
ಶಫಾಲಿ ವರ್ಮಾ ಪಿಟಿಐ ಚಿತ್ರ
ತಿರುವನಂತಪುರ : ವೇಗ– ಸ್ಪಿನ್ ಬೌಲರ್‌ಗಳು ಶ್ರೀಲಂಕಾ ತಂಡವನ್ನು ಮಗದೊಮ್ಮೆ ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ಬಳಿಕ ಶಫಾಲಿ ವರ್ಮಾ (ಔಟಾಗದೇ 79, 42ಎ) ಸತತ ಎರಡನೇ ಅಜೇಯ ಅರ್ಧ ಶತಕ ಬಾರಿಸಿದರು. ಇದರಿಂದ ಭಾರತ ತಂಡ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಶುಕ್ರವಾರ ಎಂಟು ವಿಕೆಟ್‌ಗಳ ನಿರಾಯಾಸ ಗೆಲುವು ಪಡೆಯಿತು.
ಇನ್ನೂ ಎರಡು ಪಂದ್ಯಗಳು ಉಳಿದಿರುವಂತೆ ಆತಿಥೇಯರು ಸರಣಿಯನ್ನು 3–0 ಯಿಂದ ಕೈವಶಮಾಡಿಕೊಂಡರು. ಇದೇ ಕ್ರೀಡಾಂಗಣದಲ್ಲಿ ಡಿಸೆಂಬರ್ 28 ಮತ್ತು 30ರಂದು ಕ್ರಮವಾಗಿ ನಾಲ್ಕನೇ ಮತ್ತು ಅಂತಿಮ ಪಂದ್ಯ ನಡೆಯಲಿದೆ.
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಸತತ ಮೂರನೇ ಸಲ ಟಾಸ್ ಗೆದ್ದು ಪ್ರವಾಸಿ ತಂಡವನ್ನು ಆಡಲಿಳಿಸಿದರು. ಮೊದಲ ಎರಡು ಪಂದ್ಯಗಳ ರೀತಿಯಲ್ಲೇ ಶ್ರೀಲಂಕಾದ ಅಗ್ರ ಬ್ಯಾಟರ್‌ಗಳ ಪರದಾಟ ಮುಂದುವರಿಯಿತು. ಅರುಂಧತಿ ರೆಡ್ಡಿ ಬದಲು ಅವಕಾಶ ಪಡೆದ ಅಗ್ರ ಬೌಲರ್ ರೇಣುಕಾ ಸಿಂಗ್ 21 ರನ್ನಿಗೆ 4 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 18 ರನ್ನಿಗೆ 3 ವಿಕೆಟ್ ಪಡೆದು ಬಲವಾದ ಪೆಟ್ಟು ನೀಡಿದರು.
ಲಂಕಾ ಪರ ಆರಂಭ ಆಟಗಾರ್ತಿ ಹಸಿನಿ ಪೆರೇರಾ (25) ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದರು. ಯಾವ ಹಂತದಲ್ಲೂ ತಂಡ ಆರರ ಸರಾಸರಿ ದಾಟಲಿಲ್ಲ.
ಭಾರತ ತಂಡವು ಉಪ ನಾಯಕಿ ಸ್ಮೃತಿ ಮಂದಾನ (1) ಅವರನ್ನು ಬೇಗ ಕಳೆದುಕೊಂಡಿತು. ಆದರೆ ಶಫಾಲಿ ಎಂದಿನಂತೆ ಮಿಂಚಿನ ಆಟವಾಡಿ ಸಿಂಹಪಾಲು ರನ್ ಗಳಿಸಿದರು. ಜೆಮಿಮಾ ಫರ್ನಾಂಡಿಸ್ (9) ಕೂಡ ವಿಫಲರಾದರು. ಶಫಾಲಿ ಜೊತೆಗೂಡಿದ ನಾಯಕಿ ಹರ್ಮನ್‌ಪ್ರೀತ್ ಕೌರ್ (ಅಜೇಯ 21, 18ಎ) ಮುರಿಯದ ಮೂರನೇ ವಿಕೆಟ್‌ಗೆ 48 ರನ್ ಸೇರಿಸಿದರು.
ಶಫಾಲಿ ಆಟದಲ್ಲಿ 11 ಬೌಂಡರಿ, ಮೂರು ಸಿಕ್ಸರ್‌ಗಳಿದ್ದವು.
ರೇಣುಕಾ ಸಿಂಗ್ ಪಂದ್ಯದ ಆಟಗಾರ್ತಿ ಎನಿಸಿದರು.
ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ 20 ಓವರುಗಳಲ್ಲಿ 7ಕ್ಕೆ112 (ಹಸಿನಿ ಪೆರೇರಾ 25, ಇಮೇಶಾ ದುಲಾನಿ 27, ಕವಿಶಾ ದಿಲ್ಹಾರಿ 20; ರೇಣುಕಾ ಸಿಂಗ್ 21ಕ್ಕೆ4, ದೀಪ್ತಿ ಶರ್ಮಾ 18ಕ್ಕೆ3); ಭಾರತ: 13.2 ಓವರುಗಳಲ್ಲಿ 2 ವಿಕೆಟ್‌ಗೆ 115 (ಶಫಾಲಿ ವರ್ಮಾ ಔಟಾಗದೇ 79, ಹರ್ಮನ್‌ಪ್ರೀತ್ ಕೌರ್ ಔಟಾಗದೇ 21; ಕವಿಶಾ ದಿಲ್ಹಾರಿ 18ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.