ADVERTISEMENT

ಟೀಮ್ ಇಂಡಿಯಾ ಆರಂಭಿಕ ಆಟಗಾರ ಇಶಾನ್ ಕಿಶನ್ ತಲೆಗೆ ಏಟು: ಆಸ್ಪತ್ರೆಗೆ ದಾಖಲು

ಪಿಟಿಐ
Published 27 ಫೆಬ್ರುವರಿ 2022, 6:55 IST
Last Updated 27 ಫೆಬ್ರುವರಿ 2022, 6:55 IST
ಇಶಾನ್ ಕಿಶನ್ - ಪಿಟಿಐ ಚಿತ್ರ
ಇಶಾನ್ ಕಿಶನ್ - ಪಿಟಿಐ ಚಿತ್ರ   

ಧರ್ಮಶಾಲ: ಟೀಮ್ ಇಂಡಿಯಾ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ಅವರ ತಲೆಗೆ ಏಟಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಾಗಿ ಇಂದು ಶ್ರೀಲಂಕಾ ವಿರುದ್ಧ ನಡೆಯಲಿರುವ ಕೊನೆಯ ಟ್ವೆಂಟಿ–20 ಪಂದ್ಯಕ್ಕೆ ಅವರು ಲಭ್ಯರಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಅವರ ಮಿದುಳಿನ ಸ್ಕ್ಯಾನಿಂಗ್ ನಡೆಸಲಾಗಿದ್ದು, ವರದಿ ಇನ್ನಷ್ಟೇ ದೊರೆಯಬೇಕಿದೆ.

ಶ್ರೀಲಂಕಾ ವಿರುದ್ಧದ ಎರಡನೇ ಟ್ವೆಂಟಿ–20 ಪಂದ್ಯ ಧರ್ಮಶಾಲದಲ್ಲಿ ಶನಿವಾರ ನಡೆದಿತ್ತು. ಇಶಾನ್ ಕಿಶನ್ ಅವರು 15 ಎಸೆತ ಎದುರಿಸಿ 16 ರನ್ ಗಳಿಸಿದ್ದರು. ನಾಲ್ಕನೇ ಓವರ್‌ನಲ್ಲಿ ಲಹಿರು ಕುಮಾರ ಅವರ ಬೌನ್ಸರ್ ಎಸೆತವೊಂದು ಇಶಾನ್ ಅವರ ಹೆಲ್ಮೆಟ್‌ಗೆ ಬಡಿದಿತ್ತು. ಕೂಡಲೇ ಅವರು ಹೆಲ್ಮೆಟ್ ತೆಗೆದು ನೋವು ತೋಡಿಕೊಂಡಿದ್ದರು. ಕೂಡಲೇ ಟೀಮ್ ಇಂಡಿಯಾದ ವೈದ್ಯಕೀಯ ತಂಡ ಮೈದಾನಕ್ಕೆ ತೆರಳಿ ಪರಿಶೀಲನೆ ನಡೆಸಿತ್ತು. ಪಂದ್ಯದ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ADVERTISEMENT

‘ಇಶಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಿದುಳಿನ ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಆಸ್ಪತ್ರೆಯಲ್ಲೇ ಉಳಿಸಿಕೊಳ್ಳಲಾಗಿದೆ’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳು ತಿಳಿಸಿವೆ.

ಸ್ಕ್ಯಾನಿಂಗ್ ವರದಿ ದೊರೆತ ಬಳಿಕ ಅವರನ್ನು ತಂಡವಿರುವ ಹೋಟೆಲ್‌ಗೆ ಕರೆದೊಯ್ಯುವ ಸಾಧ್ಯತೆ ಇದೆ.

ಇಂದು (ಭಾನುವಾರ) ನಡೆಯಲಿರುವ ಪಂದ್ಯಕ್ಕೆ ಇಶಾನ್ ಗೈರಾದಲ್ಲಿ ಮಯಂಕ್ ಅಗರ್‌ವಾಲ್ ಅಥವಾ ವೆಂಕಟೇಶ ಅಯ್ಯರ್ ನಾಯಕ ರೋಹಿತ್ ಜತೆ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಸೂರ್ಯಕುಮಾರ್ ಯಾದವ್, ದೀಪಕ್ ಚಾಹರ್ ಗಾಯದ ಕಾರಣ ಟೂರ್ನಿಯಲ್ಲಿ ತಂಡದಿಂದ ಹೊರಗುಳಿದಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ವಿಶ್ರಾಂತಿಯಲ್ಲಿದ್ದಾರೆ.

ಶ್ರಿಲಂಕಾ ವಿರುದ್ಧ ಶನಿವಾರ ನಡೆದ ಎರಡನೇ ಟ್ವೆಂಟಿ–20 ಪಂದ್ಯವನ್ನು ಟೀಮ್ ಇಂಡಿಯಾ ಏಳು ವಿಕೆಟ್ ಅಂತರದಿಂದ ಗೆದ್ದುಕೊಂಡಿದ್ದು, ಸರಣಿಯನ್ನು 2–0 ಅಂತರದಿಂದ ತನ್ನದಾಗಿಸಿಕೊಂಡಿದೆ. ರೋಹಿತ್ ಶರ್ಮಾ ಅವರು ಪೂರ್ಣಾವಧಿ ನಾಯಕನಾದ ಬಳಿಕ ಭಾರತವು ಗೆದ್ದುಕೊಂಡ ಮೂರನೇ ಸರಣಿ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.