ADVERTISEMENT

INDW vs WIW: ರೇಣುಕಾಗೆ 5 ವಿಕೆಟ್, ವಿಂಡೀಸ್ ವಿರುದ್ಧ ಭಾರತಕ್ಕೆ 211 ರನ್ ಜಯ

ಪಿಟಿಐ
Published 22 ಡಿಸೆಂಬರ್ 2024, 18:39 IST
Last Updated 22 ಡಿಸೆಂಬರ್ 2024, 18:39 IST
<div class="paragraphs"><p>ಭಾರತ ಮಹಿಳಾ ತಂಡದ ಆಟಗಾರ್ತಿಯರ ಸಂಭ್ರಮ</p></div>

ಭಾರತ ಮಹಿಳಾ ತಂಡದ ಆಟಗಾರ್ತಿಯರ ಸಂಭ್ರಮ

   

(ಚಿತ್ರ ಕೃಪೆ: X/@BCCIWomen)

ವಡೋದರಾ: ಅಮೋಘ ಲಯದಲ್ಲಿರುವ ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ ಅವರ ಚೆಂದದ ಬ್ಯಾಟಿಂಗ್ ಮತ್ತು ರೇಣುಕಾ ಠಾಕೂರ್ ಅವರ ಚುರುಕಿನ ದಾಳಿಯ ಬಲದಿಂದ ಭಾರತ ಮಹಿಳೆಯರ ತಂಡವು ವೆಸ್ಟ್ ಇಂಡೀಸ್ ಎದುರಿನ ಏಕದಿನ ಪಂದ್ಯದಲ್ಲಿ ಜಯಿಸಿತು. 

ADVERTISEMENT

ಭಾನುವಾರ ಇಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಸ್ಮೃತಿ 102 ಎಸೆತಗಳಲ್ಲಿ 91 ರನ್ ಗಳಿಸಿದರು. ರೇಣುಕಾ ಐದು ವಿಕೆಟ್ ಗೊಂಚಲು ಗಳಿಸಿದರು. ಭಾರತ ತಂಡವು 211 ರನ್‌ಗಳ ಭಾರಿ ಜಯ ಸಾಧಿಸಿತು. 3 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು. 

ಕೋತಂಬಿ ಕ್ರೀಡಾಂಗಣದಲ್ಲಿ ಪ್ರವಾಸಿ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸ್ಮೃತಿ ಮತ್ತು ಉಳಿದ ಬ್ಯಾಟರ್‌ಗಳ  ಉತ್ಮತ ಆಟದಿಂದಾಗಿ ಭಾರತ ತಂಡವು 50 ಓವರ್‌ಗಳಲ್ಲಿ 9
ವಿಕೆಟ್‌ಗಳಿಗೆ 314 ರನ್ ಗಳಿಸಿತು. ಅದಕ್ಕುತ್ತರವಾಗಿ ವಿಂಡೀಸ್ ತಂಡವು 26.2 ಓವರ್‌ಗಳಲ್ಲಿ 103 ರನ್‌ ಗಳಿಸಿ ಸೋತಿತು. ಮಧ್ಯಮವೇಗಿ ರೇಣುಕಾ (10–1–29–5) ಎದುರಾಳಿ ತಂಡವನ್ನು ಕಟ್ಟಿಹಾಕಿದರು.  ಪ್ರಿಯಾ ಮಿಶ್ರಾ ಕೂಡ 2 ವಿಕೆಟ್ ಗಳಿಸಿದರು. 

ಕಳೆದ ಕೆಲವು ಪಂದ್ಯಗಳಿಂದ ಅಮೋಘ ಲಯದಲ್ಲಿರುವ ಸ್ಮೃತಿ ಇಲ್ಲಿಯೂ ತಮ್ಮ ಆಟ ಮುಂದುವರಿಸಿದರು. ಅವರು ಮತ್ತು ಪ್ರತೀಕಾ ರಾವಳ್ (40; 69ಎ, 4X4) ಮೊದಲ ವಿಕೆಟ್‌ ಜೊತೆಯಾಟದಲ್ಲಿ 110 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ರಾವಳ್ ಔಟಾದ ನಂತರ ಸ್ಮೃತಿ  ಅವರು ಹರ್ಲಿನ್ ಡಿಯೊಲ್ (44; 50ಎ, 4X2, 6X1) ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 50 ರನ್ ಸೇರಿಸಿದರು. 

ಶತಕದ ಸನಿಹ ಸಾಗಿದ್ದ ಸ್ಮೃತಿ ಅವರನ್ನು 32ನೇ ಓವರ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಝೈದಾ ಜೇಮ್ಸ್ ಅವರು ಜೊತೆಯಾಟವನ್ನೂ ಮುರಿದರು. ಹರ್ಲಿನ್ ಜೊತೆಗೂಡಿದ ನಾಯಕಿ ಕೌರ್ ಮಿಂಚಿನ ಬ್ಯಾಟಿಂಗ್ ಮಾಡಿದರು. 23 ಎಸೆತಗಳಲ್ಲಿ 34 ರನ್‌ ಗಳಿಸಿದರು. 3 ಬೌಂಡರಿ, 1 ಸಿಕ್ಸರ್ ಸಿಡಿಸಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ ಹರ್ಲಿನ್ ಮತ್ತು ಕೌರ್ 66 ರನ್ ಸೇರಿಸಿದರು. ಹರ್ಲಿನ್ ಔಟಾದ ಮೇಲೆ ರಿಚಾ ಘೋಷ್ (26; 13ಎ) ಮತ್ತು ಜೆಮಿಮಾ ರಾಡ್ರಿಗಸ್ (31; 19ಎ) ಕೂಡ ಬೀಸಾಟವಾಡಿದರು. ಇದರಿಂದಾಗಿ ತಂಡವು ದೊಡ್ಡ ಸ್ಕೋರ್ ಗಳಿಸಿತು. ಪ್ರವಾಸಿ ಬಳಗದ ಝೈದಾ ಐದು ವಿಕೆಟ್ ಗಳಿಸಿದರು.

ಗುರಿ ಬೆನ್ನಟ್ಟಿದ ವಿಂಡೀಸ್‌ಗೆ ಮೊದಲ ಎಸೆತದಲ್ಲಿಯೇ ಆಘಾತ ವಾಯಿತು. ಖಿಯಾನಾ ಜೋಸೆಫ್ ಅವರು ರನೌಟ್ ಆದರು. ಮೂರನೇ
ಓವರ್‌ನಲ್ಲಿ ರೇಣುಕಾ ಅವರು ಹೆಯಲಿ ಮ್ಯಾಥ್ಯೂಸ್ ವಿಕೆಟ್ ಪಡೆದರು. ಇದರಿಂದಾಗಿ ಇಬ್ಬರೂ ಆರಂಭಿಕರು ಖಾತೆ ತೆರೆಯದೇ ನಿರ್ಗಮಿಸಿದರು. ಒತ್ತಡದಲ್ಲಿದ್ದ ವಿಂಡೀಸ್ ತಂಡಕ್ಕೆ ಚೇತರಿಸಿಕೊಳ್ಳುವ ಅವಕಾಶ ನೀಡದ ರೇಣುಕಾ ವಿಕೆಟ್‌ಗಳನ್ನು ಗಳಿಸಿದರು. ಅವರಿಗೆಪ್ರಿಯಾ ಮಿಶ್ರಾ, ತಿತಾಸ್ ಸಾಧು ಮತ್ತು ದೀಪ್ತಿ ಶರ್ಮಾ ಜೊತೆಯಾದರು. 

ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 314 (ಸ್ಮೃತಿ ಮಂದಾನ 91, ಪ್ರತೀಕಾ ರಾವಳ್ 40, ಹರ್ಲೀನ್ ದಿಯೊಲ್ 44, ಹರ್ಮನ್‌ಪ್ರೀತ್ ಕೌರ್ 34, ರಿಚಾ ಘೋಷ್ 26, ಜೆಮಿಮಾ ರಾಡ್ರಿಗಸ್ 31, ಹೆಯಲಿ ಮ್ಯಾಥ್ಯೂಸ್ 61ಕ್ಕೆ2, ಝೈದಾ ಜೇಮ್ಸ್ 45ಕ್ಕೆ5) ವೆಸ್ಟ್ ಇಂಡೀಸ್: 26.2 ಓವರ್‌ಗಳಲ್ಲಿ 103 (ಶೆಮೈನ್ ಕ್ಯಾಂಪ್‌ಬೆಲ್ 21, ಎಫೈ ಫ್ಲೆಚರ್ ಔಟಾಗದೆ 24, ರೇಣುಕಾ ಠಾಕೂರ್ ಸಿಂಗ್ 29ಕ್ಕೆ5, ಪ್ರಿಯಾ ಮಿಶ್ರಾ 22ಕ್ಕೆ2) ಫಲಿತಾಂಶ:ಭಾರತ ತಂಡಕ್ಕೆ 211 ರನ್‌ಗಳ ಜಯ.

ಪಂದ್ಯಶ್ರೇಷ್ಠ: ರೇಣುಕಾ ಠಾಕೂರ್ ಸಿಂಗ್. ಸರಣಿಯಲ್ಲಿ 1–0 ಮುನ್ನಡೆ. 

ಸ್ಮೃತಿ ವೈಭವ...

ಈ ಮೊದಲು ಸ್ಮೃತಿ ಮಂದಾನ ಹಾಗೂ ಚೊಚ್ಚಲ ಪಂದ್ಯ ಆಡುತ್ತಿರುವ ಪ್ರತೀಕಾ ರಾವಲ್ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟದಲ್ಲಿ ಭಾಗಿಯಾದರು. ಪ್ರತೀಕಾ 40 ರನ್‌ಗಳ ಕಾಣಿಕೆ ನೀಡಿದರು.

ಅತ್ತ ಆಕರ್ಷಕ ಇನಿಂಗ್ಸ್ ಕಟ್ಟಿದ ಸ್ಮೃತಿ ಕೇವಲ ಒಂಬತ್ತು ರನ್‌ ಅಂತರದಿಂದ ಶತಕ ವಂಚಿತರಾದರು. ಸ್ಮೃತಿ 102 ಎಸೆತಗಳಲ್ಲಿ 13 ಬೌಂಡರಿಗಳ ನೆರವಿನಿಂದ 91 ರನ್ ಗಳಿಸಿ ಔಟ್ ಆದರು.

ಹರ್ಲೀನ್ ಡಿಯೋಲ್ (44), ನಾಯಕಿ ಹರ್ಮನ್‌ಪ್ರೀತ್ ಕೌರ್ (34), ರಿಚಾ ಘೋಷ್ (26) ಮತ್ತು ಜೆಮಿಮಾ ರಾಡ್ರಿಗಸ್ (31) ಉಪಯುಕ್ತ ಇನಿಂಗ್ಸ್ ಕಟ್ಟಿದರು.

ಆ ಮೂಲಕ ಭಾರತ ಬೃಹತ್ ಮೊತ್ತ ಪೇರಿಸಲು ನೆರವಾದರು. ವಿಂಡೀಸ್ ಪರ ಜೈದಾ ಜೇಮ್ಸ್ 45 ರನ್ ತೆತ್ತು ಐದು ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 314 (ಸ್ಮೃತಿ ಮಂದಾನ 91, ಪ್ರತೀಕಾ ರಾವಳ್ 40, ಹರ್ಲೀನ್ ದಿಯೊಲ್ 44, ಹರ್ಮನ್‌ಪ್ರೀತ್ ಕೌರ್ 34, ರಿಚಾ ಘೋಷ್ 26, ಜೆಮಿಮಾ ರಾಡ್ರಿಗಸ್ 31, ಹೆಯಲಿ ಮ್ಯಾಥ್ಯೂಸ್ 61ಕ್ಕೆ2, ಝೈದಾ ಜೇಮ್ಸ್ 45ಕ್ಕೆ5) ವೆಸ್ಟ್ ಇಂಡೀಸ್: 26.2 ಓವರ್‌ಗಳಲ್ಲಿ 103 (ಶೆಮೈನ್ ಕ್ಯಾಂಪ್‌ಬೆಲ್ 21, ಎಫೈ ಫ್ಲೆಚರ್ ಔಟಾಗದೆ 24, ರೇಣುಕಾ ಠಾಕೂರ್ ಸಿಂಗ್ 29ಕ್ಕೆ5, ಪ್ರಿಯಾ ಮಿಶ್ರಾ 22ಕ್ಕೆ2) ಫಲಿತಾಂಶ:ಭಾರತ ತಂಡಕ್ಕೆ 211 ರನ್‌ಗಳ ಜಯ. ಪಂದ್ಯಶ್ರೇಷ್ಠ: ರೇಣುಕಾ ಠಾಕೂರ್ ಸಿಂಗ್. ಸರಣಿಯಲ್ಲಿ 1–0 ಮುನ್ನಡೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.