ADVERTISEMENT

IPL 2020, KXIP vs SRH: ಜಯದ ಕನವರಿಕೆಯಲ್ಲಿ ರಾಹುಲ್ ಬಳಗ

ಕಿಂಗ್ಸ್ ಇಲೆವನ್ ಪಂಜಾಬ್–ಸನ್‌ರೈಸರ್ಸ್‌ ಹೈದರಾಬಾದ್ ಹಣಾಹಣಿ ಇಂದು

ಪಿಟಿಐ
Published 8 ಅಕ್ಟೋಬರ್ 2020, 13:46 IST
Last Updated 8 ಅಕ್ಟೋಬರ್ 2020, 13:46 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್   
""

ದುಬೈ: ರನ್‌ಗಳ ಹೊಳೆಯನ್ನೇ ಹರಿಸುವ ಬ್ಯಾಟಿಂಗ್ ಪಡೆ ಇರುವ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡವು ಬೌಲಿಂಗ್‌ನಲ್ಲಿ ಎಡವುತ್ತಿದೆ. ಅಂಕಪಟ್ಟಿಯ ತಳದಿಂದ ಮೇಲೆದ್ದು ಬರಲು ಹರಸಾಹಸ ಪಡುತ್ತಿದೆ.

ಇದೇ ಹಾದಿಯಲ್ಲಿ ಗುರುವಾರ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಕೆ.ಎಲ್. ರಾಹುಲ್ ನಾಯಕತ್ವದ ಕಿಂಗ್ಸ್ ತಂಡವು ಐದು ಪಂದ್ಯಗಳನ್ನಾಡಿ ನಾಲ್ಕರಲ್ಲಿ ಸೋತಿದೆ. ಡೇವಿಡ್ ವಾರ್ನರ್ ನಾಯಕತ್ವದ ಸನ್‌ರೈಸರ್ಸ್‌ ಐದು ಪಂದ್ಯಗಳಲ್ಲಿ ಆಡಿ ಎರಡರಲ್ಲಿ ಗೆದ್ದು, ಮೂರರಲ್ಲಿ ಸೋತಿದೆ. ಇದೀಗ ತನ್ನ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಇಲ್ಲದೇ ಕಣಕ್ಕಿಳಿಯುತ್ತಿದೆ. ಭುವಿ ಸ್ನಾಯುಸೆಳೆತದ ಕಾರಣ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ಕಿಂಗ್ಸ್‌ ತಂಡದ ಕನ್ನಡಿಗರಾದ ರಾಹುಲ್, ಮಯಂಕ್ ಅಗರವಾಲ್ ಜೋಡಿಯು ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿರುವವರ ಪಟ್ಟಿಯ ಮೊದಲೆರಡು ಸ್ಥಾನಗಳಲ್ಲಿದ್ದಾರೆ. ಇಬ್ಬರೂ ತಲಾ ಒಂದು ಶತಕ ಬಾರಿಸಿದ್ದಾರೆ. ನಿಕೊಲಸ್ ಪೂರನ್ ಕೂಡ ಉತ್ತಮ ಲಯದಲ್ಲಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ನೈಜ ಆಟಕ್ಕೆ ಮರಳುವ ಅಗತ್ಯವಿದೆ. ಫಾರ್ಮ್‌ ಕಂಡುಕೊಳ್ಳದ ಕರುಣ್ ನಾಯರ್ ಅವರನ್ನು ಹೋದ ಪಂದ್ಯದಲ್ಲಿ ಕೈಬಿಡಲಾಗಿತ್ತು. ಆದರೆ ಇದುವರೆಗೆ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರಿಗೆ ಕಣಕ್ಕಿಳಿಯುವ ಅವಕಾಶವನ್ನೇ ತಂಡವು ಕೊಡದಿರುವುದು ಅಚ್ಚರಿ ಮೂಡಿಸಿದೆ.

ADVERTISEMENT

ಆದರೆ, ನಿಜಕ್ಕೂ ತಂಡದ ಚಿಂತೆ ಇರುವುದು ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ ಮತ್ತು ಸ್ಪಿನ್ನರ್ ರವಿ ಬಿಷ್ಣೋಯಿ ಅವರನ್ನು ಬಿಟ್ಟರೆ ಉಳಿದ ಬೌಲರ್‌ಗಳು ಹದ ತಪ್ಪುತ್ತಿದ್ದಾರೆ. ದೊಡ್ಡ ಮೊತ್ತವನ್ನೇ ಉಳಿಸಿಕೊಳ್ಳುವಲ್ಲಿ ಎಡುವುತ್ತಿದ್ದಾರೆ. ಆದ್ದರಿಂದ ಒಂದೆರಡು ಬದಲಾವಣೆಗಳೊಂದಿಗೆ ತಂಡವು ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಸನ್‌ರೈಸರ್ಸ್ ತಂಡದಲ್ಲಿ ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಜಾನಿ ಬೇಸ್ಟೊ ಮತ್ತು ಮನೀಷ್ ಪಾಂಡೆ ಅವರೇ ಬ್ಯಾಟಿಂಗ್ ಬೆನ್ನೆಲುಬು. ಬೌಲಿಂಗ್ ಬಿಗಿ ಕಳೆದುಕೊಂಡಿರುವುದು ಈ ತಂಡದ ಚಿಂತೆಯೂ ಹೌದು. ಮುಂಬೈ ಎದುರಿನ ಪಂದ್ಯದಲ್ಲಿ ಟಿ. ನಟರಾಜನ್, ಸಂದೀಪ್ ಶರ್ಮಾ ಮತ್ತು ಸಿದ್ಧಾರ್ಥ್ ಕೌಲ್ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಬ್ಯಾಟಿಂಗ್ ಬಲವನ್ನು ನಿಯಂತ್ರಿಸಲು ಬೌಲರ್‌ಗಳು ವಿಶೇಷ ಯೋಜನೆಯೊಂದಿಗೆ ಕಣಕ್ಕಿಳಿಯುವ ಅನಿವಾರ್ಯತೆ ಇದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.