ADVERTISEMENT

ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್‌ಗೆ ಚಿಕಿತ್ಸೆ ನೀಡಿದ್ದ ಭಾರತದ ವೈದ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ನವೆಂಬರ್ 2021, 5:27 IST
Last Updated 13 ನವೆಂಬರ್ 2021, 5:27 IST
ಮೊಹಮ್ಮದ್ ರಿಜ್ವಾನ್‌ಗೆ ಚಿಕಿತ್ಸೆ ನೀಡಿದ್ದ ಭಾರತದ ವೈದ್ಯ
ಮೊಹಮ್ಮದ್ ರಿಜ್ವಾನ್‌ಗೆ ಚಿಕಿತ್ಸೆ ನೀಡಿದ್ದ ಭಾರತದ ವೈದ್ಯ   

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಐಸಿಯುನಲ್ಲಿದ್ದ ಪಾಕಿಸ್ತಾನದ ಆಟಗಾರ ಮೊಹಮ್ಮದ್ ರಿಜ್ವಾನ್ ಅವರಿಗೆ ಭಾರತದ ವೈದ್ಯ ಚಿಕಿತ್ಸೆ ನೀಡಿದ್ದರು ಎಂಬುದು ತಿಳಿದು ಬಂದಿದೆ.

ಎದೆಯ ಸೋಂಕಿನಿಂದ ಬಳಲುತ್ತಿದ್ದ ರಿಜ್ವಾನ್ ಎರಡು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಚೇತರಿಸಿಕೊಂಡು ಸೆಮಿಫೈನಲ್‌ನಲ್ಲಿ ಆಡಿದ್ದರು.

ಅನಾರೋಗ್ಯವನ್ನು ಲೆಕ್ಕಿಸದೆ ಮೈದಾನಕ್ಕಿಳಿದ ರಿಜ್ವಾನ್ ಅಮೋಘ ಅರ್ಧಶತಕ ಸಾಧನೆ ಮಾಡಿದರು. ರಿಜ್ವಾನ್ ಅರ್ಪಣಾ ಮನೋಭಾವಕ್ಕೆ ಕ್ರಿಕೆಟ್ ವಲಯದಿಂದ ಮೆಚ್ಚುಗೆಗೆಪಾತ್ರವಾಗಿದೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ಭಾರತ ಮೂಲದ ವೈದ್ಯ ಸಾಹೀರ್‌ ಸೈನಾಲಬ್ದೀನ್, ಪಾಕಿಸ್ತಾನ ವಿಕೆಟ್‌ ಕೀಪರ್‌ನ ಆಟದ ಬಗೆಗಿರುವ ಮನೋಭಾವ ಮತ್ತು ಧೈರ್ಯವನ್ನು ಶ್ಲಾಘಿಸಿದ್ದಾರೆ.

‘ ಐಸಿಯುನಲ್ಲಿದ್ದಾಗಲೂ ನಾನು ಆಡಬೇಕು. ತಂಡದೊಂದಿಗೆ ಇರಬೇಕು ಎಂದಿದ್ದರು’ ಎಂದು ಹೇಳಿರುವುದಾಗಿ ದುಬೈನ ಮೆಡಿಯೊರ್‌ ಆಸ್ಪತ್ರೆಯಲ್ಲಿ ಶ್ವಾಸಕೋಶ ತಜ್ಞರಾಗಿರುವ ಸಾಹೀರ್‌ ತಿಳಿಸಿದರು.

'ದೇಶಕ್ಕಾಗಿ ಮತ್ತು ನಿರ್ಣಾಯಕ ನಾಕೌಟ್ ಪಂದ್ಯದಲ್ಲಿ ಆಡಲು ರಿಜ್ವಾನ್ ಅತಿಯಾದ ಆಸೆಯನ್ನು ಹೊಂದಿದ್ದರು. ಅವರು ಬಲಾಶಾಲಿ, ದೃಢನಿಶ್ಚಯ ಹಾಗೂ ಆತ್ಮವಿಶ್ವಾಸವನ್ನು ಹೊಂದಿದ್ದಾರೆ. ಸಾಮಾನ್ಯವಾಗಿ ಯಾರಾದರೂ ಚೇತರಿಸಿಕೊಳ್ಳಲು 5ರಿಂದ 7 ದಿನಗಳು ತೆಗೆದುಕೊಳ್ಳುತ್ತದೆ. ಆದರೆ ರಿಜ್ವಾನ್ ಚೇತರಿಸಿಕೊಂಡಿರುವುದನ್ನು ನೋಡಿ ನಾನು ಆಶ್ಚರ್ಯಚಕಿತನಾಗಿದ್ದೇನೆ' ಎಂದು ಹೇಳಿದರು.

ರಿಜ್ವಾನ್ ಆಕರ್ಷಕ ಅರ್ಧಶತಕದ ಹೊರತಾಗಿಯೂ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಐದು ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು. ಈ ಮೂಲಕ ವಿಶ್ವಕಪ್ ಟ್ರೋಫಿ ಕನಸು ಭಗ್ನಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.