ADVERTISEMENT

INDW vs AUSW: ಗಾಯದ ಮೇಲೆ ಬರೆ: ಸರಣಿ ಸೋಲಿನ ಜೊತೆಗೆ ಕೌರ್ ಬಳಗಕ್ಕೆ ದಂಡದ ಶಾಕ್

ಪಿಟಿಐ
Published 23 ಸೆಪ್ಟೆಂಬರ್ 2025, 7:11 IST
Last Updated 23 ಸೆಪ್ಟೆಂಬರ್ 2025, 7:11 IST
ಭಾರತ ಮಹಿಳಾ ಕ್ರಿಕೆಟ್ ತಂಡ
ಭಾರತ ಮಹಿಳಾ ಕ್ರಿಕೆಟ್ ತಂಡ   

ನವದೆಹಲಿ: ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು 1–2ರ ಅಂತರದಲ್ಲಿ ಸೋತು ನಿರಾಸೆ ಅನುಭವಿಸಿದೆ. ಈ ನಡುವೆ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ ಟೀಂ ಇಂಡಿಯಾ ಮಹಿಳಾ ತಂಡಕ್ಕೆ ಪಂದ್ಯ ಶುಲ್ಕದ ಶೇ 10 ರಷ್ಟು ದಂಡವನ್ನು ವಿಧಿಸಲಾಗಿದೆ.

ಶನಿವಾರ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಮುಕ್ತಾಯಗೊಂಡ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ ಸ್ಫೋಟಕ ಶತಕ ಸಿಡಿಸಿದ್ದರ ಹೊರತಾಗಿಯೂ ಟೀಂ ಇಂಡಿಯಾ 43 ರನ್‌ಗಳ ಅಂತರದಲ್ಲಿ ಪಂದ್ಯ ಸೋತು ನಿರಾಸೆ ಅನುಭವಿಸಿತು. ಮಾತ್ರವಲ್ಲ, ಸರಣಿಯನ್ನು ಕೂಡ ಕೈಚಲ್ಲಿತು.

ಸರಣಿ ಸೋಲಿನ ನಡುವೆ ಭಾರತ ತಂಡ ತನಗೆ ನೀಡಿದ ನಿಗದಿತ ಸಮಯಕ್ಕಿಂತ 2 ಓವರ್‌ಗಳ ನಿಧಾನಗತಿಯ ಬೌಲಿಂಗ್ ಮಾಡಿದ್ದರಿಂದ ಐಸಿಸಿ ಅಂತರರಾಷ್ಟ್ರೀಯ ಪಂದ್ಯ ರೆಫರಿಗಳ ಸಮಿತಿಯ ಜಿ.ಎಸ್. ಲಕ್ಷ್ಮಿಯವರು ಪಂದ್ಯದ ಶುಲ್ಕದ ಶೇ 10 ರಷ್ಟು ದಂಡ ವಿಧಿಸಿ ಆದೇಶಿಸಿದ್ದಾರೆ.

ADVERTISEMENT

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಐಸಿಸಿ ‘ಆಟಗಾರರ ಮತ್ತು ಅವರ ಸಹಾಯಕ ಸಿಬ್ಬಂದಿಗೆ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಆಟಗಾರರು ನಿಗದಿತ ಸಮಯದಲ್ಲಿ ಬೌಲ್ ಮಾಡದಿದ್ದರೆ ಪ್ರತಿ ಓವರ್‌ಗೆ ಪಂದ್ಯದ ಶುಲ್ಕದಲ್ಲಿ ಶೇಕಡಾ 5ರಷ್ಟು ದಂಡ ವಿಧಿಸಲಾಗುತ್ತದೆ‘ ಎಂದು ತಿಳಿಸಿದೆ.

ಮಾತ್ರವಲ್ಲ, ‘ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ತಪ್ಪೊಪ್ಪಿಕೊಂಡಿರುವುದರಿಂದ ಹೆಚ್ಚಿನ ವಿಚಾರಣೆಯ ಅಗತ್ಯವಿಲ್ಲ‘ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.