ADVERTISEMENT

IPL-2020: ‘ರಕ್ಷಣಾತ್ಮಕವಾಗಿ ಆಡಿದರೂ ಔಟ್ ಮಾಡುವ ಸಾಮರ್ಥ್ಯ ಬೂಮ್ರಾ ಅವರಲ್ಲಿದೆ’

ಏಜೆನ್ಸೀಸ್
Published 10 ನವೆಂಬರ್ 2020, 13:07 IST
Last Updated 10 ನವೆಂಬರ್ 2020, 13:07 IST
   

ಮುಂಬೈ ಇಂಡಿಯನ್ಸ್‌ ತಂಡದ ಪ್ರಮುಖ ವೇಗಿ ಜಸ್‌ಪ್ರೀತ್‌ ಬೂಮ್ರಾ ಅವರೆದುರು ಬ್ಯಾಟ್ಸ್‌ಮನ್‌ಗಳು ವಿಕೆಟ್‌ ಕೊಡದೆ ಆಡಲು ಪ್ರಯತ್ನಿಸುತ್ತಾರೆ. ಆದರೂ, ಅವರನ್ನು ಔಟ್‌ ಮಾಡುವ ಕೌಶಲಬೂಮ್ರಾ ಅವರಲ್ಲಿದೆ ಎಂದು ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಐ‍ಪಿಎಲ್‌–2020 ಟೂರ್ನಿಯಲ್ಲಿ 14 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಬೂಮ್ರಾ ಕೇವಲ 6.71ರ ಸರಾಸರಿಯಲ್ಲಿ 27 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ 2ನೇ ಬೌಲರ್ ಎನಿಸಿದ್ದಾರೆ.

ಬೂಮ್ರಾ ಬೌಲಿಂಗ್ ಪ್ರದರ್ಶನದ ಬಗ್ಗೆ ಕ್ರೀಡಾ ವಾಹಿತಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿರುವ ಗಂಭೀರ್‌, ‘ಎದುರಾಳಿಗಳು ಬೂಮ್ರಾ ಅವರ ಎಸೆತಗಳನ್ನು ನೋಡಿಕೊಂಡು ಆಡಲು ಪ್ರಯುತ್ನಿಸುತ್ತಾರೆ. ಆದರೆ ಆತ (ಬೂಮ್ರಾ) ನಿಜವಾಗಿಯೂ ಉತ್ತಮ ಬೌಲರ್‌ ಆಗಿದ್ದು, ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡಬಲ್ಲ. ಕಳೆದ ಪಂದ್ಯದಲ್ಲಿ ಶಿಖರ್‌ ಧವನ್‌ ಮತ್ತು ಮಾರ್ಕಸ್‌ ಸ್ಟೋಯಿನಸ್‌ ಔಟಾದ ರೀತಿಯನ್ನು ಗಮನಿಸಿ. ಅವರಿಬ್ಬರೂ ಅತ್ಯುತ್ತಮವಾದ ಎಸೆತಗಳನ್ನು ಆಡಲು ವಿಫಲರಾಗಿದ್ದರು’ ಎಂದಿದ್ದಾರೆ.

ADVERTISEMENT

‘ನೀವು ಆತನೆದುರು ಔಟಾಗದೆ ಉಳಿಯಬೇಕಾದರೆ, ನಿಜವಾಗಿಯೂ ಉತ್ತಮ ತಂತ್ರಗಾರಿಕೆಯನ್ನು ಹೊಂದಿರಬೇಕು. ಒಳ್ಳೆಯ ಎಸೆತ ಯಾವುದೇ ಮಾದರಿಯ ಕ್ರಿಕೆಟ್‌ನಲ್ಲಿಯೂ ಉತ್ತಮವಾಗಿಯೇ ಇರುತ್ತದೆ. ಹಾಗಾಗಿ ನೀವು ಆತನ ಎಸೆತಗಳನ್ನು ರಕ್ಷಣಾತ್ಮಕವಾಗಿ ಆಡಲು ಪ್ರಯುತ್ನಿಸಿದರೂ ಸಹ, ನಿಮ್ಮನ್ನು ಹೊರಹಾಕುವ ಸಾಮರ್ಥ್ಯ ಆತನಲ್ಲಿದೆ’ ಎಂದು ಶ್ಲಾಘಿಸಿದ್ದಾರೆ.

ಇಂದು ದುಬೈನಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಟೂರ್ನಿಯಲ್ಲಿ ಆಡಿರುವ 16 ಪಂದ್ಯಗಳಿಂದ 29 ವಿಕೆಟ್‌ಗಳನ್ನು ಉರುಳಿಸಿರುವ ಡೆಲ್ಲಿ ವೇಗಿ ಕಗಿಸೊ ರಬಾಡ, ಅತಿಹೆಚ್ಚು ವಿಕೆಟ್‌ ಪಡೆದವರಿಗೆ ನೀಡುವ ಪರ್ಪಲ್‌ ಕ್ಯಾಪ್ ರೇಸ್‌ನಲ್ಲಿ ಮುಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.