ADVERTISEMENT

ಮಹಿಳಾ ಕ್ರಿಕೆಟ್ | ಹರ್ಲಿನ್ ಶತಕ: ಸರಣಿ ಭಾರತದ ಕೈವಶ

ಪಿಟಿಐ
Published 24 ಡಿಸೆಂಬರ್ 2024, 18:31 IST
Last Updated 24 ಡಿಸೆಂಬರ್ 2024, 18:31 IST
<div class="paragraphs"><p>ಭಾರತ ಟೀಂ</p></div>

ಭಾರತ ಟೀಂ

   

ವಡೋದರ: ಹರ್ಲಿನ್ ಡಿಯೊಲ್ ಅಬ್ಬರದ ಶತಕದ ಬಲದಿಂದ ಭಾರತ ಮಹಿಳಾ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಜಯಭೇರಿ ಬಾರಿಸಿತು. 

ಕೋತಂಬಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಹರ್ಲಿನ್ (115; 103ಎ, 4X16) ಅವರ ಶತಕದ ಬಲದಿಂದ ಭಾರತ ತಂಡವು 115 ರನ್‌ಗಳಿಂದ ಗೆದ್ದಿತು. ಮೂರು ಪಂದ್ಯಗಳ ಸರಣಿಯನ್ನು 2–0 ಯಿಂದ ಕೈವಶ ಮಾಡಿಕೊಂಡಿತು. 

ADVERTISEMENT

ಟಾಸ್ ಗೆದ್ದ ಆತಿಥೇಯ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 358 ರನ್ ಗಳಿಸಿತು. ಗುರಿ ಬೆನ್ನಟ್ಟಿದ ವಿಂಡೀಸ್ ತಂಡವು 46.2 ಓವರ್‌ಗಳಲ್ಲಿ 243 ರನ್ ಗಳಿಸಿ ಆಲೌಟ್ ಆಯಿತು. ನಾಯಕಿ ಹೆಯಲಿ ಮ್ಯಾಥ್ಯೂಸ್ (106; 109ಎ, 4X13) ಶತಕ ಬಾರಿಸಿದರು. ಆದರೆ ಉಳಿದ ಬ್ಯಾಟರ್‌ಗಳ ದೀರ್ಘ ಇನಿಂಗ್ಸ್ ಆಡಲಿಲ್ಲ. 

ಭಾರತದ ಬ್ಯಾಟಿಂಗ್‌ಗೆ ದೀರ್ಘ ಜೊತೆಯಾಟಗಳು ಶಕ್ತಿ ತುಂಬಿದವು.  ಆರಂಭಿಕ ಜೋಡಿ ಸ್ಮೃತಿ ಮಂದಾನ (53; 47ಎ) ಮತ್ತು ಪ್ರತೀಕಾ ರಾವಳ್ (76; 86ಎ) ಮೊದಲ ವಿಕೆಟ್ ಜೊತೆಯಾಟದಲ್ಲಿ 110 ರನ್ ಸೇರಿಸಿದರು. ಕಳೆದ ಪಂದ್ಯದಲ್ಲಿ ಸ್ಮೃತಿ ಶತಕ ಬಾರಿಸಿದ್ದರು. 
ಈ ಪಂದ್ಯದಲ್ಲಿಯೂ ಅವರು ಉತ್ತಮ ಲಯದಲ್ಲಿದ್ದರು. ಏಳು ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದರು. ಆದರೆ 17ನೇ ಓವರ್‌ನಲ್ಲಿ ಫೀಲ್ಡರ್ ಕರಿಷ್ಮಾ ಮತ್ತು ಕ್ಯಾಂಪ್‌ಬೆಲ್ ಅವರ ಚುರುಕಾದ ಫೀಲ್ಡಿಂಗ್‌ನಲ್ಲಿ ಸ್ಮೃತಿ ರನ್‌ಔಟ್ ಆದರು. 

ಕ್ರೀಸ್‌ಗೆ ಬಂದ ಹರ್ಲಿನ್ ಅವರು ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕ ಗಳಿಸಿದರು. 16 ಬೌಂಡರಿ ಹೊಡೆದರು. ಅವರ ಆಟದ ಭರಾಟೆಗೆ ಬೌಲರ್‌ಗಳು ಬಸವಳಿದರು. ಹರ್ಲಿನ್ ಅವರು ಮೂರು ಜೊತೆಯಾಟಗಳಲ್ಲಿ ಪಾಲುದಾರರಾದರು. 

2ನೇ ವಿಕೆಟ್ ಜೊತೆಯಾಟದಲ್ಲಿ ಹರ್ಲಿನ್ ಮತ್ತು ಪ್ರತೀಕಾ 62 ರನ್ ಸೇರಿಸಿದರು. 3ನೇ ವಿಕೆಟ್ ಜೊತೆಯಾಟದಲ್ಲಿ ಹರ್ಲಿನ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಜೊತೆಗೆ 43 ರನ್‌ ಸೇರಿಸಿದರು. ಹರ್ಮನ್ ಔಟಾದಾಗ ಕ್ರೀಸ್‌ಗೆ ಬಂದ ಜಿಮಿಮಾ ಅವರೊಂದಿಗೆ ಹರ್ಲಿನ್ ಶತಕದ ಜೊತೆಯಾಟ (116 ರನ್) ಆಡಿದರು. ಇದರಿಂದಾಗಿ ತಂಡದ ಮೊತ್ತವು ತ್ರಿಶತಕದ ಗಡಿ ದಾಟಿತು. 

ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 358 (ಸ್ಮೃತಿ ಮಂದಾನ 53, ಪ್ರತೀಕಾ ರಾವಳ್ 76, ಹರ್ಲಿನ್ ಡಿಯೊಲ್ 115, ಹರ್ಮನ್‌ಪ್ರೀತ್ ಕೌರ್ 22, ಜೆಮಿಮಾ ರಾಡ್ರಿಗಸ್ 52, ರಿಚಾ ಘೋಷ್ ಔಟಾಗದೆ 13, ದಿಯಾಂದ್ರ ಡಾಟಿನ್ 53ಕ್ಕೆ1, ಎಫೈ ಫ್ಲೆಚರ್ 38ಕ್ಕೆ1) ವೆಸ್ಟ್ ಇಂಡೀಸ್: 46.2 ಓವರ್‌ಗಳಲ್ಲಿ 243 (ಹೆಯಲಿ ಮ್ಯಾಥ್ಯೂಸ್ 106, ಕಿಯಾನಾ ಜೋಸೆಫ್ 15, ಶೆಮೈನ್ ಕ್ಯಾಂಪ್‌ಬೆಲ್ 38, ಝೈದಾ ಜೇಮ್ಸ್ 25, ಎಫೈ ಫ್ಲೆಚರ್ 22, ದೀಪ್ತಿ ಶರ್ಮಾ 40ಕ್ಕೆ2, ತಿತಾಸ್ ಸಾಧು 42ಕ್ಕೆ2, ಪ್ರಿಯಾ ಮಿಶ್ರಾ 49ಕ್ಕೆ3, ಪ್ರತೀಕಾ ರಾವಳ್ 37ಕ್ಕೆ2) ಫಲಿತಾಂಶ: ಭಾರತ ತಂಡಕ್ಕೆ 115 ರನ್ ಜಯ. ಪಂದ್ಯದ ಆಟಗಾರ್ತಿ: ಹರ್ಲಿನ್ ಡಿಯೊಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.