ADVERTISEMENT

RCB vs KKR: ಆರ್‌ಸಿಬಿಗೆ 8 ವಿಕೆಟ್‌ ಜಯ; ಕೊಹ್ಲಿ 500 ಫೋರ್‌ ಸಾಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಅಕ್ಟೋಬರ್ 2020, 17:38 IST
Last Updated 21 ಅಕ್ಟೋಬರ್ 2020, 17:38 IST
ವಿರಾಟ್‌ ಕೊಹ್ಲಿ ಮತ್ತು ಗುರ್‌ಕೀರತ್‌ ಸಿಂಗ್‌
ವಿರಾಟ್‌ ಕೊಹ್ಲಿ ಮತ್ತು ಗುರ್‌ಕೀರತ್‌ ಸಿಂಗ್‌   

ಅಬುಧಾಬಿ: ಆರ್‌ಸಿಬಿ ಬುಧವಾರ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಕೆಕೆಆರ್‌ ತಂಡವನ್ನು ಕೇವಲ 84 ರನ್‌ಗಳಿಗೆ ಆರ್‌ಸಿಬಿ ಬೌಲರ್‌ಗಳಿ ಕಟ್ಟಿ ಹಾಕಿದರು.

ಕೆಕೆಆರ್‌ ನೀಡಿದ ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ ಬಹುಬೇಗ ಗೆಲುವು ಸಾಧಿಸುವ ಉತ್ಸಾಹ ತೋರಿತಾದರೂ ಫರ್ಗ್ಯುಸನ್‌ ಅದಕ್ಕೆ ಬ್ರೇಕ್‌ ಹಾಕಿದರು. 7ನೇ ಓವರ್‌ನಲ್ಲಿ ಆ್ಯರನ್ ಫಿಂಚ್ (16) ವಿಕೆಟ್‌ ಗಳಿಸಿದರು, ಅದೇ ಓವರ್‌ನಲ್ಲಿ ಪಡಿಕ್ಕಲ್‌ (25) ರನ್‌ಔಟ್‌ನಿಂದ ಹೊರ ನಡೆದರು.

7 ಓವರ್‌ಗಳಲ್ಲಿ ಆರ್‌ಸಿಬಿ 2 ವಿಕೆಟ್ ನಷ್ಟಕ್ಕೆ 46 ರನ್‌ ಗಳಿಸಿತ್ತು. ಅನಂತರ ಕಣಕ್ಕಿಳಿದ ವಿರಾಟ್‌ ಕೊಹ್ಲಿ ಮತ್ತು ಗುರ್‌ಕೀರತ್‌ ಸಿಂಗ್‌ ಮನ್ ನಿಧಾನ ಗತಿಯಲ್ಲಿ ಆಟ ನಡೆಸಿದರು.

ADVERTISEMENT

ಗುರ್‌ಕೀರತ್‌ 4 ಫೋರ್‌ ಸಿಡಿಸಿ 21 ರನ್‌ ಗಳಿಸಿದರು. ಕೊಹ್ಲಿ 18 ರನ್‌ ಕಲೆ ಹಾಕಿದರು. ಈ ಮೂಲಕ ಆರ್‌ಸಿಬಿ 13.3 ಓವರ್‌ಗಳಲ್ಲಿ 8 ವಿಕೆಟ್‌ಗಳ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಆರ್‌ಸಿಬಿ 14 ಪಾಯಿಂಟ್‌ ಪಡೆದು ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ಕೊಹ್ಲಿ 500 ಫೋರ್ ದಾಖಲೆ: ವಿರಾಟ್‌ ಕೊಹ್ಲಿ 5,500 ರನ್‌ ಪೂರೈಸಿದರು ಹಾಗೂ ಎರಡು ಫೋರ್‌ ಹೊಡೆಯುವ ಮೂಲಕ ಐಪಿಎಲ್‌ನಲ್ಲಿ 500 ಫೋರ್‌ಗಳನ್ನು ದಾಖಲಿಸಿದರು. ಶಿಖರ್‌ ಧವನ್‌ ಐಪಿಎಲ್‌ನಲ್ಲಿ ಅತಿ ಹೆಚ್ಚು ಫೋರ್‌ (549) ಗಳಿಸಿರುವ ದಾಖಲೆ ಹೊಂದಿದ್ದಾರೆ. 500 ಫೋರ್‌ ಪೂರೈಸಿದ ಎರಡನೇ ಆಟಗಾರ ಕೊಹ್ಲಿ.186 ಪಂದ್ಯಗಳಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ಕೆಕೆಆರ್‌ನ ಪ್ಯಾಟ್‌ ಕಮಿನ್ಸ್, ಪ್ರಸಿಧ್ ಕೃಷ್ಣ ಹಾಗೂ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಆರ್‌ಸಿಬಿ ನಿಯಂತ್ರಿಸಲು ಸಾಧ್ಯವಾಗಲಿಲ್ಲ.

ಸಿರಾಜ್‌ ಐಪಿಎಲ್‌ನಲ್ಲಿ ಹೊಸ ದಾಖಲೆ: ಕೋಲ್ಕತ್ತ ನೈಟ್ ರೈಡರ್ಸ್‌ ಎದುರಿನ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳದ್ದೇ ಕಾರುಬಾರು. ಕೆಕೆಆರ್‌ ಬ್ಯಾಟ್ಸ್‌ಮನ್‌ಗಳನ್ನು ಕೇವಲ 84 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಮೊಹಮ್ಮದ್ ಸಿರಾಜ್‌ ಪ್ರಮುಖ ಪಾತ್ರ ವಹಿಸಿದರು. ಮಿಂಚಿ ಪ್ರದರ್ಶನದ ಮೂಲಕ ಒಂದೂ ರನ್‌ ಬಿಟ್ಟು ಕೊಡದೆಯೇ ಮೂರು ವಿಕೆಟ್‌ ಗಳಿಸಿದರು. ಇದರೊಂದಿಗೆ ಎರಡು ಮೇಡನ್‌ ಓವರ್‌ ಮಾಡಿರುವ ಸಾಧನೆಗೂ ಪಾತ್ರರಾದರು, ಈ ಮೂಲಕ ಐಪಿಎಲ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದರು.

ನಾಲ್ಕು ಓವರ್‌ಗಳಲ್ಲಿ 8ರನ್‌ ನೀಡಿ ಮೂರು ವಿಕೆಟ್‌ ಗಳಿಸುವ ಮೂಲಕ ಕೆಕೆಆರ್‌ಗೆ ದೊಡ್ಡ ಆಘಾತ ನೀಡಿದರು. ಕೆಕೆಆರ್‌ 14 ರನ್‌ ಗಳಿಸುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.