ನವದೆಹಲಿ: ಬಾಂಗ್ಲಾದೇಶದಲ್ಲಿ ಚುಟುಕು ಮತ್ತು ಏಕದಿನ ಕ್ರಿಕೆಟ್ ಸರಣಿಗಾಗಿ ನಿಗದಿಯಾಗಿದ್ದ ಭಾರತ ತಂಡದ ಪ್ರವಾಸ ಇದೀಗ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ಶೇಖ್ ಹಸೀನಾ ಪದಚ್ಯುತಿಯ ನಂತರ ಅಲ್ಲಿ ತಲೆದೋರಿದ್ದ ಆಂತರಿಕ ಸಂಘರ್ಷ ಇನ್ನೂ ಶಮನ ಆಗದಿರುವುದು ಬಿಸಿಸಿಐ ಕಳವಳಕ್ಕೆ ಕಾರಣ ಎನ್ನಲಾಗಿದೆ.
ಭಾರತ ತಂಡವು ಆಗಸ್ಟ್ 17ರಿಂದ 31ರ ವರೆಗಿನ ಪ್ರವಾಸದಲ್ಲಿ ತಲಾ ಮೂರು ಟಿ20 ಹಾಗೂ ಏಕದಿನ ಪಂದ್ಯಗಳನ್ನು ಆಡಬೇಕಾಗಿತ್ತು.
‘ನೆರೆಯ ದೇಶದಲ್ಲಿ ಅಶಾಂತಿಯ ವಾತಾವರಣ ಇನ್ನೂ ಮುಂದುವರಿದಿರುವುದರಿಂದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಚಿಂತಿತವಾಗಿದೆ’ ಎಂದು ಮಂಡಳಿಯ ಮೂಲವೊಂದು ಪಿಟಿಐಗೆ ತಿಳಿಸಿದೆ
‘ಭಾರತ–ಬಾಂಗ್ಲಾದೇಶ ವೈಟ್‌ಬಾಲ್ ಸರಣಿ ರದ್ದಾಗಿಲ್ಲ. 2027ರ ನಡೆಯಲಿರುವ ಐಸಿಸಿ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲು ಈ ಸರಣಿಯ ಅಂಕಗಳು ಮಹತ್ವದ್ದಾಗಿವೆ. ಹೀಗಾಗಿ, ಸರಣಿ ಬಹು ಮಟ್ಟಿಗೆ 2026ರಲ್ಲಿ ನಡೆಯುವ ಸಾಧ್ಯತೆ ಇದೆ’ ಎಂದು ಅದು ತಿಳಿಸಿದೆ.
ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದು, ಸ್ಥಿರ ಸರ್ಕಾರ ರಚನೆಯಾಗುವವರೆಗೆ ಪ್ರವಾಸ ಕೈಗೊಳ್ಳದಿರಲು ಬಿಸಿಸಿಐ ನಿರ್ಧರಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಾಂಗ್ಲಾದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.