
ವಡೋದರ: ಟೀಂ ಇಂಡಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಪರ ಭಾರತ ಮೂಲದ ಆಟಗಾರ ಆದಿತ್ಯ ಅಶೋಕ್ ಸ್ಥಾನ ಪಡೆದಿದ್ದಾರೆ.
ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. 23 ವರ್ಷದ ಆದಿತ್ಯ ಅಶೋಕ್ ಅವರು ನ್ಯೂಜಿಲೆಂಡ್ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.
ಆದಿತ್ಯ ಅಶೋಕ್, 2002ರ ಸೆ.5ರಂದು ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿದ್ದಾರೆ. ಅವರಿಗೆ ನಾಲ್ಕು ವರ್ಷದವರಿದ್ದಾಗ, ಕುಟುಂಬವು ನ್ಯೂಜಿಲೆಂಡ್‌ನ ಅಕ್ಲೆಂಡ್‌ಗೆ ಸ್ಥಳಾಂತರವಾಗಿದೆ.
2020ರಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡದಲ್ಲಿ ಆಡಿದ್ದ ಆದಿತ್ಯ ಅಶೋಕ್, 2023ರಲ್ಲಿ ಯುಎಇ ವಿರುದ್ಧದ ಟಿ–20 ಸರಣಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅದೇ ವರ್ಷ ತವರಿನಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯಲ್ಲಿ ತಂಡದಲ್ಲಿ ಸ್ಥಾನಪಡೆದಿದ್ದರು.
2023ರಲ್ಲಿ ಬೆನ್ನೆಲುಬಿನ ಗಾಯದಿಂದ 10 ತಿಂಗಳ ವಿಶ್ರಾಂತಿ ಪಡೆದಿದ್ದರು. ನಂತರ ದೇಶಿ ಕ್ರಿಕೆಟ್‌ನಲ್ಲಿ ಅಕ್ಲೆಂಡ್ ಪರ ಉತ್ತಮ ಆಟವಾಡಿದ್ದ ಆದಿತ್ಯ ಅಶೋಕ್, 2025ರಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಗುತ್ತಿಗೆ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರು.
ಬಲಗೈ ಸ್ಪಿನ್ನರ್ ಆಗಿರುವ ಆದಿತ್ಯ ಅಶೋಕ್, ಏಕದಿನ ಕ್ರಿಕೆಟ್‌ನಲ್ಲಿ 2 ಪಂದ್ಯಗಳಿಂದ 1 ವಿಕೆಟ್ ಪಡೆದಿದ್ದಾರೆ. ಒಂದೇ ಟಿ–20 ಪಂದ್ಯವಾಡಿದ್ದು, ಅದರಲ್ಲಿ 1 ವಿಕೆಟ್ ಕಬಳಿಸಿದ್ದಾರೆ.
ನ್ಯೂಜಿಲೆಂಡ್ ಪರ ಆಡಿದ ಭಾರತ ಮೂಲದ ಆಟಗಾರರು:
ನ್ಯೂಜಿಲೆಂಡ್ ತಂಡದ ಪ್ರಮುಖ ಆಲ್‌ರೌಂಡರ್ ರಚಿನ್ ರವೀಂದ್ರ, ಇಶ್ ಸೋಧಿ, ಜೀತನ್ ಪಟೇಲ್, ದೀಪಕ್ ಪಟೇಲ್, ಅಜಾಜ್ ಪಟೇಲ್ ಅವರು ಭಾರತ ಮೂಲದ ಆಟಗಾರರಾಗಿದ್ದಾರೆ. ಇವರೆಲ್ಲರೂ ಸ್ಪಿನ್ ಬೌಲರ್‌ಗಳು ಎನ್ನುವುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.