ADVERTISEMENT

IND vs WI 1st Test: ಬೌಲರ್‌ಗಳ ಮೇಲುಗೈ;ಊಟದ ವಿರಾಮಕ್ಕೆ ವಿಂಡೀಸ್ 5 ವಿಕೆಟ್ ಪತನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಅಕ್ಟೋಬರ್ 2025, 6:17 IST
Last Updated 2 ಅಕ್ಟೋಬರ್ 2025, 6:17 IST
<div class="paragraphs"><p>ಟೀಮ್ ಇಂಡಿಯಾ ಆಟಗಾರರ ಸಂಭ್ರಮ</p></div>

ಟೀಮ್ ಇಂಡಿಯಾ ಆಟಗಾರರ ಸಂಭ್ರಮ

   

(ಚಿತ್ರ ಕೃಪೆ: ಬಿಸಿಸಿಐ)

ಅಹಮದಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ ಭಾರತೀಯ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ.

ADVERTISEMENT

ಮೊದಲ ದಿನದ ಊಟದ ವಿರಾಮದ ಹೊತ್ತಿಗೆ 23.2 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿದ್ದು, ಸಂಕಷ್ಟದಲ್ಲಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ದಿನದ ಮೊದಲ ಅವಧಿಯಲ್ಲೇ ವಿಂಡೀಸ್ ಬ್ಯಾಟರ್‌ಗಳನ್ನು ಭಾರತೀಯ ಬೌಲರ್‌ಗಳು ಕಟ್ಟಿ ಹಾಕಿದರು.

ವಿಂಡೀಸ್ ಆರಂಭಿಕರು ನಿರಾಸೆ ಮೂಡಿಸಿದರು. ಜಾನ್ ಕ್ಯಾಂಪ್‌ಬೆಲ್ ಎಂಟು ಹಾಗೂ ತೇಜ್‌ನಾರಾಯಣ್ ಚಂದ್ರಪಾಲ್ ಶೂನ್ಯಕ್ಕೆ ಔಟ್ ಆದರು. ಅಲಿಕ್ ಅಥಾಂಜೆ 12 ಹಾಗೂ ಶಾಯಿ ಹೋಪ್ 26 ರನ್ ಗಳಿಸಿ ಪೆವಿಲಿನ್‌ಗೆ ಮರಳಿದರು.

ಭಾರತದ ಪರ ನಿಖರ ದಾಳಿ ಸಂಘಟಿಸಿದ ಮೊಹಮ್ಮದ್ ಸಿರಾಜ್ ಮೂರು ಮತ್ತು ಜಸ್‌ಪ್ರೀತ್ ಬೂಮ್ರಾ ಹಾಗೂ ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಗಳಿಸಿದರು.

ಟಾಸ್ ಗೆದ್ದ ವಿಂಡೀಸ್ ಬ್ಯಾಟಿಂಗ್ ಆಯ್ಕೆ...

ಈ ಮೊದಲು ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ರೋಸ್ಟನ್ ಚೇಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದೆ.

ಇಂಗ್ಲೆಂಡ್ ಪ್ರವಾಸದಲ್ಲಿ ಅಮೋಘ ಪ್ರದರ್ಶನದ ಬಳಿಕ ತವರಿನಲ್ಲಿ ವಿಂಡೀಸ್ ಸವಾಲು ಭಾರತಕ್ಕೆ ಎದುರಾಗಿದೆ.

ಈಗಾಗಲೇ ನಾಯಕತ್ವ ಜೊತೆಗೆ ಬ್ಯಾಟಿಂಗ್‌ನಲ್ಲೂ ಸೈ ಎನಿಸಿರುವ ಶುಭಮನ್ ಗಿಲ್, ವಿಂಡೀಸ್ ವಿರುದ್ಧದ ಸರಣಿಯಲ್ಲಿ ಗೆಲುವಿನ ಆತ್ಮವಿಶ್ವಾಸದಲ್ಲಿದ್ದಾರೆ.

ಯಶಸ್ವಿ ಜೈಸ್ವಾಲ್ ಹಾಗೂ ಕೆ.ಎಲ್. ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ನಾಯಕ ಗಿಲ್ ಜೊತೆಗೆ ಸಾಯಿ ಸುದರ್ಶನ್, ಧ್ರುವ್ ಜುರೇಲ್ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ.

ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್ ಹಾಗೂ ನಿತೀಶ್ ರೆಡ್ಡಿ ತಂಡದಲ್ಲಿರುವ ಆಲ್‌ರೌಂಡರ್ ಆಟಗಾರರಾಗಿದ್ದಾರೆ.

ಜಸ್‌ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಏಷ್ಯಾ ಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಕುಲದೀಪ್ ಯಾದವ್ ಸಹ ತಂಡದಲ್ಲಿದ್ದಾರೆ.

ವಿಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವು ಅಕ್ಟೋಬರ್ 10ರಿಂದ ದೆಹಲಿಯಲ್ಲಿ ನಡೆಯಲಿದೆ.

ವಿಂಡೀಸ್ ವಿರುದ್ಧ ಅಮೋಘ ಸಾಧನೆ...

2002ರಿಂದ ವಿಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಅಜೇಯ ಓಟವನ್ನು ಮುಂದುವರಿಸಿದೆ. ಈ ಅವಧಿಯಲ್ಲಿ 25 ಟೆಸ್ಟ್ ಪಂದ್ಯಗಳಲ್ಲಿ ಜಯ ಗಳಿಸಿದೆ. ಪ್ರಸ್ತುತ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಜಯದ ಓಟ ಮುಂದುವರಿಸುವ ಇರಾದೆಯಲ್ಲಿದೆ.

ಟಾಸ್ ವೇಳೆ ಮಾತನಾಡಿದ ಗಿಲ್, ಪ್ರಸಕ್ತ ವರ್ಷದಲ್ಲಿ ತವರಿನಲ್ಲಿ ನಾಲ್ಕು ಪಂದ್ಯಗಳನ್ನುಆಡಲಿದ್ದೇವೆ. ಈ ಎಲ್ಲ ಪಂದ್ಯಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ. ನಾವು ಅತ್ಯುತ್ತಮ ತಯಾರಿಯನ್ನೇ ನಡೆಸಿದ್ದೇವೆ. ಎಲ್ಲರೂ ಉತ್ತಮ ಲಯದಲ್ಲಿದ್ದಾರೆ. ಪಿಚ್ ಉತ್ತಮವಾಗಿ ಕಾಣಿಸುತ್ತಿದೆ. ಹಾಗಾಗಿ ಟಾಸ್ ಸೋತಿರುವ ಬಗ್ಗೆ ಬೇಸರ ಮೂಡಿಸಿಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.