ಪ್ರತೀಕಾ ರಾವಲ್
(ಚಿತ್ರ ಕೃಪೆ: x@BCCIWomen)
ರಾಜಕೋಟ್: ಪ್ರತೀಕಾ ರಾವಳ್ ಮತ್ತು ತೇಜಲ್ ಹಸ್ಬನೀಸ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಶುಕ್ರವಾರ ನಡೆದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಐರ್ಲೆಂಡ್ ಎದುರು ಜಯಿಸಿತು.
ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 6 ವಿಕೆಟ್‌ಗಳಿಂದ ಜಯಿಸಿತು. 3 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು. ಉಭಯ ತಂಡಗಳು ಇದೇ ಮೊದಲ ಸಲ ದ್ವಿಪಕ್ಷೀಯ ಸರಣಿಯಲ್ಲಿ ಮುಖಾಮುಖಿಯಾಗಿವೆ.
239 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ನಾಯಕಿ ಸ್ಮೃತಿ ಮಂದಾನ (41;29ಎ, 4X6, 6X1) ಮತ್ತು ಪ್ರತೀಕಾ (89; 96ಎ, 4X10, 6X1) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜತೆಯಾಟದಲ್ಲಿ 70 ರನ್ ಸೇರಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಅವರು 4 ಸಾವಿರ ರನ್ ಗಳಿಸಿದರು. ಈ ಸಾಧನೆ ಮಾಡಿದ ಭಾರತದ ಎರಡನೇ ಮತ್ತು ಒಟ್ಟಾರೆ 15ನೇ ಆಟಗಾರ್ತಿಯಾದರು.
10ನೇ ಓವರ್‌ನಲ್ಲಿ ಸ್ಮೃತಿ ಔಟಾದಾಗ ಪ್ರತೀಕಾ ಅವರು ಇನಿಂಗ್ಸ್ ಕಟ್ಟುವ ಹೊಣೆ ನಿಭಾಯಿಸಿದರು. ಹರ್ಲೀನ್ ಡಿಯೊಲ್ (20 ರನ್) ಮತ್ತು ಜೆಮಿಮಾ ರಾಡ್ರಿಗಸ್ (9 ರನ್) ಅವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲಿಲ್ಲ. 46 ರನ್‌ಗಳ ಅಂತರದಲ್ಲಿ 3 ವಿಕೆಟ್‌ಗಳು ಪತನವಾಗಿದ್ದರಿಂದ ಆತಂಕ ಎದುರಾಗಿತ್ತು. ಇನ್ನೊಂದೆಡೆ ಹೋರಾಟ ನಡೆಸಿದ್ದ ಪ್ರತೀಕಾ ಅವರನ್ನು ಸೇರಿಕೊಂಡ ತೇಜಲ್ (ಔಟಾಗದೇ 53; 46ಎ, 4X9) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 116 ರನ್ ಸೇರಿಸಿದರು. ಇದರಿಂದಾಗಿ ತಂಡದ ಜಯ ಖಚಿತವಾಯಿತು.
24 ವರ್ಷದ ಪ್ರತೀಕಾ ಅವರಿಗೆ ಇದು ನಾಲ್ಕನೇ ಅಂತರರಾಷ್ಟ್ರೀಯ ಪಂದ್ಯ. ಅವರು ಒತ್ತಡದ ಸಂದರ್ಭವನ್ನು ಅನುಭವಿ ಆಟಗಾರ್ತಿಯಂತೆಯೇ ನಿಭಾಯಿಸಿದರು. ಮಧ್ಯಮ ಕ್ರಮಾಂಕ ಕುಸಿದಾಗಲೂ ಅವರು ತಾಳ್ಮೆಗೆಡದೇ ಇನಿಂಗ್ಸ್‌ಗೆ ಬಲ ತುಂಬಿದರು.
ತೇಜಲ್ ಅವರು ರಾಷ್ಟ್ರೀಯ ತಂಡಕ್ಕೆ ತಾವು ಮರಳಿ ಬಂದಿರುವುದನ್ನು ಅರ್ಧಶತಕದ ಮೂಲಕ ತಿಳಿಸಿದರು. ಹೋದ ವರ್ಷ ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಆಡಿದ ನಂತರ ಅವರಿಗೆ ಸ್ಥಾನ ಲಭಿಸಿರಲಿಲ್ಲ. ಈಗ ಮತ್ತೆ ಸಿಕ್ಕ ಅವಕಾಶವನ್ನು ಅವರು ಸಮರ್ಥವಾಗಿ ಬಳಸಿಕೊಂಡರು. ಭಾರತ ತಂಡವು 34.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 241 ರನ್ ಗಳಿಸಿತು.
ಪ್ರವಾಸಿ ತಂಡದ ನಾಯಕಿ ಗ್ಯಾಬಿ ಲೂಯಿಸ್ (92; 129ಎ) ಅವರು ಎಂಟು ರನ್‌ಗಳ ಅಂತರದಿಂದ ಶತಕ ಕೈತಪ್ಪಿಸಿಕೊಂಡರು. ಮಧ್ಯಮ ಕ್ರಮಾಂಕದ ಬ್ಯಾಟರ್ ಲಿಹ್ ಪಾಲ್ ಅವರು (59 ರನ್) ಅರ್ಧಶತಕ ಗಳಿಸಿದರು.
ಐರ್ಲೆಂಡ್: 50 ಓವರ್‌ಗಳಲ್ಲಿ 7ಕ್ಕೆ238 (ಗ್ಯಾಬಿ ಲೂಯಿಸ್ 92, ಲೀಹ್ ಪಾಲ್ 59, ಅಲೆನ್ ಕೆಲ್ಲಿ 28, ಪ್ರಿಯಾ ಮಿಶ್ರಾ 56ಕ್ಕೆ2) ಭಾರತ: 34.3 ಓವರ್‌ಗಳಲ್ಲಿ 4ಕ್ಕೆ241 (ಸ್ಮೃತಿ ಮಂದಾನ 41, ಪ್ರತೀಕ್ ರಾವಳ್ 89, ಹರ್ಲೀನ್ ಡಿಯೊಲ್ 20, ತೇಜಲ್ ಹಸಬ್ನೀಸ್ ಔಟಾಗದೆ 53, ಅಐಮೀ ಮೆಗೈರ್ 57ಕ್ಕೆ3) ಫಲಿತಾಂಶ: ಭಾರತ ತಂಡಕ್ಕೆ 6 ವಿಕೆಟ್‌ಗಳ ಜಯ ಹಾಗೂ ಸರಣಿಯಲ್ಲಿ 1–0 ಮುನ್ನಡೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.