ADVERTISEMENT

IPL-2020 | ಮೊದಲ ಜಯದತ್ತ ಮುಂಬೈ ಚಿತ್ತ

ದಿನೇಶ್ ಕಾರ್ತಿಕ್ ಬಳಗಕ್ಕೆ ರೋಹಿತ್ ಪಡೆಯ ಸವಾಲು

ಪಿಟಿಐ
Published 22 ಸೆಪ್ಟೆಂಬರ್ 2020, 22:21 IST
Last Updated 22 ಸೆಪ್ಟೆಂಬರ್ 2020, 22:21 IST
ದಿನೇಶ್‌ ಕಾರ್ತಿಕ್‌
ದಿನೇಶ್‌ ಕಾರ್ತಿಕ್‌   
""
""

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಬುಧವಾರ ಕೋಲ್ಕತ್ತ ನೈಟ್ ರೈಡರ್ಸ್‌ ತಂಡವನ್ನು ಎದುರಿಸಲಿದೆ.

2013ರಿಂದ ಇಲ್ಲಿಯವರೆಗೆ ಮುಂಬೈ ತಂಡವು ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನು ಗೆದ್ದಿಲ್ಲ. ಈ ಹಿಂದೆ ಯುಎಇಯಲ್ಲಿ ನಡೆದಿದ್ದ ಟೂರ್ನಿಯಲ್ಲಿ ಮುಂಬೈ ಬಳಗವು ಕಹಿಯನ್ನೇ ಹೆಚ್ಚು ಅನುಭವಿಸಿತ್ತು. ಅದನ್ನೆಲ್ಲ ಹಿಂದಿಕ್ಕಿ ಮುಂದಿನ ಪಂದ್ಯದಲ್ಲಿ ಪುಟಿದೇಳುವ ಉತ್ಸಾಹದಲ್ಲಿ ರೋಹಿತ್ ಬಳಗವಿದೆ. ಕೆಕೆಆರ್ ಮತ್ತು ಮುಂಬೈ ನಡುವಣ ಪಂದ್ಯವು ‘ಸ್ಫೋಟಕ’ ಶೈಲಿಯ ಬ್ಯಾಟ್ಸ್‌ಮನ್‌ಗಳ ನಡುವಿನ ಕದನವಾಗಿ ಮಾರ್ಪಡುವ ಸಾಧ್ಯತೆಗಳು ಹೆಚ್ಚಿವೆ.

ಕೆಕೆಆರ್‌ನಲ್ಲಿರುವ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್, ವಿಂಡೀಸ್ ದೈತ್ಯ ಆ್ಯಂಡ್ರೆ ರಸೆಲ್ ಹೋದ ವರ್ಷ ಆಡಿದ ಆಟವನ್ನು ಮರೆಯಲು ಸಾಧ್ಯವೇ? ಈ ವರ್ಷವೂ ಅವರಿಂದ ಅದೇ ತರಹದ ಆಟ ಹೊರಹೊಮ್ಮುವ ನಿರೀಕ್ಷೆ ಇದೆ. ನಾಯಕ ದಿನೇಶ್ ಕಾರ್ತಿಕ್ ಕೂಡ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಪಣಕ್ಕೊಡ್ಡಲು ಸಿದ್ಧರಾಗಿದ್ದಾರೆ. ನಿತೀಶ್ ರಾಣಾ, ರಾಹುಲ್ ತ್ರಿಪಾಠಿ ತಮ್ಮ ಭುಜಬಲ ಮೆರೆಯುವ ತವಕದಲ್ಲಿದ್ದಾರೆ. ಆಲ್‌ರೌಂಡರ್ ಸುನೀಲ್ ನಾರಾಯಣ್, ಮಧ್ಯಮವೇಗಿ ಕನ್ನಡಿಗ ಪ್ರಸಿದ್ಧ ಕೃಷ್ಣ, ಪ್ಯಾಟ್ ಕಮಿನ್ಸ್‌ ಎದುರಾಳಿ ಬ್ಯಾಟಿಂಗ್‌ ಪಡೆಗೆ ಬಿಸಿ ಮುಟ್ಟಿಸುವ ಸಿದ್ಧತೆಯಲ್ಲಿದ್ದಾರೆ.

ADVERTISEMENT

ಮುಂಬೈ ಇಂಡಿಯನ್ಸ್‌ ತಂಡದಲ್ಲಿ ರೋಹಿತ್ ಶರ್ಮಾ ಲಯ ಕಂಡುಕೊಂಡರೆ ರನ್‌ ಗಳಿಕೆಯು ಸರಾಗವಾಗುತ್ತದೆ. ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಸೌರಭ್ ತಿವಾರಿ, ಕ್ವಿಂಟನ್ ಡಿ ಕಾಕ್, ಕೀರನ್ ಪೊಲಾರ್ಡ್ ಮತ್ತು ಸೂರ್ಯಕುಮಾರ್ ಯಾದವ್ ರನ್‌ ಹೊಳೆ ಹರಿಸಬಲ್ಲ ಸಮರ್ಥರು. ಬೌಲಿಂಗ್‌ನಲ್ಲಿ ಹೆಚ್ಚು ಸುಧಾರಣೆ ಕಾಣುವ ಅವಶ್ಯಕತೆ ಇದೆ. ‘ಡೆತ್‌ ಓವರ್‌’ ಪರಿಣತ ಜಸ್‌ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್‌, ಸ್ಪಿನ್ನರ್ ಕೃಣಾಲ್ ಪಾಂಡ್ಯ ಅವರು ಪಂದ್ಯ ಗೆಲ್ಲಿಸಿಕೊಡಬಲ್ಲ ಶಕ್ತಿಯುಳ್ಳವರು. ಆದರೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅಂಬಟಿ ರಾಯುಡು ಮತ್ತು ಫಾಫ್ ಡು ಪ್ಲೆಸಿ ಅವರ ಮುಂದೆ ವೈಫಲ್ಯ ಅನುಭವಿಸಿದ್ದ ಬೌಲರ್‌ಗಳು ಈಗ ದಿನೇಶ್ ಬಳಗದ ಮುಂದೆ ಪುಟಿದೇಳುವ ಉತ್ತಾಹದಲ್ಲಿದ್ದಾರೆ.

ರೋಹಿತ್‌ ಶರ್ಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.