ವಿಂಡೀಸ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತ
ಚಿತ್ರ:BCCI
ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ದದ ಎರಡನೇ ಹಾಗೂ ಸರಣಿಯ ಕೊನೆಯ ಪಂದ್ಯವನ್ನು ಭಾರತ ತಂಡ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮಾಡಿದೆ. ಆ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025-27ರ ಆವೃತ್ತಿಯ ಮೊದಲ ಸರಣಿಯನ್ನು ಡ್ರಾ ಮಾಡಿಕೊಂಡಿದ್ದ ಟೀಂ ಇಂಡಿಯಾ 2ನೇ ಸರಣಿಯಲ್ಲಿ ಗೆಲುವು ಸಾಧಿಸಿದೆ.
ವಿಂಡೀಸ್ ವಿರುದ್ಧ ಗೆಲ್ಲುವ ಮೂಲಕ ನಾಯಕ ಶುಭಮನ್ ಗಿಲ್ ನೇತೃತ್ವದಲ್ಲಿ ತಂಡ ತನ್ನ ಮೊದಲ ಸರಣಿ ಗೆದ್ದ ಸಾಧನೆಯನ್ನು ಮಾಡಿದೆ. ಹಾಗಿದ್ದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬುದನ್ನು ನೋಡೋಣ ಬನ್ನಿ.
ಇಂಗ್ಲೆಂಡ್ ವಿರುದ್ಧ ನಡೆದ ಸಚಿನ್ ತೆಂಡೂಲ್ಕರ್–ಆ್ಯಂಡರ್ಸನ್ ಸರಣಿಯ ಮೂಲಕ 2025–27ರ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯನ್ನು ಆರಂಭಿಸಿದ ಭಾರತ ತಂಡ ಆ ಸರಣಿಯನ್ನು ಡ್ರಾ ಮಾಡಿಕೊಂಡಿತ್ತು. ಸದ್ಯ ಇಂದು ಮುಕ್ತಾಯಗೊಂಡ ವಿಂಡೀಸ್ ಸರಣಿ ಸ್ವೀಪ್ ಮಾಡುತ್ತಿದ್ದಂತೆ ಭಾರತ WTC ಪಾಯಿಂಟ್ ಟೇಬಲ್‌ನಲ್ಲಿ 3ನೇ ಸ್ಥಾನಕ್ಕೆ ಏರಿದೆ.
ಟೀಮ್ ಇಂಡಿಯಾ 2025-27ರ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಈಗಾಗಲೇ 7 ಪಂದ್ಯಗಳನ್ನು ಆಡಿದ್ದು, ಶೇ 61.90 ಗೆಲುವಿನ ರೇಟಿಂಗ್ ಹೊಂದಿದೆ. ಆಸ್ಟ್ರೇಲಿಯಾ ಶೇ 100ರಷ್ಟು ಗೆಲುವಿನ ರೇಟಿಂಗ್‌ನೊಂದಿಗೆ ಅಗ್ರಸ್ಥಾನದಲ್ಲಿದೆ. ಶೇ 66.67 ರೇಟಿಂಗ್ಸ್‌ನೊಂದಿಗೆ ಶ್ರೀಲಂಕಾ ಎರಡನೇ ಸ್ಥಾನದಲ್ಲಿದೆ.
ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಈಗಾಗಲೇ 7 ಪಂದ್ಯಗಳನ್ನು ಆಡಿದೆ. ಅದರಲ್ಲಿ 4 ಗೆಲುವು, 2 ಸೋಲು ಮತ್ತು ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿ ಒಟ್ಟು 52 ಪಾಯಿಂಟ್ಸ್ ಪಡೆದಿದೆ.
ಇಂಗ್ಲೆಂಡ್ ತಂಡ 5 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 2 ಗೆಲುವು, 2 ಸೋಲು ಹಾಗೂ 1 ಪಂದ್ಯ ಡ್ರಾ ಮಾಡಿಕೊಂಡು ನಾಲ್ಕನೇ ಸ್ಥಾನದಲ್ಲಿದೆ. ಇನ್ನೂ ಬಾಂಗ್ಲಾದೇಶ ಆಡಿರುವ 2 ಪಂದ್ಯಗಳಲ್ಲಿ 1 ಸೋಲು ಹಾಗೂ 1 ಡ್ರಾದೊಂದಿಗೆ ಐದನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ತಂಡ ಆಡಿರುವ 5 ಪಂದ್ಯಗಳಲ್ಲಿ ಐದನ್ನೂ ಸೋಲುವ ಮೂಲಕ 6ನೇ ಸ್ಥಾನದಲ್ಲಿದೆ.
ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಇದುವರೆಗೂ ಯಾವುದೇ ಪಂದ್ಯವನ್ನು ಆಡದಿರುವುದರಿಂದ ಕೊನೆಯ ಸ್ಥಾನದಲ್ಲಿವೆ. ಸದ್ಯ, ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದ ಬಳಿಕ ಪಾಯಿಂಟ್ಸ್ ಟೇಬಲ್‌ನಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.