ADVERTISEMENT

IND vs WI: ರಾಹುಲ್, ಜುರೆಲ್, ಜಡೇಜಾ ಶತಕದಾಟ: 2ನೇ ದಿನದ ಅಂತ್ಯಕ್ಕೆ ಭಾರತ 448/5

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2025, 11:42 IST
Last Updated 3 ಅಕ್ಟೋಬರ್ 2025, 11:42 IST
ರವೀಂದ್ರ ಜಡೇಜಾ
ರವೀಂದ್ರ ಜಡೇಜಾ    

ಅಹಮದಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಅಹಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. 2ನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 448/5 ಗಳಿಸಿ 286 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ.

ಎರಡನೇ ದಿನದಾಟದಲ್ಲಿ ಇಡೀ ದಿನ ಬೌಲಿಂಗ್ ಮಾಡಿದ ವಿಂಡೀಸ್‌ಗೆ ಭಾರತದ ಮೂವರು ಬ್ಯಾಟರ್‌ಗಳನ್ನು ಮಾತ್ರ ಔಟ್ ಮಾಡಲು ಸಾಧ್ಯವಾಯಿತು. ಭಾರತದ ಪರ ಕೆ.ಎಲ್ ರಾಹುಲ್ (100) ರನ್ ಸಿಡಿಸಿ ಔಟ್ ಆದರೆ, ಧ್ರುವ್ ಜುರೆಲ್ (125) ರನ್ ಸಿಡಿಸಿ ಕೊನೆಯ ಸೆಷನ್‌ ಮುಕ್ತಾಯಕ್ಕೆ ಕೆಲವೇ ಕ್ಷಣಗಳ ಮೊದಲು ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.

ಇನ್ನು ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು (104*) ಹಾಗೂ ಇನ್ನೋರ್ವ ಆಲ್‌ರೌಂಡರ್ ವಾಷಿಂಗ್‌ಟನ್ ಸುಂದರ್ (9*) ನಾಳೆಗೆ ವಿಕೆಟ್ ಕಾಯ್ದುಕೊಂಡಿದ್ದಾರೆ.

ADVERTISEMENT

ವೆಸ್ಟ್‌ ಇಂಡೀಸ್ ಪರ ರೋಸ್ಟನ್ ಚೇಸ್ 2 ವಿಕೆಟ್ ಪಡೆದುಕೊಂಡರೆ, ಜೇಡನ್ ಸೀಲ್ಸ್, ಜೋಮೆಲ್ ವಾರಿಕನ್ ಹಾಗೂ ಖಾರಿ ಪಿರ್ರೆ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.

ಚಹಾ ವಿರಾಮಕ್ಕೆ ಭಾರತದ ಸ್ಕೋರ್

ಭಾರತ ತಂಡ ಚಹಾ ವಿರಾಮದ ವೇಳೆಗೆ 326‌‌ ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು 164 ರನ್‌ಗಳ ಮುನ್ನಡೆ ಕಾಯ್ದುಕೊಂಡಿತ್ತು. ಆ ವೇಳೆಗೆ ಭಾರತ ಪರ ಧ್ರುವ್ ಜುರೆಲ್ (68) ಮತ್ತು ರವೀಂದ್ರ ಜಡೇಜಾ (50) ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಇದಕ್ಕೂ ಮೊದಲು ಕೆ.ಎಲ್. ರಾಹುಲ್ (100) ಭರ್ಜರಿ ಶತಕ ಸಿಡಿಸಿ ಔಟಾದರು.

121/2 ರಿಂದ ದಿನದಾಟ ಆರಂಭಿಸಿದ ಭಾರತದ ಪರ ಮೊದಲ ಸೆಷನ್‌ನಲ್ಲಿ ನಾಯಕ ಶುಭಮನ್ ಗಿಲ್ (50) ರನ್ ಗಳಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ಭೋಜನ ವಿರಾಮದ ಬಳಿಕ ಶತಕ ಗಳಿಸಿದ್ದ ರಾಹುಲ್ ಕೂಡ ಔಟಾದರು.

ಊಟದ ವಿರಾಮಕ್ಕೆ ಭಾರತದ ರನ್ಸ್

ಕನ್ನಡಿಗ, ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್ ಅಮೋಘ ಶತಕದ (100) ನೆರವಿನಿಂದ ಎರಡನೇ ದಿನದಾಟದ ಊಟದ ವಿರಾಮದ ಹೊತ್ತಿಗೆ 67 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿದೆ.

ಆ ಮೂಲಕ 56 ರನ್‌ಗಳ ಮುನ್ನಡೆ ಗಳಿಸಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವಿಂಡೀಸ್‌ನ 162 ರನ್‌ಗಳಿಗೆ ಪ್ರತಿಯಾಗಿ ಭಾರತ ದಿಟ್ಟ ಉತ್ತರ ನೀಡುತ್ತಿದೆ.

ಮೊದಲ ದಿನದಂತ್ಯಕ್ಕೆ ಭಾರತ ಎರಡು ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿತ್ತು. ಇಂದು (ಶುಕ್ರವಾರ) ಮೊದಲನೇ ಅವಧಿಯಲ್ಲಿ ನಾಯಕ ಶುಭಮನ್ ಗಿಲ್ ಹಾಗೂ ಕೆ.ಎಲ್. ರಾಹುಲ್ 98 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ಭದ್ರ ಅಡಿಪಾಯ ಹಾಕಿಕೊಟ್ಟರು.

ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 11ನೇ ಶತಕದ ಸಾಧನೆ ಮಾಡಿದ್ದಾರೆ. 192 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದ್ದು, ಕ್ರೀಸಿನಲ್ಲಿದ್ದಾರೆ. ಅವರಿಗೆ ವಿಕೆಟ್ ಕೀಪರ್, ಬ್ಯಾಟರ್ ಧ್ರುವ್ ಜುರೇಲ್ ಸಾಥ್ ನೀಡುತ್ತಿದ್ದಾರೆ.

ನಾಯಕ ಗಿಲ್ 100 ಎಸೆತಗಳಲ್ಲಿ ಅರ್ಧಶತಕದ ಸಾಧನೆ ಮಾಡಿದರು. ವಿಂಡೀಸ್ ಪರ ನಾಯಕ ರೋಸ್ಟನ್ ಚೇಸ್ ಎರಡು ವಿಕೆಟ್ ಗಳಿಸಿದರು.

ಮೊದಲ ದಿನದಾಟದಲ್ಲಿ ಮೊಹಮ್ಮದ್ ಸಿರಾಜ್ (40ಕ್ಕೆ 4) ಹಾಗೂ ಜಸ್‌ಪ್ರೀತ್ ಬೂಮ್ರಾ (42ಕ್ಕೆ 3) ದಾಳಿಗೆ ಸಿಲುಕಿದ ವಿಂಡೀಸ್ 162 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.