊತ್ತ 4 ವಿಕೆಟ್‌ಗೆ 138 ರನ್ ಆಗಿದ್ದು ಕುಸಿತವೇನೂ ಆಗಿರಲಿಲ್ಲ. ಆದರೆ ಲಂಚ್‌– ಚಹ ವಿರಾಮದ ನಡುವಿನ ಅವಧಿಯಲ್ಲಿ ಭಾರತದ ಬ್ಯಾಟಿಂಗ್ ಕುಸಿಯಿತು. ಹಾರ್ಮರ್ ದಾಳಿಯಿಂದಾಗಿ 51 ರನ್ ಸೇರುವಷ್ಟರಲ್ಲಿ 5 ವಿಕೆಟ್‌ಗಳ ಪತನವಾದವು.

ಹಾರ್ಮರ್ ಮಧ್ಯಮ ಕ್ರಮಾಂಕ ಧ್ವಂಸ ಮಾಡಿದ ನಂತರ ವೇಗದ ಬೌಲರ್‌ ಮಾರ್ಕೊ ಯಾನ್ಸೆನ್‌ ಕೆಳಕ್ರಮಾಂಕ ಬೇರೂರದಂತೆ ನೋಡಿಕೊಂಡರು. 

ಇನಿಂಗ್ಸ್ ಹಿನ್ನಡೆಯನ್ನು 30 ರನ್ನಿಗೆ ಸೀಮಿತಗೊಳಿಸಿದ ಪ್ರವಾಸಿಗರ ಸಂತಸ ಕ್ಷಣಿಕವಾಗಿತ್ತು. ಈ  ಪಿಚ್‌ನಲ್ಲಿ ಬ್ಯಾಟರ್‌ಗಳು ನೆಲೆಯೂರುವ ಸಾಧ್ಯತೆ ಇರಲಿಲ್ಲ. ಈ ಬಾರಿ ಜಡೇಜ ದಾಳಿಗೆ ಪ್ರವಾಸಿ ತಂಡ ಕುಸಿಯಿತು. ಮೊದಲ ದಿನ ಬೂಮ್ರಾ ದಾಳಿಯೆದುರು ಹಿನ್ನೆಲೆಗೆ ಸರಿದಿದ್ದ 36 ವರ್ಷ ವಯಸ್ಸಿನ ಜಡೇಜ ಈ ಬಾರಿ ಎದುರಾಳಿಗಳ ಕುಸಿತಕ್ಕೆ ಕಾರಣರಾದರು.

ಕೊನೆಯದಾಗಿ ದಾಳಿಗಿಳಿದು ಒಂದೇ ಸ್ಪೆಲ್‌ನಲ್ಲಿ 13 ಓವರುಗಳಲ್ಲಿ 29 ರನ್ನಿಗೆ 4 ವಿಕೆಟ್ ಪಡೆದು ಪಂದ್ಯ ಭಾರತದ ಕಡೆ ವಾಲುವಂತೆ ಮಾಡಿದರು. ಚೆಂಡಿಗೆ ತುಂಬಾ ಟರ್ನ್‌ ಪಡೆಯುವ ಬೌಲರ್ ಅವರಲ್ಲದಿದ್ದರೂ ಪಿಚ್‌ ಅರ್ಥೈಸಿ ಬೌಲಿಂಗ್ ಮಾಡುವ ಜಾಣ್ಮೆ ಅವರಿಗೆ ಕರಗತ.

ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಅಜೇಯ 29 ರನ್ ಗಳಿಸಿದ್ದಾರೆ. ಆದರೆ ಇನ್ನೊಂದು ಬದಿಯಲ್ಲಿದ್ದ ಬ್ಯಾಟರ್‌ಗಳಿಂದ ಸ್ವಲ್ಪವೂ ಬೆಂಬಲ ದೊರೆಯಲಿಲ್ಲ. ಭಾರತಕ್ಕೆ ಕಡೇಪಕ್ಷ ನೂರಕ್ಕಿಂತ ಹೆಚ್ಚು ರನ್‌ಗಳ ಗುರಿಯನ್ನಿಡುವ ಉದ್ದೇಶ ಪ್ರವಾಸಿ ತಂಡಕ್ಕೆ ಇದ್ದಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.