
ಕೊಲಂಬೊ: ಭಾನುವಾರ ಶ್ರೀಲಂಕಾದ ಪಿ ಸಾರಾ ಓವಲ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳವನ್ನು ಏಳು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತವು ಅಂಧ ಮಹಿಳೆಯರ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ, ನೇಪಾಳವನ್ನು 5 ವಿಕೆಟ್‌ಗೆ 114 ರನ್‌ಗಳಿಗೆ ಕಟ್ಟಿ ಹಾಕಿತ್ತು. ನಂತರ, ಕೇವಲ 12 ಓವರ್‌ಗಳಲ್ಲಿ 3 ವಿಕೆಟ್‌ಗೆ 117 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಭಾರತದ ಪ್ರಾಬಲ್ಯ ಎಷ್ಟಿತ್ತೆಂದರೆ ಎದುರಾಳಿ ತಂಡ ತಮ್ಮ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ಬೌಂಡರಿ ಮಾತ್ರ ಗಳಿಸಿತು.
ಫುಲಾ ಸರೆನ್ ಔಟಾಗದೆ 44 ರನ್ ಗಳಿಸಿ ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿದರು.
ಮೊದಲ ಸೆಮಿಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಶನಿವಾರ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ನೇಪಾಳ, ಪಾಕಿಸ್ತಾನವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು.
ಸಹ ಆತಿಥೇಯ ಶ್ರೀಲಂಕಾ ತಂಡವು ಲೀಗ್ ಹಂತದ ಐದು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಜಯ ಸಾಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.