ಸಾಂದರ್ಭಿಕ ಚಿತ್ರ
ಧರ್ಮಶಾಲಾ: ಭಾರತದ ಮೊತ್ತಮೊದಲ ಹೈಬ್ರಿಡ್ ಪಿಚ್‌ಅನ್ನು ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ವರ್ಣರಂಜಿತ ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು.
ಐಪಿಎಲ್ ಚೇರ್ಮನ್ ಅರುಣ್ ಧುಮಾಲ್, ಕ್ರಿಕೆಟ್ ರಂಗದ ಗಣ್ಯರು, ಪಿಚ್ ತಯಾರಕ ನೆದರ್ಲೆಂಡ್ಸ್ ಮೂಲದ ಎಸ್‌ಐಎಸ್ ಸಂಸ್ಥೆಯ ಅಂತರರಾಷ್ಟ್ರೀಯ ಕ್ರಿಕೆಟ್ ನಿರ್ದೇಶಕ ಹಾಗೂ ಇಂಗ್ಲೆಂಡ್‌ನ ಮಾಜಿ ಆಟಗಾರ ಪಾಲ್ ಟೇಲರ್ ಸಮಾರಂಭದಲ್ಲಿ ಹಾಜರಿದ್ದರು.
‘ಹೈಬ್ರಿಡ್ ಪಿಚ್‌ನ ಪರಿಚಯವು ಭಾರತದಲ್ಲಿ ಕ್ರಿಕೆಟ್ ಕ್ರಾಂತಿಗೆ ಕಾರಣವಾಗಲಿದೆ. ಇಂಗ್ಲೆಂಡ್‌ನ ಹೆಗ್ಗುರುತುಗಳಾದ ಲಾರ್ಡ್ಸ್, ದಿ ಓವಲ್ ಕ್ರೀಡಾಂಗಣದಲ್ಲಿ ಇಂಥ ಹೈಬ್ರಿಡ್ ಪಿಚ್‌ಗಳಿವೆ’ ಎಂದು ಹಿಮಾಚಲ ಪ್ರದೇಶದವರೇ ಆದ ಧುಮಾಲ್ ಹೇಳಿದರು.
ಹೈಬ್ರಿಡ್ ಪಿಚ್ ಸಾಮಾನ್ಯ ಟರ್ಫ್ ಮತ್ತು ಸಿಂಥೆಟಿಕ್ ಫೈಬರ್‌ನ ಸಂಯೋಜನೆಯಾಗಿದ್ದು, ಹೆಚ್ಚು ಕಾಲ ಬಾಳಿಕೆ ಬರಲಿದೆ. ಗುಣಮಟ್ಟ ಕೆಡದೇ ಹೆಚ್ಚು ಆಡಲೂ ಸಹಾಯವಾಗಲಿದೆ. ಪಿಚ್ ಸಿಬ್ಬಂದಿ ಒತ್ತಡವನ್ನೂ ತಗ್ಗಿಸಲಿದೆ. ಇದರಲ್ಲಿ ಶೇ 5ರಷ್ಟು ಮಾತ್ರ ಸಿಂಥೆಟಿಕ್ ಫೈಬರ್ ಇರಲಿದ್ದು, ಉಳಿದಂತೆ ‘ಸಹಜ ಪಿಚ್’ನ ಅಂಶಗಳೂ ಇರುವುದರಿಂದ ತೀರಾ ಭಿನ್ನವೆನಿಸದು.
‘ಐಸಿಸಿ ಸಮ್ಮತಿಯೊಂದಿಗೆ, ಇಂಥ ಪಿಚ್‌ಗಳು ಕ್ರೀಡೆಯ ಮೇಲೆ ಬೀರುವ ಸಕಾರಾತ್ಮಕ ಪರಿಣಾಮಗಳನ್ನು ಕಾಣಲು ತವಕದಿಂದ ಇದ್ದೇವೆ’ ಎಂದು ಟೇಲರ್ ಹೇಳಿದರು. ಮುಂದೆ ಮುಂಬೈ ಮತ್ತು ಅಹಮದಾಬಾದ್‌ನಲ್ಲೂ ಇಂಥ ಪಿಚ್ ಅಳವಡಿಕೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.