ADVERTISEMENT

ಶ್ರಿಲಂಕಾ ವಿರುದ್ಧ ಟಿ20 ಸರಣಿಯ ಅಂತಿಮ ಪಂದ್ಯ ಇಂದು: ‘ವೈಟ್‌ವಾಷ್‌’ಗೆ ಭಾರತ ಕಾತರ

ಪಿಟಿಐ
Published 29 ಡಿಸೆಂಬರ್ 2025, 23:30 IST
Last Updated 29 ಡಿಸೆಂಬರ್ 2025, 23:30 IST
<div class="paragraphs"><p>ಶಫಾಲಿ ವರ್ಮಾ</p></div>

ಶಫಾಲಿ ವರ್ಮಾ

   

ತಿರುವನಂತಪುರ: ಭಾರತ ತಂಡವು, ಆಕ್ರಮಣಕಾರಿ ಆಟವನ್ನು ಮುಂದುವರಿಸಿ ಐದನೇ ಹಾಗೂ ಕೊನೆಯ ಪಂದ್ಯ ಗೆದ್ದು, ಶ್ರೀಲಂಕಾ ವಿರುದ್ಧ ಟಿ20 ಸರಣಿಯನ್ನು 5–0 ಯಿಂದ ‘ವೈಟ್‌ವಾಷ್‌’ ಮಾಡುವ ಉತ್ಸಾಹದಲ್ಲಿದೆ. ಪ್ರವಾಸಿ ತಂಡಕ್ಕೆ ಸರಣಿಯಲ್ಲಿ ಸಮಾಧಾನಕರ ಜಯ ಪಡೆಯಲು ಇದು ಕೊನೆಯ ಅವಕಾಶವೂ ಆಗಿದೆ.

ಈ ಸರಣಿಯು ಭಾರತಕ್ಕೆ, ಮುಂದಿನ ಜೂನ್‌–ಜುಲೈ ತಿಂಗಳಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟಿ20 ಮಹಿಳಾ ವಿಶ್ವಕಪ್‌ಗೆ ಸಿದ್ದತೆಯ ಭಾಗವಾಗಿದೆ. ನಂತರ ಭಾರತವು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ತಲಾ ಮೂರು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದ್ದು, ಬಳಿಕ ವಿಶ್ವಕಪ್‌ ಕಣಕ್ಕೆ ಇಳಿಯಲಿದೆ.

ADVERTISEMENT

2024ರ ಟಿ20 ವಿಶ್ವಕಪ್‌ನಲ್ಲಿ ಭಾರತ ಗುಂಪು ಹಂತದಲ್ಲಿಯೇ ಹೊರಬಿದ್ದಿತ್ತು. ನಂತರ ಭಾರತ ಚುಟುಕು ಮಾದರಿಯಲ್ಲಿ ಆಕ್ರಮಣದ ಆಟಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಈ ವರ್ಷ ಎರಡು ಸರಣಿಗಳನ್ನೂ ಜಯಿಸಿದೆ.

‘ಇದು ನಮ್ಮ ಪಾಲಿಗೆ ಮಹತ್ವದ ಸರಣಿಯಾಗಿದೆ. ಟಿ20 ಪಂದ್ಯಗಲ್ಲಿ ನಾವು ಹೆಚ್ಚು ಆಕ್ರಮಣಕಾರಿಯಾಗಿ ಆಡಿ ನಮ್ಮ ಆಟದ ಮಟ್ಟ ಎತ್ತರಿಸಬೇಕೆಂದು ವಿಶ್ವಕಪ್ ನಂತರ ಚರ್ಚಿಸಿದ್ದೆವು’ ಎಂದು ನಾಯಕಿ ಹರ್ಮನ್‌ಪ್ರೀತ್ ಕೌರ್ ಸರಣಿ ಗೆದ್ದ ಬಳಿಕ ಹೇಳಿದ್ದರು.

ಭಾರತ ಅಧಿಕಾರಯುತ ಜಯಗಳಿಸುವಲ್ಲಿ ಬೌಲರ್‌ಗಳದ್ದೇ ಪಾತ್ರವೇ ಪ್ರಮುಖವಾಗಿದೆ. ಬ್ಯಾಟರ್‌ಗಳಿಗೆ ಸವಾಲಿನ ಗುರಿ ಎದುರಾಗುತ್ತಿರಲಿಲ್ಲ. ಬ್ಯಾಟರ್‌ಗಳ ಪೈಕಿ ಶಫಾಲಿ ವರ್ಮಾ ಸತತ ಮೂರು ಅರ್ಧ ಶತಕಗಳ ಮೂಲಕ ಪ್ರಭಾವಶಾಲಿ ಎನಿಸಿದ್ದಾರೆ.

ಆದರೆ ಫೀಲ್ಡಿಂಗ್‌ನಲ್ಲಿ ಮಾತ್ರ ತಂಡ ಎಡವುತ್ತಿದೆ. ಮೊದಲ ಪಂದ್ಯದಲ್ಲಿ ನಾಲ್ಕು ಕ್ಯಾಚುಗಳನ್ನು ಕೈಬಿಟ್ಟರೆ, ನಾಲ್ಕನೇ ಪಂದ್ಯದಲ್ಲಿ ಎರಡು ಸುಲಭ ಕ್ಯಾಚುಗಳ ಜೊತೆ ಸ್ಟಂಪಿಂಗ್ ಅವಕಾಶ ಕೈಚೆಲ್ಲಿತ್ತು.

ಸರಣಿಯಲ್ಲಿ ಭಾರತಕ್ಕೆ ಸಾಕಷ್ಟು ಸಕಾರಾತ್ಮಕ ಅಂಶಗಳಿವೆ. ವೇಗಿ ರೇಣುಕಾಸಿಂಗ್ ದೀರ್ಘಕಾಲದ ನಂತರ ತಂಡಕ್ಕೆ ಯಶಸ್ವಿ ಪುನರಾಗಮನ ಮಾಡಿದ್ದಾರೆ. ಸ್ಪಿನ್ನರ್ ದೀಪ್ತಿ ಶರ್ಮಾ ಎಂದಿನಂತೆ ಸ್ಥಿರ ಪ್ರದರ್ಶನ ನೀಡಿದ್ದಾರೆ. ಸರಣಿಯ ವೇಳೆ ಪದಾರ್ಪಣೆ ಮಾಡಿದ 20 ವರ್ಷ ವಯಸ್ಸಿನ ಎಡಗೈ ಸ್ಪಿನ್ನರ್ ವೈಷ್ಣವಿ ಶರ್ಮಾ ನಿರಾಸೆ ಮೂಡಿಸಿಲ್ಲ. 5.73ರ ಇಕಾನಮಿಯಲ್ಲಿ ನಾಲ್ಕು ವಿಕೆಟ್ ಪಡೆದಿದ್ದಾರೆ. ಸ

ಉಪನಾಯಕಿ ಸ್ಮೃತಿ ಮಂದಾನ ನಾಲ್ಕನೇ ಒಂದ್ಯದಲ್ಲಿ 48 ಎಸೆತಗಳಲ್ಲಿ 80 ರನ್ ಬಾಚುವ ಮೂಲಕ ಲಯಕ್ಕೆ ಮರಳಿದ್ದಾರೆ. ರಿಚಾ ಘೋಷ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಿದ್ದೂ ಫಲ ನೀಡಿದೆ. ಅವರು ಕೇವಲ 16 ಎಸೆತಗಳಲ್ಲಿ 40 ರನ್ ಬಾರಿಸಿದರು.

ನಾಲ್ಕನೇ ಪಂದ್ಯದ ವೇಳೆ ಭಾರತ ಮತ್ತು ಶ್ರೀಲಂಕಾ ತಂಡಗಳು ಟಿ20ಯಲ್ಲಿ ತಮ್ಮ ಅತ್ಯಧಿಕ ಮೊತ್ತ ದಾಖಲಿಸಿದವು. ಭಾರತ 2 ವಿಕೆಟ್‌ಗೆ 221 ರನ್ ಬಾರಿಸಿದರೆ, ಶ್ರೀಲಂಕಾ 6 ವಿಕೆಟ್‌ಗೆ 191 ರನ್ ಬಾರಿಸಿತ್ತು.

ಶ್ರೀಲಂಕಾದ ಪ್ರಮುಖ ಆಟಗಾರ್ತಿ ಚಾಮರಿ ಅಟಪಟ್ಟು ವಿಫಲರಾಗಿದ್ದು ತಂಡಕ್ಕೆ ಹಿನ್ನಡೆಯಾಗಿದೆ. ಆದರೆ ಈ ಹಿಂದಿನ ಪಂದ್ಯದಲ್ಲಿ ಅವರು 37 ಎಸೆತಗಳಲ್ಲಿ 52 ರನ್ ಬಾರಿಸಿದ್ದಾರೆ. ಅವರಿಗೆ ಇತರ ಆಟಗಾರ್ತಿಯರು ಬೆಂಬಲ ನೀಡಬಹುದೆಂಬ ವಿಶ್ವಾದಲ್ಲಿ ಲಂಕಾ ಇದೆ.

ಪಂದ್ಯ ಆರಂಭ: ರಾತ್ರಿ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.