ADVERTISEMENT

ಗೇಲ್ ಅವರನ್ನು ತಂಡದಿಂದ ಹೊರಗಿಟ್ಟದ್ದು ಕಠಿಣ ನಿರ್ಧಾರವಾಗಿತ್ತು: ರಾಹುಲ್

ಏಜೆನ್ಸೀಸ್
Published 27 ಅಕ್ಟೋಬರ್ 2020, 10:37 IST
Last Updated 27 ಅಕ್ಟೋಬರ್ 2020, 10:37 IST
ಕ್ರಿಸ್‌ ಗೇಲ್‌
ಕ್ರಿಸ್‌ ಗೇಲ್‌    

ಶಾರ್ಜಾ:ಐಪಿಎಲ್‌–2020 ಟೂರ್ನಿಯ ಮೊದಲ ಕೆಲವು ಪಂದ್ಯಗಳಲ್ಲಿ ಕ್ರಿಸ್‌ ಗೇಲ್‌ ಅವರಿಗೆ ಅವಕಾಶ ನೀಡದೇಹೋದದ್ದು ಕಠಿಣವಾದ ನಿರ್ಧಾರವಾಗಿತ್ತು ಎಂದು ಕಿಂಗ್ಸ್ ಇಲವೆನ್‌ ಪಂಜಾಬ್‌ ತಂಡದ ನಾಯಕ ಕೆಎಲ್‌ ರಾಹುಲ್‌ ಹೇಳಿದ್ದಾರೆ.

ಕಿಂಗ್ಸ್‌ ತಂಡಟೂರ್ನಿಯ ಲೀಗ್‌ ಹಂತದಲ್ಲಿ ಆಡಿದ ಮೊದಲ ಏಳು ಪಂದ್ಯಗಳಲ್ಲಿ ಕೇವಲ 1 ಗೆಲುವು ಸಾಧಿಸಿ ಆರು ಸೋಲುಗಳನ್ನು ಕಂಡಿತ್ತು. ಆದರೆ, ಆಡುವ ಹನ್ನೊಂದರ ಬಳಗದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ ಗೇಲ್‌ ಕಾಣಿಸಿಕೊಂಡ ನಂತರ ಆಡಿದ ಸತತ ಐದು ಪಂದ್ಯಗಳಲ್ಲಿ ಗೆಲುವು ಕಂಡಿದೆ.

ಕಿಂಗ್ಸ್‌ ಹಾಗೂ ಕೆಕೆಆರ್‌ ತಂಡಗಳು ಸೋಮವಾರ ಸೆಣಸಾಟ ನಡೆಸಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್‌ ನಿಗದಿತ 20 ಓವರ್‌ಗಳಲ್ಲಿ 149 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಕಿಂಗ್ಸ್‌ ಪರ ಮನದೀಪ್‌ ಸಿಂಗ್ ಮತ್ತು ಗೇಲ್ ಉತ್ತಮ ಬ್ಯಾಟಿಂಗ್‌ ನಡೆಸಿದ್ದರು.

ADVERTISEMENT

ಮನದೀಪ್‌ 56 ಎಸೆತಗಳಲ್ಲಿ 66 ರನ್‌ ಗಳಿಸಿದರೆ, ಗೇಲ್‌ ಕೇವಲ 21 ಎಸೆತಗಳಲ್ಲಿ 51 ರನ್ ಬಾರಿಸಿದ್ದರು. ಹೀಗಾಗಿ ಕಿಂಗ್ಸ್‌ ತಂಡ ನಿರಾಯಾಸವಾಗಿ ಗೆಲುವು ಸಾಧಿಸಿತ್ತು.ಇದರೊಂದಿಗೆ ಆಡಿರುವ 12 ಪಂದ್ಯಗಳಲ್ಲಿ ಆರು ಜಯ ಸಾಧಿಸಿ 12 ಪಾಯಿಂಟ್ಸ್‌ ಗಳಿಸಿಕೊಂಡಿರುವ ಈ ತಂಡ, ಪಾಯಿಂಟ್ಸ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

ಪಂದ್ಯದ ಬಳಿಕ ಮಾತನಾಡಿರುವ ರಾಹುಲ್‌, ಕ್ರಿಸ್‌ ಗೇಲ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಅವರು ಯಾವಾಗಲೂ ತಂಡದ ಡ್ರೆಸ್ಸಿಂಗ್ ರೂಂ ಅನ್ನು ಲವಲವಿಕೆಯಿಂದ ಇರುವಂತೆ ನೋಡಿಕೊಳ್ಳುತ್ತಾರೆ ಎಂದಿದ್ದಾರೆ.

‘ಆರಂಭದ ಕೆಲವು ಪಂದ್ಯಗಳಲ್ಲಿ ಗೇಲ್‌ ಅವರನ್ನು ಆಡುವ ಹನ್ನೊಂದರ ಬಳಗದಿಂದ ಹೊರಗಿಟ್ಟದ್ದು ಕಠಿಣ ನಿರ್ಧಾರವಾಗಿತ್ತು. ಅವರು ಕಳೆದ ಏಳೆಂಟು ವರ್ಷಗಳಲ್ಲಿ ವಿಭಿನ್ನ ಪ್ರಾಂಚೈಸ್‌ಗಳ ಪರ ಆಡುತ್ತಿರುವುದನ್ನು ನೋಡಿದ್ದೇನೆ. ಅವರು ಡ್ರೆಸ್ಸಿಂಗ್‌ ರೂಂ ಅನ್ನು ಹೇಗೆ ಲವಲವಿಕೆಯಿಂದ ಇರುವಂತೆ ನೋಡಿಕೊಳ್ಳುತ್ತಾರೆ ಎಂಬುದು ನಿಮಗೆಲ್ಲ ಗೊತ್ತು. ಈ ಗೆಲುವನ್ನು ಇಂದು, ನಾಳೆ ಸಂಭ್ರಮಿಸಲಿದ್ದೇವೆ. ನಂತರ ಮುಂದಿನ ಪಂದ್ಯದ ಬಗ್ಗೆ ಆಲೋಚಿಸುತ್ತೇವೆ’ ಎಂದು ಹೇಳಿದ್ದಾರೆ.

ಕಿಂಗ್ಸ್‌ ತನ್ನ ಮುಂದಿನ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ವಿರುದ್ಧ ಅಕ್ಟೋಬರ್‌ 30 ರಂದು ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.