ಬ್ಯಾಟಿಂಗ್ ಮುಗಿಸಿ ಪೆವಿಲಿಯನ್‌ಗೆ ಮರಳುತ್ತಿರುವ ರಾಹುಲ್, ಗಿಲ್
ಫೋಟೊ ಕೃಪೆ–ಜಿಯೋಸ್ಟಾರ್
ಅಹಮದಾಬಾದ್: ‘ವೇಗದ ಜೋಡಿ’ ಮೊಹಮ್ಮದ್ ಸಿರಾಜ್ ಮತ್ತು ಜಸ್‌ಪ್ರೀತ್ ಬೂಮ್ರಾ ಅವರ ‘ಸುಂಟರಗಾಳಿ’ಯಂತಹ ಎಸೆತಗಳಿಗೆ ವೆಸ್ಟ್ ಇಂಡೀಸ್ ತಂಡವು ಸಾಧಾರಣ ಮೊತ್ತಕ್ಕೆ ಕುಸಿಯಿತು. ಅದರ ನಂತರ ಕೆ.ಎಲ್. ರಾಹುಲ್ ಅವರ ಚೆಂದದ ಅರ್ಧಶತಕ ಅರಳಿತು.
ಗುರುವಾರ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾದ ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್ ಪಂದ್ಯದ ಪ್ರಥಮ ದಿನದಂದು ಆತಿಥೇಯ ತಂಡವು ಪಾರಮ್ಯ ಮೆರೆಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪ್ರವಾಸಿ ಬಳಗವು 44.1 ಓವರ್‌ಗಳಲ್ಲಿ 162 ರನ್ ಗಳಿಸಿತು. ಸಿರಾಜ್ (40ಕ್ಕೆ4) ಮತ್ತು ಬೂಮ್ರಾ (32ಕ್ಕೆ3) ಅವರ ಬೌಲಿಂಗ್ ಮುಂದೆ ವಿಂಡೀಸ್ ಬ್ಯಾಟರ್‌ಗಳು ಶರಣಾದರು.
ಅದಕ್ಕುತ್ತರವಾಗಿ ದಿನದಾಟದ ಮುಕ್ತಾಯಕ್ಕೆ ಭಾರತ ತಂಡವು 38 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 121 ರನ್ ಗಳಿಸಿದೆ. ಕೆ.ಎಲ್. ರಾಹುಲ್ (ಬ್ಯಾಟಿಂಗ್ 53; 114ಎ, 4X6) ಮತ್ತು ನಾಯಕ ಶುಭಮನ್ ಗಿಲ್ (ಬ್ಯಾಟಿಂಗ್ 18; 42ಎ, 4X1) ಕ್ರೀಸ್‌ನಲ್ಲಿದ್ದಾರೆ. ಪ್ರಥಮ ಇನಿಂಗ್ಸ್ ಬಾಕಿ ಚುಕ್ತಾ ಮಾಡಲು 41 ರನ್‌ಗಳಷ್ಟೇ ಬಾಕಿ ಇವೆ.
ದಿನದಾಟದಲ್ಲಿ ಕೆಲಹೊತ್ತು ಮಳೆ ಕೂಡ ಬಂದು ಹೋಯಿತು. ಆದರೆ ರಾಹುಲ್ ಬ್ಯಾಟಿಂಗ್ ಲಯಕ್ಕೆ ಮಾತ್ರ ಯಾವುದೂ ಅಡ್ಡಿಯಾಗಲಿಲ್ಲ. ಅವರು ಮತ್ತು ಯಶಸ್ವಿ ಜೈಸ್ವಾಲ್ (36; 54ಎ, 4X7) ಮೊದಲ ವಿಕೆಟ್ ಜೊತೆಯಾಟದಲ್ಲಿ 68 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಆದರೆ ಜೇಡನ್ ಸೀಲ್ಸ್ ಅವರ ಶಾರ್ಟ್ ಆಫ್ ಲೆಂಗ್ತ್ ಎಸೆತವನ್ನು ಕಟ್ ಮಾಡುವ ಭರದಲ್ಲಿ ವಿಕೆಟ್‌ಕೀಪರ್ ಶಾಯ್ ಹೋಪ್ ಅವರಿಗೆ ಕ್ಯಾಚ್ ಆದ ಜೈಸ್ವಾಲ್ ನಿರ್ಗಮಿಸಿದರು.
ಸಾಯಿ ಸುದರ್ಶನ್ (7;19ಎ) ಲಯ ಕಂಡುಕೊಳ್ಳುವ ಹಂತದಲ್ಲಿದ್ದಾಗಲೇ ಆಫ್‌ಸ್ಪಿನ್ನರ್ ರಾಸ್ಟನ್ ಚೇಸ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆದರೆ ಇನ್ನೊಂದು ಕಡೆ ತಾಳ್ಮೆ ಮತ್ತು ಏಕಾಗ್ರತೆಯಿಂದ ಬೌಲರ್‌ಗಳನ್ನು ಎದುರಿಸುತ್ತಿದ್ದ ರಾಹುಲ್ ಅವರ ಆಟದಲ್ಲಿ ಆತ್ಮವಿಶ್ವಾಸದಿಂದ ಕೂಡಿತ್ತು. ಅವರೊಂದಿಗೆ ಸೇರಿಕೊಂಡ ಗಿಲ್ ಕೂಡ ಚೆಂದದ ಹೊಡೆತಗಳನ್ನು ಪ್ರಯೋಗಿಸಿದರು. ಇಬ್ಬರೂ ಸೇರಿ ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ 31 ರನ್ ಸೇರಿಸಿದರು.
ಸಿರಾಜ್–ಬೂಮ್ರಾ ಜೊತೆಯಾಟ
ಊಟದ ವಿರಾಮಕ್ಕೂ ಮುಂಚಿನ ಅವಧಿಯಲ್ಲಿ ಸಿರಾಜ್ ಅವರು ಏಳು ಓವರ್‌ಗಳ ಸ್ಪೆಲ್‌ನಲ್ಲಿ ಮೂರು ವಿಕೆಟ್ ಗಳಿಸಿದರು. ಸಿರಾಜ್ ಅವರು ವಿರಾಮದ ನಂತರ ರಾಸ್ಟನ್ ಚೇಸ್ (24; 43ಎ) ಅವರ ವಿಕೆಟ್ ಪಡೆದ ರೀತಿ ಅಮೋಘವಾಗಿತ್ತು. ಆಫ್‌ಸ್ಟಂಪ್ ಹೊರಗೆ ಸ್ವಿಂಗ್ ಆದ ಚೆಂಡನ್ನು ಕೆಣಕಿದ ಚೇಸ್ ದಂಡ ತೆತ್ತರು. ಬ್ಯಾಟ್‌ಗೆ ಬಡಿದ ಚೆಂಡು ವಿಕೆಟ್‌ಕೀಪರ್ ಧ್ರುವ ಜುರೇಲ್ ಅವರಿಗೆ ಕ್ಯಾಚ್ ಆದರು. ಆದರೆ ‘ಪಂಚಗೊಂಚಲು’ ಸಾಧನೆ ಮಾಡುವ ಅವಕಾಶ ಸ್ವಲ್ಪದರಲ್ಲಿ ಅವರ ಕೈತಪ್ಪಿತು.
ಇನ್ನೊಂದು ಕಡೆಯಿಂದ ಬೂಮ್ರಾ ಕೂಡ ತಮ್ಮ ಲಯ ಕಂಡುಕೊಂಡರು. ಆರಂಭಿಕ ಬ್ಯಾಟರ್ ಜಾನ್ ಕ್ಯಾಂಪ್‌ಬೆಲ್ (8 ರನ್) ವಿಕೆಟ್ ಗಳಿಸಿದ ಅವರು ತಮ್ಮ ಇನ್ನೊಂದು ಸ್ಪೆಲ್‌ನಲ್ಲಿ ಮಧ್ಯಮ ಕ್ರಮಾಂಕಕ್ಕೆ ಪೆಟ್ಟುಕೊಟ್ಟರು.
ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ (25ಕ್ಕೆ2) ಮತ್ತು ವಾಷಿಂಗ್ಟನ್ ಸುಂದರ್ (9ಕ್ಕೆ1) ಕೂಡ ತಮ್ಮ ಕೈಚಳಕ ಮೆರೆದರು.
ಹಸಿರು ಮೇಲ್ಮೈ ಇರುವ ಈ ಪಿಚ್‌ನಲ್ಲಿ ಬೌಲಿಂಗ್ ಮಾಡಲು ಉತ್ಸುಕನಾಗಿದ್ದೆ. ಭಾರತದಲ್ಲಿ ಈ ರೀತಿಯ ಪಿಚ್‌ಗಳು ಸಿಗುವುದು ಕಡಿಮೆ. ಹೋದ ಬಾರಿ ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ಬೆಂಗಳೂರಿನಲ್ಲಿ ಇಂತಹದೇ ಪಿಚ್ ಇತ್ತು–ಮೊಹಮ್ಮದ್ ಸಿರಾಜ್ ಭಾರತ ತಂಡದ ಬೌಲರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.