ADVERTISEMENT

ಮುಂಬೈ ಇಂಡಿಯನ್ಸ್‌ ಮಣಿಸುವತ್ತ ಕೋಲ್ಕತ್ತ ಚಿತ್ತ

ದಿನೇಶ್ ಕಾರ್ತಿಕ್ –ರೋಹಿತ್ ಶರ್ಮಾ ಬಳಗಗಳ ಹಣಾಹಣಿ ಇಂದು

ಪಿಟಿಐ
Published 15 ಅಕ್ಟೋಬರ್ 2020, 19:31 IST
Last Updated 15 ಅಕ್ಟೋಬರ್ 2020, 19:31 IST
ರೋಹಿತ್ ಶರ್ಮಾ
ರೋಹಿತ್ ಶರ್ಮಾ   
""

ಅಬುಧಾಬಿ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಎಲ್ಲವೂ ಇದೆ. ರನ್‌ಗಳ ಹೊಳೆ ಹರಿಸುವ ಬ್ಯಾಟಿಂಗ್ ಪಡೆ, ಕೊನೆಯ ಹಂತದ ಓವರ್‌ಗಳಲ್ಲಿ ವಿಕೆಟ್‌ಗಳನ್ನು ಕಿತ್ತು ಬ್ಯಾಟ್ಸ್‌ಮನ್‌ಗಳಿಗೆ ಚಳ್ಳೆಹಣ್ಣು ತಿನ್ನಿಸುವ ಬೌಲರ್‌ಗಳು ಮತ್ತು ಚುರುಕಾದ ಫೀಲ್ಡರ್‌ಗಳು ಇದ್ದಾರೆ.

ಇದರಿಂದಾಗಿಯೇ ಈ ಬಾರಿಯ ಐಪಿಎಲ್‌ನ ಮೊದಲ ಸುತ್ತಿನಲ್ಲಿಯೇ ಹತ್ತು ಅಂಕಗಳನ್ನು ಗಳಿಸಿದೆ. ಇದೀಗ ತನ್ನ ಎಂಟನೇ ಪಂದ್ಯವನ್ನು ಕೋಲ್ಕತ್ತ ನೈಟ್ ವಿರುದ್ಧ ಶುಕ್ರವಾರ ಆಡಲಿದೆ. ಮೊದಲ ಸುತ್ತಿನಲ್ಲಿ ದಿನೇಶ್ ಕಾರ್ತಿಕ್ ನಾಯಕತ್ವದ ಕೋಲ್ಕತ್ತ ತಂಡವನ್ನು ಸದೆಬಡಿದಿದ್ದ ರೋಹಿತ್ ಶರ್ಮಾ ಪಡೆಯು ಈಗಲೂ ಗೆಲುವಿನ ಕನಸು ಕಾಣುತ್ತಿದೆ. ದಿನೇಶ್ ಬಳಗವು ಹೋದ ಪಂದ್ಯದಲ್ಲಿ ಆರ್‌ಸಿಬಿ ಎದುರು 82 ರನ್‌ಗಳಿಂದ ಸೋತಿತ್ತು. ಆದ್ದ ರಿಂದ ಒತ್ತಡದಲ್ಲಿದೆ. ತಂಡವು ಇದುವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯಿಸಿದ್ದು, ಮೂರರಲ್ಲಿ ಸೋತಿದೆ.

ಪುಟಿದೇಳುವ ಛಲದಲ್ಲಿರುವ ಕೋಲ್ಕತ್ತ, ಮುಂಬೈ ಎದುರು ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ಆದರೆ ತಂಡದಲ್ಲಿ ಎಲ್ಲವೂ ಸರಿ ಇಲ್ಲ. ಸ್ಪಿನ್ನರ್ ಸುನೀಲ್ ನಾರಾಯಣ್ ಅವರ ಬೌಲಿಂಗ್ ಶೈಲಿಯ ಬಗ್ಗೆ ರೆಫರಿ ಅನುಮಾನ ವ್ಯಕ್ತಪಡಿಸಿದ್ದು ಚಿಂತೆಗೆ ಕಾರಣವಾಗಿದೆ. ಅಲ್ಲದೇ ಪ್ರಮುಖ ಬ್ಯಾಟ್ಸ್‌ಮನ್ ಆ್ಯಂಡ್ರೆ ರಸೆಲ್ ಫಾರ್ಮ್‌ನಲ್ಲಿ ಇಲ್ಲ.

ADVERTISEMENT

ದಿನೇಶ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ ಮತ್ತು ಶುಭಮನ್ ಗಿಲ್ ಅವರೇ ಬ್ಯಾಟಿಂಗ್ ಹೊಣೆಯನ್ನು ನಿಭಾಯಿಸಬೇಕು. ಮುಂಬೈನ ಜಸ್‌ಪ್ರೀತ್‌ ಬೂಮ್ರಾ, ಜೇಮ್ಸ್ ಪ್ಯಾಟಿನ್ಸನ್, ಕೃಣಾಲ್ ಪಾಂಡ್ಯ ಮತ್ತು ಟ್ರೆಂಟ್ ಬೌಲ್ಟ್‌ ಅವರ ದಾಳಿಯನ್ನು ಎದುರಿಸಿ ನಿಲ್ಲುವ ಗಟ್ಟಿತನ ತೋರಬೇಕಾದ ಅನಿವಾರ್ಯತೆ ಇದೆ.

ಅಲ್ಲದೇ ಮುಂಬೈನ ಬ್ಯಾಟಿಂಗ್ ಪಡೆಯಲ್ಲಿರುವ ರೋಹಿತ್, ಹಾರ್ದಿಕ್, ಇಶಾನ್ ಕಿಶನ್, ಕೀರನ್ ಪೊಲಾರ್ಡ್, ಕ್ವಿಂಟನ್ ಡಿಕಾಕ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಕಟ್ಟಿಹಾಕುವ ಸವಾಲು ಕೆಕೆಆರ್‌ನ ಪ್ರಸಿದ್ಧ ಕೃಷ್ಣ, ಕುಲದೀಪ್ ಯಾದವ್, ಪ್ಯಾಟ್ ಕಮಿನ್ಸ್ ಮತ್ತು ಕಮಲೇಶ್ ನಾಗರಕೋಟಿ ಅವರ ಮುಂದೆ ಇದೆ. ಚೆಂಡು ನಿಧಾನಗತಿಯಲ್ಲಿ ಪುಟಿದೆದ್ದು ಸಾಗುತ್ತಿರುವ ಪಿಚ್‌ನಲ್ಲಿ ಬೌಲರ್‌ಗಳು ಯಾವ ರೀತಿ ತಂತ್ರಗಾರಿಕೆ ಅನುಸರಿಸಲಿದ್ದಾರೆಂಬ ಕುತೂಹಲವೂ ಗರಿಗೆದರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.