ADVERTISEMENT

IPL 2020 | RCB vs SRH: ಬೆಂಗಳೂರಿಗೆ ಹೈದರಾಬಾದ್ ಚಾಲೆಂಜ್

ಎಲಿಮಿನೇಟರ್ ಇಂದು: ವಿರಾಟ್ ಬಳಗಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ

ಪಿಟಿಐ
Published 6 ನವೆಂಬರ್ 2020, 10:52 IST
Last Updated 6 ನವೆಂಬರ್ 2020, 10:52 IST
ಆರ್‌ಸಿಬಿ ಆಟಗಾರ ಎಬಿ ಡಿ ವಿಲಿಯರ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಆಟಗಾರ ಡೇವಿಡ್‌ ವಾರ್ನರ್‌
ಆರ್‌ಸಿಬಿ ಆಟಗಾರ ಎಬಿ ಡಿ ವಿಲಿಯರ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಆಟಗಾರ ಡೇವಿಡ್‌ ವಾರ್ನರ್‌   
""

ಅಬುಧಾಬಿ: ನಾಲ್ಕು ವರ್ಷಗಳ ಹಿಂದೆ ತನ್ನ ತವರು ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಶಸ್ತಿ ಜಯದ ಕನಸಿಗೆ ಡೇವಿಡ್‌ ವಾರ್ನರ್ ನಾಯಕತ್ವದ ಸನ್‌ರೈಸರ್ಸ್‌ ಹೈದರಾಬಾದ್ ಅಡ್ಡಗಾಲು ಹಾಕಿತ್ತು.

ಈ ಎರಡೂ ತಂಡಗಳು ಶುಕ್ರವಾರ ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. ಈ ಬಾರಿ ಎಲಿಮಿನೇಟರ್‌ ಪಂದ್ಯದಲ್ಲಿ ವಿರಾಟ್ ಮತ್ತು ವಾರ್ನರ್ ಬಳಗಗಳು ಸೆಣಸಲಿವೆ. ಈ ಪಂದ್ಯದಲ್ಲಿ ಸೋತ ತಂಡವು ಫೈನಲ್‌ಗೆ ಹೋಗುವ ಅವಕಾಶ ಕಳೆದುಕೊಳ್ಳುತ್ತದೆ. ಗೆದ್ದವರು ಎರಡನೇ ಕ್ವಾಲಿಫೈಯರ್ ನಲ್ಲಿ ಆಡುವರು.

Caption

ಒಂದೊಮ್ಮೆ ಈ ಪಂದ್ಯದಲ್ಲಿ ವಿರಾಟ್ ಬಳಗವು ಸನ್‌ರೈಸರ್ಸ್ ವಿರುದ್ಧ ಜಯಿಸಿದರೆ ಚೊಚ್ಚಲ ಪ್ರಶಸ್ತಿಯ ಅವಕಾಶವನ್ನು ಜೀವಂತವಾಗಿರಿಕೊಳ್ಳಲಿದೆ. ಜೊತೆಗೆ 2016ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋತಿದ್ದ ಸೇಡನ್ನು ಸನ್‌ರೈಸರ್ಸ್‌ ವಿರುದ್ಧ ತೀರಿಸಿಕೊಳ್ಳಬಹುದು. ಗುರುವಾರ ಜನ್ಮದಿನ ಆಚರಿಸಿಕೊಂಡಿರುವ ತಮ್ಮ ನಾಯಕ ವಿರಾಟ್ ಕೊಹ್ಲಿಗೆ ಆರ್‌ಸಿಬಿಯ ಆಟಗಾರರು ಈ ಪಂದ್ಯ ಗೆದ್ದು ಕಾಣಿಕೆ ನೀಡುವರೇ ಎಂಬ ಕುತೂಹಲ ಗರಿಗೆದರಿದೆ.

ADVERTISEMENT

2016ರ ಋತುವಿನಲ್ಲಿ ವಿರಾಟ್ ಕೊಹ್ಲಿ ರನ್‌ಗಳ ಹೊಳೆಯನ್ನೇ ಹರಿಸಿದ್ದರು. ಆರ್‌ಸಿಬಿ ಅಮೋಘವಾಗಿ ಆಡಿ ಫೈನಲ್ ತಲುಪಿತ್ತು. ಕ್ರಿಸ್ ಗೇಲ್ ಮತ್ತು ವಿರಾಟ್ ಆ ಪಂದ್ಯದಲ್ಲಿ ಅರ್ಧಶತಕಗಳನ್ನೂ ಸಿಡಿಸಿದ್ದರು. ಆದರೆ, ವಾರ್ನರ್ ಛಲದಾಟ ಜಯಿಸಿತ್ತು. ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಆರ್‌ಸಿಬಿ ಅಭಿಮಾನಿಗಳು ನಿರಾಶರಾಗಿದ್ದರು.

ಈ ಕೊರೊನಾ ಕಾಲದಲ್ಲಿ ಪ್ರೇಕ್ಷಕರಿಲ್ಲದ ಕ್ರೀಡಾಂಗಣಗಳಲ್ಲಿ ಐಪಿಎಲ್ ನಡೆಯುತ್ತಿದೆ. ಅದರಲ್ಲಿಯೇ ತುರುಸಿನ ಪೈಪೋಟಿ ಇದ್ದ ಲೀಗ್ ಹಂತದಲ್ಲಿ ವಾರ್ನರ್ ಬಳಗವು ಅಂಕಪಟ್ಟಿಯಲ್ಲಿ ಮೂರನೇ ಮತ್ತು ಆರ್‌ಸಿಬಿ ನಾಲ್ಕನೇ ಸ್ಥಾನ ಪಡೆದಿವೆ.

ಬೆಂಗಳೂರು ಹುಡುಗ ದೇವದತ್ತ ಪಡಿಕ್ಕಲ್, ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಅವರೇ ಆರ್‌ಸಿಬಿಯ ಬ್ಯಾಟಿಂಗ್ ಬೆನ್ನೆಲುಬು. ಶಿವಂ ದುಬೆ ಇದುವರೆಗೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿಲ್ಲ. ಅದರಿಂದಾಗಿ ತಂಡದ ಮಧ್ಯಮಕ್ರಮಾಂಕದ ಬ್ಯಾಟಿಂಗ್ ದುರ್ಬಲವಾಗಿದೆ. ಆದ್ದರಿಂದ ಜೋಶ್ ಫಿಲಿಪ್ ಬದಲು ಆ್ಯರನ್ ಫಿಂಚ್ ಅವರನ್ನು ಈ ಪಂದ್ಯದಲ್ಲಿ ಮತ್ತೆ ಕಣಕ್ಕಿಳಿಸುವತ್ತ ಕೊಹ್ಲಿ ಯೋಚಿಸಿರಬಹುದು. ಕೊನೆಯ ಹಂತದ ಓವರ್‌ಗಳಲ್ಲಿ ವಾಷಿಂಗ್ಟನ್ ಸುಂದರ್, ಕ್ರಿಸ್ ಮೊರಿಸ್ ಅವರು ಒಂದಿಷ್ಟು ರನ್‌ಗಳನ್ನು ಹರಿಸಿದರೆ ತಂಡಕ್ಕೆ ಅದು ಬೋನಸ್ ಆಗಲಿದೆ.

ವಿರಾಟ್‌ಗೆ ಬೌಲಿಂಗ್‌ನಲ್ಲಿ ಹೆಚ್ಚಿನ ಚಿಂತೆಯಿಲ್ಲ. ನವದೀಪ್ ಸೈನಿ, ಮೊರಿಸ್, ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್ ಮತ್ತು ವಾಷಿಂಗ್ಟನ್ ಸುಂದರ್ ಮೇಲೆ ವಿಶ್ವಾಸವಿರಿಸಬಹುದು. ಮೊಹಮ್ಮದ್ ಸಿರಾಜ್ ತಮ್ಮ ನೈಜ ಸಾಮರ್ಥ್ಯ ಮೆರೆಯುವ ಮತ್ತೊಂದು ಅವಕಾಶ ಇಲ್ಲಿದೆ.

ಆದರೆ, ಸನ್‌ರೈಸರ್ಸ್‌ ನಲ್ಲಿ ಇಂತಹ ಚಿಂತೆಗಳು ಇಲ್ಲ. ಟೂರ್ನಿಯ ಮಧ್ಯದಲ್ಲಿಯೇ ಭುವನೇಶ್ವರ್ ಕುಮಾರ್ ಗಾಯಗೊಂಡು ತವರಿಗೆ ಮರಳಿದ್ದರು. ಆದರೆ ಸಂದೀಪ್ ಶರ್ಮಾ ಆ ಕೊರತೆಯನ್ನು ನೀಗಿಸಿದರು. ಟಿ ನಟರಾಜನ್, ಸ್ಪಿನ್ನರ್ ರಶೀದ್ ಖಾನ್ ಅವರು ಪಂದ್ಯ ಗೆಲ್ಲಿಸಿಕೊಡಬಲ್ಲ ಸಮರ್ಥ ಬೌಲರ್‌ಗಳು. ಬ್ಯಾಟಿಂಗ್‌ನಲ್ಲಿ ವಾರ್ನರ್, ವೃದ್ಧಿಮಾನ್ ಸಹಾ ಅಮೋಘ ಫಾರ್ಮ್‌ನಲ್ಲಿದ್ದಾರೆ. ಮನೀಷ್ ಪಾಂಡೆ, ವಿಜಯಶಂಕರ್, ಜಾನಿ ಬೆಸ್ಟೊ, ಪ್ರಿಯಂ ಗರ್ಗ್ ತಂಡದ ಮೊತ್ತ ಹೆಚ್ಚಿಸುವ ಭರವಸೆ ಬ್ಯಾಟ್ಸ್‌ಮನ್‌ಗಳು. ಇವರನ್ನು ಕಟ್ಟಿಹಾಕುವ ಸವಾಲು ಆರ್‌ಸಿಬಿ ಬೌಲರ್‌ಗಳ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.