ADVERTISEMENT

ವಿಶ್ವದಾಖಲೆ | ಕಡಿಮೆ ಎಸೆತಗಳಲ್ಲಿ ಮುಗಿಯಿತು ದಕ್ಷಿಣ ಆಫ್ರಿಕಾ–ಭಾರತ ಪಂದ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜನವರಿ 2024, 14:59 IST
Last Updated 4 ಜನವರಿ 2024, 14:59 IST
<div class="paragraphs"><p>ಪಂದ್ಯದ ಬಳಿಕ ಕೈಕುಲುಕಿದ ಉಭಯ ತಂಡಗಳ ಆಟಗಾರರು</p></div>

ಪಂದ್ಯದ ಬಳಿಕ ಕೈಕುಲುಕಿದ ಉಭಯ ತಂಡಗಳ ಆಟಗಾರರು

   

ಪಿಟಿಐ ಚಿತ್ರ

ಕೇಪ್‌ಟೌನ್‌: ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಭಾರತ ಕ್ರಿಕೆಟ್‌ ತಂಡಗಳ ನಡುವಣ ಟೆಸ್ಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಅಪರೂಪದ ವಿಶ್ವದಾಖಲೆ ನಿರ್ಮಾಣವಾಯಿತು. ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ಕಡಿಮೆ ಎಸೆತಗಳಲ್ಲಿ ಮುಕ್ತಾಯವಾದ ಪಂದ್ಯ ಇದಾಯಿತು.

ADVERTISEMENT

ಇಲ್ಲಿನ ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದಲ್ಲಿ ಬುಧವಾರವಷ್ಟೇ ಆರಂಭವಾದ ಈ ಪಂದ್ಯವು, ವೇಗಿಗಳ ಭರಾಟೆಯಲ್ಲಿ ಕೇವಲ ಒಂದೂವರೆ ದಿನದಲ್ಲೇ ಮುಕ್ತಾಯವಾಯಿತು. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆಫ್ರಿಕನ್ನರು ಮೊದಲು ಇನಿಂಗ್ಸ್‌ನಲ್ಲಿ 55 ರನ್‌ಗಳಿಗೆ ಸರ್ವಪತನ ಕಂಡರು. ಇದಕ್ಕುತ್ತರವಾಗಿ ಭಾರತ 153 ರನ್‌ ಕಲೆಹಾಕಲಷ್ಟೇ ಶಕ್ತವಾಯಿತು.

98 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಆತಿಥೇಯ ತಂಡ, ಏಡನ್‌ ಮಾರ್ಕ್ರಂ ಗಳಿಸಿದ ಸಾಹಸಮಯ ಶತಕದ (106 ರನ್‌) ಹೊರತಾಗಿಯೂ 176 ರನ್‌ಗಳಿಗೆ ಗಂಟುಮೂಟೆ ಕಟ್ಟಿತು. 78 ರನ್‌ಗಳ ಸುಲಭ ಗುರಿ ಬೆನ್ನತ್ತಿದ ರೋಹಿತ್‌ ಶರ್ಮಾ ಬಳಗ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಜಯದ ನಗೆ ಬೀರಿತು.

ಇದರೊಂದಿಗೆ ಎರಡು ಪಂದ್ಯಗಳ ಸರಣಿಯನ್ನು 1–1 ಅಂತರದಲ್ಲಿ ಸಮಬಲ ಮಾಡಿಕೊಂಡ ಟಿಂ ಇಂಡಿಯಾ, ಹೊಸ ವರ್ಷದ ಸಂಭ್ರಮವನ್ನು ಗೆಲುವಿನೊಂದಿಗೆ ಆಚರಿಸಿತು.

ವಿಶ್ವದಾಖಲೆ
ಕೇಪ್‌ಟೌನ್ ಟೆಸ್ಟ್‌ ಪಂದ್ಯವು ಮೊದಲ ದಿನ, ಭಾರತ ತಂಡದ ಆರು ಬ್ಯಾಟರ್‌ಗಳು ಶೂನ್ಯಕ್ಕೆ ಔಟಾದ ಹಾಗೂ ಕೊನೆಯ ಆರು ಬ್ಯಾಟರ್‌ಗಳು ತಂಡದ ಮೊತ್ತಕ್ಕೆ ಹೆಚ್ಚುವರಿಯಾಗಿ ಒಂದೂ ರನ್‌ ಸೇರಿಸದೆ ಔಟಾಗಿದ್ದ ಕ್ಷಣಗಳಿಗೆ ಸಾಕ್ಷಿಯಾಗಿತ್ತು.

ಇದೀಗ ಎರಡನೇ ದಿನವೇ ಫಲಿತಾಂಶ ಕಾಣುವ ಮೂಲಕ ಮತ್ತೊಂದು ಅಪರೂಪದ ದಾಖಲೆಗೆ ವೇದಿಕೆಯಾಯಿತು.

ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮೊದಲ ಇನಿಂಗ್ಸ್‌ 23.2 ಓವರ್‌ಗಳಲ್ಲಿ ಕೊನೆಗೊಂಡರೆ, ಭಾರತದ ಇನಿಂಗ್ಸ್‌ 34.5 ಓವರ್‌ಗಳಲ್ಲಿ ಅಂತ್ಯವಾಯಿತು. ಆತಿಥೇಯರು ಎರಡನೇ ಇನಿಂಗ್ಸ್‌ನಲ್ಲಿ 36.5 ಓವರ್‌ ಆಡಿದರೆ, ಭಾರತ ಗುರಿ ಮುಟ್ಟಲು ಕೇವಲ 12 ಓವರ್‌ ತೆಗೆದುಕೊಂಡಿತು.

ಹೀಗಾಗಿ ಈ ಪಂದ್ಯವು 107 ಓವರ್‌ಗಳಲ್ಲೇ (642 ಎಸೆತಗಳ್ಲಲೇ) ಫಲಿತಾಂಶ ಕಂಡಂತಾಯಿತು. ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಈ ಹಿಂದೆ ಇಷ್ಟು ಕಡಿಮೆ ಎಸೆತಗಳಲ್ಲಿ ಯಾವುದೇ ಪಂದ್ಯ ಮುಗಿದಿಲ್ಲ.

1932ರಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ನಡುವಣ ಪಂದ್ಯವು 656 ಎಸೆತಗಳಲ್ಲಿ ಪೂರ್ಣಗೊಂಡಿತ್ತು. ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿತ್ತು. 1935ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಇಂಗ್ಲೆಂಡ್‌ ಜಯ ಗಳಿಸಿದ್ದ ಪಂದ್ಯವು ಕೇವಲ 672 ಎಸೆತಗಳಲ್ಲಿ ಮುಗಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.