ADVERTISEMENT

ಕ್ರಿಕೆಟ್ ಕಣದಲ್ಲಿ 2025ರ ಹಿನ್ನೋಟ | ವಿಜಯ, ವಿದಾಯ, ವಿಪತ್ತು, ವಿಷಾದ...

ಗಿರೀಶ ದೊಡ್ಡಮನಿ
Published 26 ಡಿಸೆಂಬರ್ 2025, 22:30 IST
Last Updated 26 ಡಿಸೆಂಬರ್ 2025, 22:30 IST
<div class="paragraphs"><p>&nbsp;ಐಪಿಎಲ್ ಟ್ರೋಫಿಯೊಂದಿಗೆ ಆರ್‌ಸಿಬಿ ತಂಡ&nbsp;</p></div>

 ಐಪಿಎಲ್ ಟ್ರೋಫಿಯೊಂದಿಗೆ ಆರ್‌ಸಿಬಿ ತಂಡ 

   

ಭಾರತದ ಕ್ರಿಕೆಟ್ ರಂಗವು ಈ ವರ್ಷ ವಿಜಯ, ವಿದಾಯ, ವಿಪತ್ತು ಮತ್ತು ವಿಷಾದಗಳನ್ನು ಏಕಕಾಲಕ್ಕೇ ಅನುಭವಿಸಿದೆ. ಅತ್ಯಮೋಘ ವಿಜಯಗಳ ಸಂಭ್ರಮದ ಕ್ಷಣಗಳು ಅಭಿಮಾನಿಗಳನ್ನು ರಂಜಿಸಿದವು. ಅದರ ಬೆನ್ನ ಹಿಂದೆಯೇ ದಿಗ್ಗಜರ ವಿದಾಯದ ಬೇಸರ. ಅಭಿಮಾನಿಗಳನ್ನೇ ಬಲಿ ತೆಗೆದುಕೊಂಡ ವಿಪತ್ತು ಕೂಡ ಈ ವರ್ಷ ಮೈನಡುಗಿಸಿತ್ತು.

ಜನವರಿಯಲ್ಲಿ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಮತ್ತು ಏಕದಿನ ಕ್ರಿಕೆಟ್ ಸರಣಿಗಳನ್ನು ಗೆಲ್ಲುವುದರೊಂದಿಗೆ ಭಾರತ ತಂಡ ಶುಭಾರಂಭ ಮಾಡಿತ್ತು. ಫೆಬ್ರುವರಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ತಂಡವು  ಚಾಂಪಿಯನ್ಸ್ ಟ್ರೋಫಿ ಜಯಿಸಿತು. 2013ರ ನಂತರ ಭಾರತ ತಂಡ ಈ ಸಾಧನೆ ಮಾಡಿತು. ಪಾಕಿಸ್ತಾನ ಈ ಟೂರ್ನಿಯ ಆತಿಥ್ಯ ವಹಿಸಿತ್ತು. ಆದರೆ  ಭಾರತವು ಪಾಕ್ ನೆಲದಲ್ಲಿ ಪಂದ್ಯಗಳನ್ನು ಆಡಲು ನಿರಾಕರಿಸಿದ್ದರಿಂದ ಯುಎಇನಲ್ಲಿ ಪಂದ್ಯಗಳನ್ನು ಆಡಿಸಲಾಯಿತು. ಟೂರ್ನಿಯ ಲೀಗ್ ಹಂತದಲ್ಲಿ ಪಾಕ್ ತಂಡವನ್ನು ಸೋಲಿಸಿದ ಭಾರತ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದಿತು.

ADVERTISEMENT

ಮಾರ್ಚ್‌ನಲ್ಲಿ ಈ ಕಾಲಘಟ್ಟದ ಕ್ರಿಕೆಟ್‌ ದಂತಕತೆಯೇ ಆಗಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಇಬ್ಬರೂ ಆಟಗಾರರೊಂದಿಗೆ ಕೋಚ್ ಗೌತಮ್ ಗಂಭೀರ್ ಭಿನ್ನಾಭಿಪ್ರಾಯ ಹೊಂದಿದ್ದ ಕಾರಣಕ್ಕೆ ಅವರು ನಿವೃತ್ತಿಯಾಗಬೇಕಾಯಿತು ಎಂಬ ಮಾತುಗಳು ಕೇಳಿಬಂದವು. 2024ರಲ್ಲಿ ಟಿ20 ಕ್ರಿಕೆಟ್‌ಗೆ  ಇಬ್ಬರೂ ವಿದಾಯ ಹೇಳಿದ್ದು, ಕೇವಲ ಏಕದಿನ ಕ್ರಿಕೆಟ್‌ಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿದ್ದಾರೆ. ಇದಾದ ಮೇಲೆ ಅವರಿಬ್ಬರೂ ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ಆಡಿದರು. ನಂತರ ದಕ್ಷಿಣ ಆಫ್ರಿಕಾ ಎದುರು ಸರಣಿಯಲ್ಲಿಯೂ ಮಿಂಚಿದರು.

ಯುವ ಆಟಗಾರ ಶುಭಮನ್ ಗಿಲ್ ಅವರಿಗೆ ಟೆಸ್ಟ್ ಮತ್ತು ಏಕದಿನ ತಂಡಗಳ ನಾಯಕತ್ವ ನೀಡಲಾಯಿತು. ಇಂಗ್ಲೆಂಡ್ ಎದುರಿನ ಟೆಸ್ಟ್‌ ಸರಣಿಯಲ್ಲಿ ಭಾರತವು ಸಮಬಲ ಸಾಧಿಸಿತು. ಆದರೆ, ತವರಿಗೆ ಮರಳಿದ ನಂತರ ವೆಸ್ಟ್‌ ಇಂಡೀಸ್ ಎದುರಿನ ಸರಣಿ ಗೆದ್ದ ಭಾರತ ದಕ್ಷಿಣ ಆಫ್ರಿಕಾ ಎದುರು ಮುಗ್ಗರಿಸಿತು. ಇದೇ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್‌ ಆಗಿರುವ ದಕ್ಷಿಣ ಆಫ್ರಿಕಾ, ಭಾರತದಲ್ಲಿ ಎರಡು ದಶಕಗಳ ನಂತರ ಟೆಸ್ಟ್ ಸರಣಿ ಜಯಿಸಿತು. 

ಚಾಂಪಿಯನ್ಸ್‌ ಟ್ರೋಫಿಯೊಂದಿಗೆ ಭಾರತ ತಂಡ

ಏಷ್ಯಾ ಕಪ್ ವಿವಾದ 

ಪಹಲ್ಗಾಮ್ ಭಯೋತ್ಪಾದನಾ ದಾಳಿಯನ್ನು ಖಂಡಿಸಿದ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಆಡಲು ನಿರಾಕರಿಸಿತು. ಅದರಿಂದಾಗಿ ದುಬೈನಲ್ಲಿ ಪಂದ್ಯಗಳನ್ನು ಆಯೋಜಿಸ
ಲಾಯಿತು. ಈ ಟೂರ್ನಿಯಲ್ಲಿ ಭಾರತ ತಂಡವು ಪಾಕಿಸ್ತಾನ ಎದುರಿನ ಪಂದ್ಯಗಳನ್ನು ಬಹಿಷ್ಕರಿಸಬೇಕು ಎಂಬ ಒತ್ತಾಯಗಳು ಕೇಳಿಬಂದವು. ಆದರೆ ಸೂರ್ಯಕುಮಾರ್ ಯಾದವ್ ನಾಯಕತ್ವದ ತಂಡವು ಆಡಿತು. ಫೈನಲ್ ಸೇರಿದಂತೆ ಮೂರು ಪಂದ್ಯಗಳಲ್ಲಿ ಪಾಕ್ ವಿರುದ್ಧ ಗೆದ್ದಿತು. ಈ ಪಂದ್ಯಗಳಲ್ಲಿ ಪಾಕ್ ಆಟಗಾರರಿಗೆ ಹಸ್ತಲಾಘವ ಮಾಡಲು ಭಾರತದ ಆಟಗಾರರು ತಿರಸ್ಕರಿಸಿದರು. ಫೈನಲ್‌ನಲ್ಲಿ ಗೆದ್ದ ಭಾರತವು  ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಪಾಕಿಸ್ತಾನದ ಸಚಿವ ಮೊಹ್ಸಿನ್ ನಕ್ವಿಯಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡ ನಿರಾಕರಿಸಿತು. ಟ್ರೋಫಿಯನ್ನು ಎಸಿಸಿ ಕಚೇರಿಯಲ್ಲಿಟ್ಟಿದ್ದು ಇದುವರೆಗೂ ಭಾರತಕ್ಕೆ ಹಸ್ತಾಂತರಿಸಿಲ್ಲ.

ದೇಶಿ ಕ್ರಿಕೆಟ್‌ನಲ್ಲಿ 2024-25ರ ಸಾಲಿನ ರಣಜಿ ಟ್ರೋಫಿಯನ್ನು ವಿದರ್ಭ ಗೆದ್ದುಕೊಂಡಿತು.  ಸೈಯದ್ ಮುಷ್ತಾಕ್ ಟಿ20 ಟ್ರೋಫಿಯನ್ನು ಇಶಾನ್ ಕಿಶನ್ ನಾಯಕತ್ವದ ಜಾರ್ಖಂಡ್ ಜಯಿಸಿತು.

ಹೊಸ ಅಧ್ಯಕ್ಷರು

ಈ ವರ್ಷ ಬಿಸಿಸಿಐಗೆ ಹೊಸ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಮಿಥುನ್ ಮನ್ಹಾಸ್ ಅವರು ನೇಮಕವಾದರು. ದೇವಜೀತ್ ಸೈಕಿಯಾ ಅವರು ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ರಘುರಾಮ್ ಭಟ್ ಅವರು ಖಜಾಂಚಿಯಾಗಿ ನೇಮಕವಾಗಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅಧ್ಯಕ್ಷರಾಗಿ ಆಯ್ಕೆಯಾದರು.

ಸಂಭ್ರಮ–ದುರಂತ

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ 18 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಬಾರಿ ಚಾಂಪಿಯನ್ ಆಯಿತು. ಅಪಾರ ಸಂಖ್ಯೆಯ ಅಭಿಮಾನಿಗಳ ಕನಸು ಕೈಗೂಡಿತು. ರಜತ್ ಪಾಟೀದಾರ್ ನಾಯಕತ್ವ ವಹಿಸಿಕೊಂಡ ಮೊದಲ ಟೂರ್ನಿಯಲ್ಲಿಯೇ ತಂಡವು ಸಾಧನೆ ಮಾಡಿತು. ಆದರೆ  ಜೂನ್ 4ರಂದು ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ದುರ್ಮರಣಕ್ಕೀಡಾದರು.

ಮಹಿಳೆಯರ ಏಕದಿನ ವಿಶ್ವಕಪ್ ಜಯಿಸಿದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಉಪನಾಯಕಿ ಸ್ಮೃತಿ ಮಂದಾನ

ಅಂಧ ಮಹಿಳೆಯರ ವಿಶ್ವಕಪ್ ಜಯಿಸಿದ ಭಾರತ ತಂಡದ ನಾಯಕಿ ದೀಪಿಕಾ ಟಿ.ಸಿ.

ಮಹಿಳಾ ಸಾಧನೆ ಉತ್ತುಂಗಕ್ಕೆ

l ಭಾರತ ಮಹಿಳಾ ಕ್ರಿಕೆಟ್ ತಂಡವು ಇದೇ ಮೊದಲ ಸಲ ಏಕದಿನ ವಿಶ್ವಕಪ್ ಜಯಿಸಿತು. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡವು ನವೀ ಮುಂಬೈನಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜಯಗಳಿಸಿತು

l ಬೆಂಗಳೂರಿನ ನಿಕಿ ಪ್ರಸಾದ್ ನಾಯಕಿಯಾಗಿದ್ದ 19 ವರ್ಷದೊಳಗಿನವರ ಮಹಿಳಾ ಕ್ರಿಕೆಟ್ ತಂಡವೂ ಫೆಬ್ರುವರಿಯಲ್ಲಿ ಮಲೇಷ್ಯಾದಲ್ಲಿ ಟಿ20 ವಿಶ್ವಕಪ್ ಜಯಿಸಿತು

l ದೀಪಿಕಾ ಟಿ.ಸಿ ನಾಯಕತ್ವದ ಭಾರತ ಅಂಧ ಮಹಿಳಾ ತಂಡವು ಅಂಧರ ಕ್ರಿಕೆಟ್ ವಿಶ್ವಕಪ್ ಜಯಿಸಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.