ADVERTISEMENT

SL vs IND, 2nd ODI | ದೀಪಕ್ ಚಾಹರ್ ಕೊಟ್ಟ ಜಯದ ಕಾಣಿಕೆ: ಭಾರತಕ್ಕೆ ಸರಣಿ

ಪಿಟಿಐ
Published 20 ಜುಲೈ 2021, 20:37 IST
Last Updated 20 ಜುಲೈ 2021, 20:37 IST
ಭಾರತದ ಆಟಗಾರರ ಸಂಭ್ರಮದ ಕ್ಷಣ (ಎಎಫ್‌ಪಿ)
ಭಾರತದ ಆಟಗಾರರ ಸಂಭ್ರಮದ ಕ್ಷಣ (ಎಎಫ್‌ಪಿ)   

ಕೊಲಂಬೊ (): ಅಜೇಯ ಅರ್ಧಶತಕ ಬಾರಿಸಿದ ದೀಪಕ್ ಚಾಹರ್ ಭಾರತ ತಂಡಕ್ಕೆ ಸರಣಿ ಗೆಲುವಿನ ಸಂತಸ ಉಣಬಡಿಸಿದರು. ಶ್ರೀಲಂಕಾ ತಂಡದ ಗೆಲುವಿನ ಆಸೆಗೆ ತಣ್ಣೇರೆರಚಿದರು.

ಪ್ರೇಮದಾಸ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಏಕದಿನ ಪಂದ್ಯದಲ್ಲಿ ಭಾರತ ತಂಡವು 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 2–0ಯಿಂದ ಕೈವಶ ಮಾಡಿಕೊಂಡಿತು.

ಟಾಸ್ ಗೆದ್ದ ಶ್ರೀಲಂಕಾ ತಂಡವು ಮೊದಲು ಬ್ಯಾಟಿಂಗ್ ಮಾಡಿತು. 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 275 ರನ್ ಗಳಿಸಿ, ಕಠಿಣ ಸವಾಲೊಡ್ಡಿತ್ತು. ಈ ಗುರಿಯನ್ನು ಬೆನ್ನತ್ತಿದ ಭಾರತವು ದೀಪಕ್ ಚಾಹರ್ (ಔಟಾಗದೆ 69; 82ಎ, 7ಬೌಂ, 1ಸಿ) ಅವರ ದಿಟ್ಟ ಬ್ಯಾಟಿಂಗ್ ಬಲದಿಂದ 49.1 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 277 ರನ್‌ ಗಳಿಸಿತು.

ADVERTISEMENT

ಬೌಲಿಂಗ್‌ನಲ್ಲಿಯೂ ಮಿಂಚಿದ್ದ ದೀಪಕ್ ಎರಡು ವಿಕೆಟ್ ಗಳಿಸಿದ್ದರು. ಅವರು ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಬಂದಾಗ ತಂಡವು ಗೆಲುವಿನಿಂದ ಇನ್ನೂ ಬಹಳ ದೂರದಲ್ಲಿತ್ತು. ಕ್ರೀಸ್‌ನಲ್ಲಿದ್ದ ಕೃಣಾಲ್ ಪಾಂಡ್ಯ (35 ರನ್) ಅವರೊಂದಿಗೆ ಸೇರಿದ ದೀಪಕ್ ಬೌಲರ್‌ಗಳಿಗೆ ತಿರುಗೇಟು ನೀಡಿದರು. ಸುಲಭ ಜಯದ ಕನಸು ಕಾಣುತ್ತಿದ್ದ ಆತಿಥೇಯರಿಗೆ ಸೋಲಿನತ್ತ ತಳ್ಳಿದರು.

ಏಳನೇ ವಿಕೆಟ್‌ಗೆ ದೀಪಕ್ ಮತ್ತು ಕೃಣಾಲ್ 33 ರನ್ ಸೇರಿಸಿದರು. ಕೃಣಾಲ್ 36ನೇ ಓವರ್‌ನಲ್ಲಿ ಔಟಾದರು. ದೀಪಕ್ ಜೊತೆಗೂಡಿದ ಭುವನೇಶ್ವರ್ ಕುಮಾರ್ (ಔಟಾಗದೆ 19) ತಂಡವನ್ನು ಜಯದ ದಡಕ್ಕೆ ಸೇರಿಸಿದರು. ಇಬ್ಬರೂ ಸಮಾಧಾನಚಿತ್ತದಿಂದ ಬ್ಯಾಟಿಂಗ್ ಮಾಡಿದರು.

ಹೆಚ್ಚು ಎಸೆತಗಳನ್ನು ಆಡಿದರು. ಇದರಿಂದಾಗಿ ವಿಕೆಟ್ ಪತನವಾಗದಂತೆ ತಡೆದರು. ಕೊನೆಯ ಓವರ್‌ನಲ್ಲಿ ತಂಡಕ್ಕೆ ಜಯ ಒಲಿಯಿತು.

ಸೂರ್ಯ ಅರ್ಧಶತಕ: ಸರಣಿಯ ಮೊದಲ ಪಂದ್ಯದಲ್ಲಿ ಮಿಂಚಿದ್ದ ನಾಯಕ ಶಿಖರ್ ಧವನ್ ಮತ್ತು ಇಶಾನ್ ಕಿಶನ್ ಈ ಪಂದ್ಯದಲ್ಲಿ ಹೆಚ್ಚು ರನ್‌ ಹೊಡೆಯಲಿಲ್ಲ. ಆರಂಭಿಕ ಪೃಥ್ವಿ ಶಾ ಕೂಡ ವೈಫಲ್ಯ ಅನುಭವಿಸಿದರು.

ಮನೀಷ್ ಪಾಂಡೆ (37ರನ್) ಮತ್ತು ಸೂರ್ಯಕುಮಾರ್ ಯಾದವ್ (53 ರನ್) ಅವರು ಇನಿಂಗ್ಸ್‌ಗೆ ಬಲ ತುಂಬುವ ಪ್ರಯತ್ನ ಮಾಡಿದರು. ಪಾಂಡೆ 18ನೇ ಓವರ್‌ನಲ್ಲಿ ರನ್‌ಔಟ್ ಆದರು. ಆಗ ಕ್ರೀಸ್‌ಗೆ ಬಂದ ಹಾರ್ದಿಕ್ ಖಾತೆಯನ್ನೇ ತೆರೆಯದೇ ನಿರ್ಗಮಿಸಿದರು.

ಚಾಹಲ್ ಮೋಡಿ: ಆರಂಭಿಕ ಜೋಡಿ ಅವಿಷ್ಕಾ ಫರ್ನಾಂಡೊ (50; 71ಎ) ಮತ್ತು ಮಿನೋದ್ ಭಾನುಕಾ (36; 42ಎ) ಅವರು ಉತ್ತಮ ಅಡಿಪಾಯ ಹಾಕಿದರು. ಮೊದಲ ವಿಕೆಟ್ ಗೆ 77 ರನ್ ಸೇರಿಸಿದ್ದ ಇವರಿಬ್ಬರ ಜೊತೆಯಾಟವನ್ನು ಸ್ಪಿನ್ನರ್ ಯಜುವೇಂದ್ರ ಚಾಹಲ್ 14ನೇ ಓವರ್‌ನಲ್ಲಿ ಮುರಿದರು. ಈ ಓವರ್‌ನ ಎರಡನೇ ಎಸೆತದಲ್ಲಿ ಭಾನುಕಾ ಹೊಡೆದ ಚೆಂಡನ್ನು ಮನೀಷ್ ಪಾಂಡೆ ಕ್ಯಾಚ್ ಮಾಡಿದರು. ನಂತರದ ಎಸೆತದಲ್ಲಿಯೇ ಚಾಹಲ್ ಅವರು ರಾಜಪಕ್ಷ ವಿಕೆಟ್‌ ಕೂಡ ಗಳಿಸಿದರು.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಸಲೆಂಕಾ (65; 68ಎ) ಅವರು ಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿದರು. ಕೆಳಕ್ರಮಾಂಕದಲ್ಲಿ ಆಡಿದ ಕರುಣಾರತ್ನೆ (ಔಟಾಗದೆ 44) ಕೂಡ ಮಿಂಚಿದರು. ಏಳನೇ ವಿಕೆಟ್ ಜೊತೆಯಾಟದಲ್ಲಿ ಅಸಲೆಂಕಾ ಅವರೊಂದಿಗೆ 50 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ತಂಡವು ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಯಿತು.

ಸ್ಕೋರ್‌ ಕಾರ್ಡ್‌

ಶ್ರೀಲಂಕಾ 9ಕ್ಕೆ 275 (50 ಓವರ್‌)

ಆವಿಷ್ಕ ಸಿ ಕೃಣಾಲ್‌ ಬಿ ಭುವನೇಶ್ವರ್‌ 50 (71 ಎ, 4x4, 6x1), ಮಿನೋದ್ ಸಿ ಪಾಂಡೆ ಬಿ ಚಾಹಲ್‌ 36 (42 ಎ, 4x6),

ರಾಜಪಕ್ಷ ಸಿ ಕಿಶನ್‌ ಬಿ ಚಾಹಲ್‌ 0(1ಎ), ಧನಂಜಯ ಸಿ ಧವನ್‌ ಬಿ ದೀಪಕ್‌ 32 (45 ಎ, 4x1), ಅಸ್ಲೆಂಕಾ ಸಿ ಪಡಿಕ್ಕಲ್‌ (ಬದಲಿ) ಬಿ ಭುವನೇಶ್ವರ್‌ 65(68ಎ, 4x6), ಶನಕ ಬಿ ಚಾಹಲ್ 16 (24 ಎ, 4x1), ವನಿಂದು ಬಿ ದೀಪಕ್‌ 8 (11 ಎ, 4x1), ಚಾಮಿಕಾ ಔಟಾಗದೆ 44 (33 ಎ, 4x5) ದುಷ್ಮಂತ್‌ ಸಿ ಪಡಿಕ್ಕಲ್ (ಬದಲಿ) ಬಿ ಭುವನೇಶ್ವರ್ 2 (5ಎ), ಸಂಡಗನ್‌ ರನ್‌ ಔಟ್‌ 0(1 ಎ,) ಕಸುನ್‌ ಔಟಾಗದೆ 1 (1ಎ).

ಇತರೆ (ಲೆಗ್ ಬೈ 6, ನೋಬಾಲ್ 2, ವೈಡ್ 13) 21.

ವಿಕೆಟ್ ಪತನ: 1-77 (ಮಿನೋದ್ ಭಾನುಕಾ, 13.2), 2-77 (ಭಾನುಕ ರಾಜಪಕ್ಷ, 13.3), 3-124 (ಆವಿಷ್ಕ ಫರ್ನಾಂಡೊ, 24.6), 4-134 (ಧನಂಜಯ ಡಿಸಿಲ್ವಾ, 27.2), 5-172 (ದಸುನ್ ಶನಕ, 35.2), 6-194 (ವನಿಂದು ಹಸರಂಗ, 39.1), 7-244 (ಚರಿತ ಅಸ್ಲೆಂಕಾ, 47.1), 8-264 (ದುಷ್ಮಂತ ಚಮೀರ, 49.1), 9-266(ಲಕ್ಷಣ್ ಸಂಡಗನ್‌, 49.3)

ಬೌಲಿಂಗ್‌: ಭುವನೇಶ್ವರ್ಕುಮಾರ್ 10–0–54–3, ದೀಪಕ್ ಚಾಹರ್‌8–0–53–2, ಹಾರ್ದಿಕ್ ಪಾಂಡ್ಯ 4–0–20–0, ಯಜುವೇಂದ್ರ ಚಾಹಲ್ 10–1–50–3, ಕುಲದೀಪ್ ಯಾದವ್ 10–0–55–0, ಕೃಣಾಲ್ ಪಾಂಡ್ಯ 8–0–37–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.