ADVERTISEMENT

IPL-2020: ಚೆನ್ನೈ –ಪಂಜಾಬ್ ‘ಕಿಂಗ್ಸ್‌’ ಹಣಾಹಣಿ

ಮಹೇಂದ್ರಸಿಂಗ್ ಧೋನಿ ಮುಂದೆ ರಾಹುಲ್ ಸವಾಲು

ಪಿಟಿಐ
Published 4 ಅಕ್ಟೋಬರ್ 2020, 3:34 IST
Last Updated 4 ಅಕ್ಟೋಬರ್ 2020, 3:34 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್   

ದುಬೈ: ಮೂರು ಸೋಲುಗಳಿಂದ ಕಂಗೆಟ್ಟಿರುವ ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಕಿಂಗ್ಸ್‌ ಇಲೆವನ್ ಪಂಜಾಬ್ ಮತ್ತು ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಭಾನುವಾರ ಮುಖಾಮುಖಿಯಾಗಲಿವೆ.

ಭಾರತ ಕ್ರಿಕೆಟ್ ತಂಡದಲ್ಲಿ ಧೋನಿ ನಿವೃತ್ತಿಯಿಂದ ತೆರವಾಗಿರುವ ವಿಕೆಟ್‌ಕೀಪರ್ ಸ್ಥಾನದ ‘ಉತ್ತರಾಧಿಕಾರಿ’ ಎಂದೇ ಬಿಂಬಿತವಾಗಿರುವ ರಾಹುಲ್, ಇದೇ ಮೊದಲ ಸಲ ಐಪಿಎಲ್‌ನಲ್ಲಿ ತಂಡದ ನಾಯಕತ್ವ ವಹಿಸಿದ್ದಾರೆ. ಧೋನಿಯ ಅನುಭವದ ಮುಂದೆ ರಾಹುಲ್ ಕಿರಿಯರು. ಆದರೆ ಟೂರ್ನಿಯನ್ನೇ ನೋಡುವುದಾದರೆ ಉಭಯ ತಂಡಗಳೂ ತಲಾ ನಾಲ್ಕು ಪಂದ್ಯಗಳನ್ನು ಆಡಿ, ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿಸಿವೆ.

ಆದರೆ ರನ್‌ಗಳ ಪ್ರವಾಹ ಹರಿಸುವುದರಲ್ಲಿ ಕಿಂಗ್ಸ್‌ ತಂಡವು ಮುಂಚೂಣಿ ಯಲ್ಲಿದೆ. ಕೆ.ಎಲ್. ರಾಹುಲ್ ಮತ್ತು ಮಯಂಕ್ ಅಗರವಾಲ್ ಅವರು ಈಗಾಗಲೇ ತಲಾ ಒಂದು ಶತಕ ಹೊಡೆ ದಿದ್ದಾರೆ. ನಿಕೋಲಸ್ ಪೂರನ್ ಕೂಡ ಕಳೆದ ಪಂದ್ಯದಲ್ಲಿ ಮಿಂಚಿದ್ದರು. ಆದರೆ ಕ್ರಿಸ್‌ ಗೇಲ್ ಅವರನ್ನು ಇದುವರೆಗೆ ಕಣಕ್ಕಿಳಿಸದ ತಂಡವು ಈ ಪಂದ್ಯದಲ್ಲಿ ಏನು ನಿರ್ಧಾರ ಮಾಡಲಿದೆ ಎಂಬ ಕುತೂಹಲ ಮೂಡಿದೆ. ಸತತ ವೈಫಲ್ಯ ಅನುಭವಿಸುತ್ತಿರುವ ಕರುಣ್ ನಾಯರ್, ಸರ್ಫರಾಜ್ ಖಾನ್ ಅವರ ಬಗ್ಗೆಯೂ ತಂಡವು ಗಂಭೀರವಾಗಿ ಯೋಚಿಸಬಹುದು. ಏಕೆಂದರೆ, ಚೆನ್ನೈ ತಂಡದಲ್ಲಿ ಬೌಲಿಂಗ್ ಪಡೆ ಉತ್ತಮವಾಗಿದೆ. ದೀಪಕ್ ಚಾಹರ್, ಪೀಯೂಷ್ ಚಾವ್ಲಾ ಅವರು ಜೊತೆಯಾಟಗಳನ್ನು ಮುರಿಯುವಲ್ಲಿ ನಿಷ್ಣಾತರು. ಚೆನ್ನೈ ತಂಡದ ವಾಟ್ಸನ್, ಅಂಬಟಿ ರಾಯುಡು ಅವರು ತಮ್ಮ ನೈಜ ಆಟಕ್ಕೆ ಮರಳಬೇಕಷ್ಟೇ. ಫಾಫ್ ಡು ಪ್ಲೆಸಿ ಉತ್ತಮ ಲಯದಲ್ಲಿದ್ದಾರೆ. ಆದರೆ ಕೇದಾರ್ ಜಾಧವ್ ಸತತ ವೈಫಲ್ಯ ಅನುಭವಿಸುತ್ತಿರುವುದು ಚಿಂತೆಯ ವಿಷಯ. ಕಳೆದ ಪಂದ್ಯದಲ್ಲಿ ಅರ್ಧಶತಕ ಗಳಿಸಿರುವ ರವೀಂದ್ರ ಜಡೇಜ ಬೌಲಿಂಗ್‌ನಲ್ಲಿಯೂ ಜಾದೂ ಮಾಡಬಲ್ಲರು.

ADVERTISEMENT

ಸತತ ಮೂರು ಪಂದ್ಯಗಳಲ್ಲಿ ಸೋತು ಗಾಯಗೊಂಡ ಹುಲಿಯಂತಾಗಿರುವ ಧೋನಿ, ಪಂಜಾಬ್ ಬಳಗಕ್ಕೆ ಪೆಟ್ಟು ನೀಡಲು ವಿಶೇಷ ತಂತ್ರಗಾರಿಕೆಯಿಂದ ಕಣಕ್ಕಿಳಿಯುವುದ ಖಚಿತ. ಅದನ್ನು ರಾಹುಲ್ ಹೇಗೆ ಎದುರಿಸುತ್ತಾರೆ ಎಂಬ ಕುತೂಹಲ ಗರಿಗೆದರಿದೆ.

**

ಚಾಂಪಿಯನ್ ಮುಂಬೈಗೆ ವಾರ್ನರ್ ಬಳಗದ ಸವಾಲು
ಶಾರ್ಜಾ (ಪಿಟಿಐ):
ಆತ್ಮವಿಶ್ವಾಸದ ಹೊನಲಲ್ಲಿ ತೇಲುತ್ತಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಭಾನುವಾರ ಮುಖಾಮುಖಿಯಾಗಲಿವೆ.

ಉಭಯ ತಂಡಗಳೂ ತಲಾ ನಾಲ್ಕು ಪಂದ್ಯಗಳನ್ನು ಆಡಿವೆ. ಎರಡರಲ್ಲಿ ಗೆದ್ದು, ಅಷ್ಟೇ ಪಂದ್ಯಗಳನ್ನು ಸೋತಿವೆ. ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಸನ್‌ರೈಸರ್ಸ್‌ ತಂಡವು ಸಾಧಾರಣ ಮೊತ್ತ ಗಳಿಸಿತ್ತು. ಆದರೂ ಏಳು ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್‌ ಎದುರು ಜಯಿಸಿತು. ಯುವ ಬ್ಯಾಟ್ಸ್‌ಮನ್ ಪ್ರಿಯಂ ಗಾರ್ಗ್ ಅವರ ಅಮೋಘ ಅರ್ಧಶತಕವು ಸನ್‌ರೈಸರ್ಸ್‌ ಗೆಲುವಿಗೆ ಪ್ರಮುಖ ಕಾರಣವಾಗಿತ್ತು.

ನಾಯಕ ಡೇವಿಡ್ ವಾರ್ನರ್, ಅಭಿಷೇಕ್ ವರ್ಮಾ ಮತ್ತು ಮನೀಷ್ ಪಾಂಡೆ ಕೂಡ ಉತ್ತಮ ಲಯದಲ್ಲಿದ್ದಾರೆ. ಜಾನಿ ಬೆಸ್ಟೊ ಮತ್ತು ಕೇನ್ ವಿಲಿಯಮ್ಸನ್ ಕೂಡ ಪಂದ್ಯ ಫಲಿತಾಂಶವನ್ನು ತಮ್ಮ ತಂಡದತ್ತ ಹೊರಳಿಸಿಕೊಳ್ಳಬಲ್ಲ ಚತುರರು.

ಆದರೆ, ಬೌಲಿಂಗ್ ವಿಭಾಗದಲ್ಲಿ ಸನ್‌ರೈಸರ್ಸ್‌ಗೆ ಈ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅಲಭ್ಯರಾಗುತ್ತಿದ್ದಾರೆ. ಚೆನ್ನೈ ಎದುರಿನ ಪಂದ್ಯದಲ್ಲಿ ಅವರು ಸ್ನಾಯುಸೆಳೆತದಿಂದ ಬಳಲಿದ್ದರು. ಆದ್ದರಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆದ್ದರಿಂದ ಎಡಗೈ ವೇಗಿ ಖಲೀಲ್ ಅಹಮದ್, ಸ್ಪಿನ್ನರ್ ರಶೀದ್ ಖಾನ್ ಮೇಲೆ ಹೆಚ್ಚಿನ ಹೊಣೆ ಬೀಳಲಿದೆ. ಭುವಿ ಬದಲಿಗೆ ಸಿದ್ಧಾರ್ಥ್ ಕೌಲ್ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ.

ಚಾಂಪಿಯನ್ ಮುಂಬೈ ತಂಡದಲ್ಲಿ ಸದ್ಯಕ್ಕೆ ಯಾರಿಗೂ ಗಾಯದ ಸಮಸ್ಯೆ ಇಲ್ಲ. ಕಿಂಗ್ಸ್‌ ಇಲೆವನ್ ಪಂಜಾಬ್ ಎದುರು ಜಯದ ನಂತರ ರೋಹಿತ್ ಶರ್ಮಾ ಬಳಗವು ನವೋಲ್ಲಾಸದಲ್ಲಿ ಪುಟಿಯುತ್ತಿದೆ. ರೋಹಿತ್ ಒಟ್ಟು ಎರಡು ಅರ್ಧಶತಕ ಬಾರಿಸಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ಸಿಕ್ಸರ್‌ಗಳ ಚಿತ್ತಾರ ಬಿಡಿಸುವ ಜೋಡಿ ಎಂದು ಈಗಾಗಲೇ ಸಾಬೀತಾಗಿದೆ. ಬೌಲಿಂಗ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ, ರಾಹುಲ್ ಚಾಹರ್ ಮತ್ತು ಜೇಮ್ಸ್ ಪ್ಯಾಟಿನ್ಸನ್ ಉತ್ತಮ ಬೌಲಿಂಗ್ ಮಾಡುತ್ತಿರುವುದು ಮುಂಬೈ ಆತ್ಮವಿಶ್ವಾಸ ಹೆಚ್ಚಿಸಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.