ADVERTISEMENT

ಭಾರತ–ಆಸ್ಟ್ರೇಲಿಯಾ ಸರಣಿಯ ಅಭ್ಯಾಸಕ್ಕೆ ಐಪಿಎಲ್–2020 ಉತ್ತಮ ವೇದಿಕೆ: ಚಾಪೆಲ್

ಏಜೆನ್ಸೀಸ್
Published 14 ಸೆಪ್ಟೆಂಬರ್ 2020, 3:58 IST
Last Updated 14 ಸೆಪ್ಟೆಂಬರ್ 2020, 3:58 IST
 ಕ್ರಿಕೆಟಿಗ ಇಯಾನ್ ಚಾಪೆಲ್ (ಟ್ವಿಟರ್ ಚಿತ್ರ)
ಕ್ರಿಕೆಟಿಗ ಇಯಾನ್ ಚಾಪೆಲ್ (ಟ್ವಿಟರ್ ಚಿತ್ರ)   

ಅಡಿಲೇಡ್: ಈ ಬಾರಿಯ ಐಪಿಎಲ್‌ ಟೂರ್ನಿಯು ಮುಂಬರುವ ಭಾರತ ಮತ್ತು ಆಸ್ಟ್ರೇಲಿಯಾ ಸರಣಿಗೆ ಸಜ್ಜುಗೊಳ್ಳಲು ಆಟಗಾರರಿಗೆ ಉತ್ತಮ ವೇದಿಕೆಯಾಗಲಿದೆ ಎಂದು ಮಾಜಿ ಕ್ರಿಕೆಟಿಗ ಇಯಾನ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಡಿಸೆಂಬರ್‌ನಲ್ಲಿ ಬಾರ್ಡರ್‌–ಗವಾಸ್ಕರ್‌ ಸರಣಿಯಲ್ಲಿ ಸೆಣಸಲಿವೆ.

‘ಒಂದು ವಿಚಾರ ನಿಶ್ಚಿತ; ಎಲ್ಲಿ ಇಚ್ಚಾಶಕ್ತಿ ಇರುವುದೋ, ಅಲ್ಲಿ ದಾರಿಯೂ ಇರುತ್ತದೆ. ಉತ್ತಮ ಆಟಗಾರರು ಪರಿಹಾರಗಳನ್ನು ಕಂಡುಕೊಳ್ಳಲು ತಮ್ಮನ್ನು ಸಮರ್ಪಿಸಿಕೊಂಡಿರುತ್ತಾರೆ. ಈ ವಿಚಾರದಲ್ಲಿ ಭಾರತದ ಮತ್ತು ಕೆಲವು ಆಸ್ಟ್ರೇಲಿಯಾ ಆಟಗಾರರು ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ಸಾಧ್ಯವಾಗಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕಠಿಣ ಟೆಸ್ಟ್ ಸರಣಿಗೆ ಇದು ಮಾದರಿ ಅಭ್ಯಾಸವೆಂದು ತೊರುತ್ತಿಲ್ಲವಾದರೂ, 2009ರಲ್ಲಿ ಇಂಗ್ಲೆಂಡ್‌ ಆಟಗಾರನಾಗಿದ್ದ ರವಿ ಬೊಪಾರ ಹೇಳಿದ್ದ ಮಾತನ್ನು ನೆನಪಿಸಿಕೊಳ್ಳಬಹುದು’ ಎಂದು ಕ್ರೀಡಾ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿಹೇಳಿದ್ದಾರೆ.

‘ಆಗ (2009ರಲ್ಲಿ) ಐಪಿಎಲ್‌ನಲ್ಲಿ ಆಡಿದ್ದ ನಂತರ, ಟೆಸ್ಟ್‌ ಕ್ರಿಕೆಟ್‌ಗೆ ಹಿಂದಿರುಗಲು ಇದು ಸರಿಯಾದ ಸಿದ್ಧತೆ ಎಂದು ನಿಮಗನಿಸುತ್ತದೆಯೇ ಎಂದು ಬೊಪಾರ ಅವರನ್ನು ಕೇಳಲಾಗಿತ್ತು. ಆಗ ಬೊಪಾರ, ‘ಪ್ರತಿ ಬಾರಿ ಅವಕಾಶ ಸಿಕ್ಕಾಗಲೆಲ್ಲ ರನ್‌ ಗಳಿಕೆಯನ್ನು ಎದುರು ನೋಡುವುದರಿಂದ ನಮ್ಮ ಪಾದಗಳು ಸಕಾರಾತ್ಮಕವಾಗಿ ಚಲಿಸುತ್ತವೆ’ ಎಂದಿದ್ದರು. ಜೊತೆಗೆ ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಯಲ್ಲಿ ಸತತ ಶತಕಗಳನ್ನು ಸಿಡಿಸಿ ತಮ್ಮ ಅಭಿಪ್ರಾಯವನ್ನು ಸಮರ್ಥಿಸಿಕೊಂಡಿದ್ದರು’ ಎಂದು ತಿಳಿಸಿದ್ದಾರೆ.

ADVERTISEMENT

ಐಪಿಎಲ್–2020 ಟೂರ್ನಿಯು ಸೆಪ್ಟೆಂಬರ್ 19 ರಿಂದ ನವೆಂಬರ್‌ 10ರ ವರೆಗೆ ನಡೆಯಲಿದೆ. ಇದು ಮುಗಿಯುತ್ತಿದ್ದಂತೆ ಟೀಂ ಇಂಡಿಯಾ ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ಪೂರ್ಣ ಪ್ರಮಾಣದ ಕ್ರಿಕೆಟ್‌ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಉಭಯ ತಂಡಗಳು 3 ಏಕದಿನ ಹಾಗೂ ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಭಾಗವಾಗಿ 4 ಟೆಸ್ಟ್ ಪಂದ್ಯಗಳನ್ನು ಡಿಸೆಂಬರ್‌–ಜನವರಿಯಲ್ಲಿ ಆಡಲಿವೆ.

ಆಸ್ಟ್ರೇಲಿಯಾ ತಂಡ ಸದ್ಯ ಇಂಗ್ಲೆಂಡ್‌ ವಿರುದ್ಧ ತಲಾ ಮೂರು ಪಂದ್ಯಗಳ ಏಕದಿನ ಹಾಗೂ ಟಿ–20 ಸರಣಿಯಲ್ಲಿ ಸೆಣಸುತ್ತಿದೆ. ಕೋವಿಡ್–19 ಪರಿಸ್ಥಿತಿ ಇರುವುದರಿಂದ ಈ ಟೂರ್ನಿಯ ಬಳಿಕ ಆಸ್ಟ್ರೇಲಿಯಾ ಆಟಗಾರರು ಅಡಿಲೇಡ್‌ನ ಓವಲ್‌ನಲ್ಲಿ ಕ್ವಾರಂಟೈನ್‌ ಮುಗಿಸಲಿದ್ದಾರೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಶನಿವಾರ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.