ADVERTISEMENT

ನಾಯಕತ್ವದಿಂದ ಇಳಿಸುವ ಬಗ್ಗೆ 90 ನಿಮಿಷಗಳ ಮುನ್ನವಷ್ಟೇ ತಿಳಿಸಲಾಗಿತ್ತು: ಕೊಹ್ಲಿ

ದಕ್ಷಿಣ ಆಫ್ರಿಕಾಕ್ಕೆ ಭಾರತ ಕ್ರಿಕೆಟ್‌ ತಂಡ; ರೋಹಿತ್‌ಗೆ ಪೂರ್ಣ ಬೆಂಬಲದ ಭರವಸೆ

ಏಜೆನ್ಸೀಸ್
Published 15 ಡಿಸೆಂಬರ್ 2021, 17:11 IST
Last Updated 15 ಡಿಸೆಂಬರ್ 2021, 17:11 IST
ವಿರಾಟ್ ಕೊಹ್ಲಿ: ಎಎಫ್‌ಪಿ ಚಿತ್ರ
ವಿರಾಟ್ ಕೊಹ್ಲಿ: ಎಎಫ್‌ಪಿ ಚಿತ್ರ   

ನವದೆಹಲಿ: ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸುವ ಮೊದಲು ಅಭಿಪ್ರಾಯ ತಿಳಿಸಲು ಕೇವಲ 90 ನಿಮಿಷಗಳ ಅವಕಾಶವನ್ನಷ್ಟೇ ಕೊಡಲಾಗಿತ್ತು ಎಂದು ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಟ್ವೆಂಟಿ20 ತಂಡದ ನಾಯಕತ್ವ ತೊರೆಯುವ ವಿಷಯ ತಿಳಿಸಿದಾಗ ಮರುಚಿಂತನೆ ಮಾಡುವಂತೆ ಭಾರತ ಕ್ರಿಕೆಟ್ ನಿಯಂ ತ್ರಣ ಮಂಡಳಿ (ಬಿಸಿಸಿಐ) ಕೋರಿಲ್ಲ ಎಂದು ಸ್ಪಷ್ಟಪಡಿಸಿದರು.

ಟ್ವೆಂಟಿ20 ವಿಶ್ವಕಪ್ ಟೂರ್ನಿ ಮುಗಿದ ನಂತರ ವಿರಾಟ್ ಕೊಹ್ಲಿ ನಾಯಕತ್ವ ತೊರೆದಿದ್ದರು. ಕೆಲವು ದಿನಗಳ ನಂತರ ದಕ್ಷಿಣ ಆಫ್ರಿಕಾ ಪ್ರವಾಸ ಕ್ಕಾಗಿ ಏಕದಿನ ತಂಡವನ್ನು ಪ್ರಕಟಿಸಿದಾಗ ನಾಯಕತ್ವವನ್ನು ರೋಹಿತ್ ಶರ್ಮಾ ಅವರಿಗೆ ವಹಿಸಲಾಗಿತ್ತು. ತಂಡ ದಕ್ಷಿಣ ಆಫ್ರಿಕಾಗೆ ಹೊರಡಲು ಸಜ್ಜಾಗುತ್ತಿದ್ದಂತೆ ರೋಹಿತ್ ಶರ್ಮಾ ಗಾಯದ ಸಮಸೆಯಿಂದಾಗಿ ಟೆಸ್ಟ್‌ ಸರಣಿಯಲ್ಲಿ ಆಡುವುದಿಲ್ಲ ಎಂದು ತಿಳಿಸಲಾಗಿತ್ತು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಏಕದಿನ ಸರಣಿಯಲ್ಲಿ ಆಡದೇ ಇರಲು ನಿರ್ಧರಿಸಿದ್ದಾರೆ ಎಂಬ ವದಂತಿ ಹಬ್ಬಿತ್ತು.

ADVERTISEMENT

ಈ ವಿವಾದಗಳ ಕುರಿತು ಮಾತನಾಡಿದ ಕೊಹ್ಲಿ ತಾವು ಏಕದಿನ ಸರಣಿಗೆ ಲಭ್ಯ ಇರುವುದಾಗಿಯೂ ರೋಹಿತ್ ಶರ್ಮಾ ಅತ್ಯುತ್ತಮ ಆಟಗಾರನಾಗಿದ್ದು ಅವರ ನಾಯಕತ್ವದಡಿ ತಂಡಕ್ಕೆ ಪೂರ್ಣ ಬೆಂಬಲ ನೀಡುವುದಾಗಿಯೂ ತಿಳಿಸಿದರು. ಏಕದಿನ ಮತ್ತು ಟ್ವೆಂಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲಿಸಿಕೊಡಲಾಗದೇ ಇದ್ದುದೇ ತಮ್ಮನ್ನು ನಾಯಕತ್ವದಿಂದ ವಜಾ ಮಾಡಲು ಕಾರಣ ಎಂದು ಅಭಿಪ್ರಾಯಪಟ್ಟರು.

‘ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆ ಮಾಡುವ ಒಂದೂವರೆ ತಾಸು ಮೊದಲು ಆಯ್ಕೆ ಸಮಿತಿಯವರು ನನ್ನನ್ನು ಸಂಪರ್ಕಿಸಿದ್ದರು. ಈ ಸಂದರ್ಭದಲ್ಲಿ ಟ್ವೆಂಟಿ20 ನಾಯಕತ್ವದ ಕುರಿತು ಪ್ರಸ್ತಾಪ ಮಾಡಲೇ ಇಲ್ಲ. ಏಕದಿನ ತಂಡದ ನಾಯಕತ್ವವನ್ನು ಬದಲಿಸುವುದಾಗಿ ತಿಳಿಸಿದರು. ಆಗಲಿ, ಪರವಾಗಿಲ್ಲ ಎಂದು ನಾನು ಹೇಳಿದೆ’ ಎಂದು 33 ವರ್ಷದ ಕೊಹ್ಲಿ ವಿವರಿಸಿದರು.

ಟ್ವೆಂಟಿ20 ತಂಡದ ನಾಯಕತ್ವವನ್ನು ಬಿಡುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಕೊಹ್ಲಿ ಹೇಳಿದ್ದರಿಂದಾಗಿ ಏಕದಿನ ತಂಡದ ನಾಯಕತ್ವವನ್ನು ಕೂಡ ಬದಲಿಸಲಾಯಿತು. ಇಲ್ಲವಾದರೆ ತಂಡಗಳಿಗೆ ನಾಯಕತ್ವ ‘ಭಾರ’ ಕಾಡುತ್ತಿತ್ತು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈಚೆಗೆ ಹೇಳಿದ್ದರು. ಕೊಹ್ಲಿ ಬುಧವಾರ ಆಡಿದ ಮಾತುಗಳು ಗಂಗೂಲಿ ಅವರ ಹೇಳಿಕೆಗೆ ತದ್ವಿರುದ್ಧವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.