ADVERTISEMENT

ರೈಸಿಂಗ್‌ ಸ್ಟಾರ್ಸ್ ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿ: ಭಾರತಕ್ಕೆ ಮಣಿದ ಪಾಕ್‌

ಮಹಿಳೆಯರ ರೈಸಿಂಗ್‌ ಸ್ಟಾರ್ಸ್‌ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿ

ಪಿಟಿಐ
Published 15 ಫೆಬ್ರುವರಿ 2026, 16:30 IST
Last Updated 15 ಫೆಬ್ರುವರಿ 2026, 16:30 IST
ವೃಂದಾ ದಿನೇಶ್‌
ವೃಂದಾ ದಿನೇಶ್‌   

ಬ್ಯಾಂಕಾಕ್‌: ಬೌಲರ್‌ಗಳ ಸಾಂಘಿಕ ಪ್ರದರ್ಶನ ಹಾಗೂ ಕನ್ನಡತಿ ವೃಂದಾ ದಿನೇಶ್‌ ಅವರ ಅಜೇಯ ಅರ್ಧಶತಕದ ನೆರವಿನಿಂದ ಭಾರತ ಮಹಿಳಾ ಎ ತಂಡವು ರೈಸಿಂಗ್‌ ಸ್ಟಾರ್ಸ್‌ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಪಾಕಿಸ್ತಾನ ಮಹಿಳಾ ಎ ತಂಡವನ್ನು ಮಣಿಸಿತು.

ಟರ್ಡ್‌ಥಾಯ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ತಂಡಕ್ಕೆ ಭಾರತದ ಬೌಲರ್‌ಗಳು ಆಘಾತ ನೀಡಿದರು. ನಾಯಕಿ ರಾಧಾ ಯಾದವ್‌ (11ಕ್ಕೆ 2), ವೇಗಿ ಸಯೀಮಾ ಠಾಕೂರ್‌ (14ಕ್ಕೆ2) ಹಾಗೂ ಸ್ಪಿನ್ನರ್‌ ಪ್ರೇಮಾ ರಾವತ್‌ (16ಕ್ಕೆ2) ಅವರು ಎದುರಾಳಿ ತಂಡವನ್ನು 18.5 ಓವರ್‌ಗಳಲ್ಲಿ 93 ರನ್‌ಗಳಿಗೆ ಕಟ್ಟಿಹಾಕಿದರು.

ಆರಂಭ ಆಟಗಾರ್ತಿ ಶವಾಲ್‌ ಜುಲ್ಫೀಕರ್‌ (23; 29ಎ, 4x3), ಗುಲ್‌ ರುಕ್‌ (21; 28ಎ, 4x1, 6x1) ಹಾಗೂ ಅನೋಶಾ ನಾಸಿರ್‌ (17;17ಎ, 4x2) ಹೊರತುಪಡಿಸಿದರೆ, ಉಳಿದ ಬ್ಯಾಟರ್‌ಗಳು ಒಂದಂಕಿ ದಾಟಲಿಲ್ಲ.

ADVERTISEMENT

ಸುಲಭ ಗುರಿ ಬೆನ್ನಟ್ಟಿದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಹುಮೇರಾ ಕಾಝಿ ಇನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಔಟಾದರು. ನಂತರ, ಬೆಂಗಳೂರಿನ ಹುಡುಗಿ ವೃಂದಾ (ಔಟಾಗದೇ 55; 29ಎ, 4x12) ಹಾಗೂ ಅನುಷ್ಕಾ ಶರ್ಮಾ (24; 26ಎ, 4x4) ಅವರು ಎರಡನೇ ವಿಕೆಟ್‌ ಜೊತೆಯಾಟದಲ್ಲಿ 78 ರನ್‌ ಸೇರಿಸಿ ಪಂದ್ಯವನ್ನು ಭಾರತದ ನಿಯಂತ್ರಣಕ್ಕೆ ತಂದರು.

ಅನುಷ್ಕಾ ಔಟಾದ ಬಳಿಕ ವೃಂದಾ ಅವರು ತೇಜಲ್‌ ಹಸಬ್ನಿಸ್‌ (ಔಟಾಗದೇ 12; 5ಎ, 4x1, 6x1) ಜೊತೆಗೂಡಿ ಭಾರತವನ್ನು ಗೆಲುವಿನ ದಡ ಸೇರಿಸಿದರು. ರಾಧಾ ಪಡೆಯು 59 ಎಸೆತಗಳು ಬಾಕಿ ಇರುವಂತೆ 2 ವಿಕೆಟ್‌ಗೆ 97 ರನ್‌ ಗಳಿಸಿತು. ಭಾರತ ಎ ಮಹಿಳಾ ತಂಡವು ಶುಕ್ರವಾರ 7 ವಿಕೆಟ್‌ಗಳಿಂದ ಯುಎಇ ವಿರುದ್ಧ ಸೋಲನುಭವಿಸಿತ್ತು.

ಸಂಕ್ಷಿಪ್ತ ಸ್ಕೋರು

ಪಾಕಿಸ್ತಾನ ಮಹಿಳಾ ಎ ತಂಡ: 18.5 ಓವರ್‌ಗಳಲ್ಲಿ 93 (ಶವಾಲ್‌ ಜುಲ್ಫೀಕರ್‌ 23, ಗುಲ್‌ ರುಕ್‌ 21, ರಾಧಾ ಯಾದವ್‌ 11ಕ್ಕೆ2, ಸಯೀಮಾ ಠಾಕೂರ್‌ 14ಕ್ಕೆ2, ಪ್ರೇಮಾ ರಾವತ್‌ 16ಕ್ಕೆ2).

ಭಾರತ ಮಹಿಳಾ ಎ ತಂಡ: 10.1 ಓವರ್‌ಗಳಲ್ಲಿ 2 ವಿಕೆಟ್‌ಗೆ 97 (ವೃಂದಾ ದಿನೇಶ್‌ ಔಟಾಗದೇ 55, ಅನುಷ್ಕಾ ಶರ್ಮಾ 24, ಮೊಮೀನಾ ರಿಯಾಸತ್‌ 13ಕ್ಕೆ1).

ಪಂದ್ಯದ ಆಟಗಾರ್ತಿ: ವೃಂದಾ ದಿನೇಶ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.