ADVERTISEMENT

ಐಪಿಎಲ್‌: ದಾಖಲೆ ಸಂಖ್ಯೆಯ ವೀಕ್ಷಣೆ

ಪಿಟಿಐ
Published 12 ನವೆಂಬರ್ 2020, 15:17 IST
Last Updated 12 ನವೆಂಬರ್ 2020, 15:17 IST
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (ಎಡ) ಮತ್ತು ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಿದ ಟೂರ್ನಿಯ ಮುಖ್ಯಸ್ಥ ಬ್ರಿಜೇಶ್‌ ಪಟೇಲ್ (ಮಧ್ಯ) –ಪಿಟಿಐ ಚಿತ್ರ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (ಎಡ) ಮತ್ತು ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಿದ ಟೂರ್ನಿಯ ಮುಖ್ಯಸ್ಥ ಬ್ರಿಜೇಶ್‌ ಪಟೇಲ್ (ಮಧ್ಯ) –ಪಿಟಿಐ ಚಿತ್ರ   

ಮುಂಬೈ: ಯುಎಇಯಲ್ಲಿ ಎರಡು ದಿನಗಳ ಹಿಂದೆ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯನ್ನು ವೀಕ್ಷಿಸಿದವರ ಸಂಖ್ಯೆಯಲ್ಲಿ ಶೇಕಡಾ 28ರಷ್ಟು ಏರಿಕೆಯಾಗಿದ್ದು ಹೊಸ ದಾಖಲೆ ಬರೆದಿದೆ ಎಂದು ಟೂರ್ನಿಯ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಗುರುವಾರ ತಿಳಿಸಿದ್ದಾರೆ.

ಕೋವಿಡ್‌–19ರ ಕಾರಣ ಈ ಬಾರಿ ಯುಎಇಯಲ್ಲಿ ಟೂರ್ನಿ ಆಯೋಜಿಸಲು ನಿರ್ಧರಿಸಲಾಗಿತ್ತು. ಸೆಪ್ಟೆಂಬರ್ 19ರಂದು ಆರಂಭಗೊಂಡ ಟೂರ್ನಿ ನವೆಂಬರ್ 10ರಂದು ಮುಕ್ತಾಯಗೊಂಡಿತ್ತು. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಐದನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತ್ತು. ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಬಾರಿ ಫೈನಲ್‌ ಪ್ರವೇಶಿಸಿತ್ತು. ಯುಎಇಯ ಮೂರು ಅಂಗಣಗಳಲ್ಲಿ ಪಂದ್ಯಗಳು ನಡೆದಿದ್ದವು.

‘ವಿಶ್ವದರ್ಜೆಯ ಕ್ರಿಕೆಟ್ ಟೂರ್ನಿಯನ್ನು ಸುಸಜ್ಜಿತವಾಗಿ ನಡೆಸಲು ಸಾಧ್ಯವಾದದ್ದು ಹೆಮ್ಮೆಯ ವಿಷಯ. ಡ್ರೀಮ್ ಇಲೆವನ್ ಸಂಸ್ಥೆ ಟೂರ್ನಿಯ ಪ್ರಾಯೋಜಕತ್ವವನ್ನು ವಹಿಸಲು ಮುಂದೆ ಬಾರದೇ ಇದ್ದರೆ ಆಯೋಜನೆ ಕಷ್ಟವಾಗುತ್ತಿತ್ತು. ಡಿಜಿಟಲ್ ಮಾಧ್ಯಮಗಳಲ್ಲಿ ಪಂದ್ಯಗಳನ್ನು ವೀಕ್ಷಿಸುವಂತೆ ಮಾಡಿದ್ದರಲ್ಲೂ ಡ್ರೀಮ್‌ ಇಲೆವನ್ ಮಹತ್ವದ ಪಾತ್ರ ವಹಿಸಿದೆ. ವೀಕ್ಷಕರನ್ನು ತಲುಪಲು ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಫ್ರಾಂಚೈಸ್‌ಗಳು ಕೂಡ ಡಿಜಿಟಲ್ ಮಾಧ್ಯಮಗಳ ಮೂಲಕ ವೀಕ್ಷಕರನ್ನು ತಲುಪುವ ಪ್ರಯತ್ನ ಮಾಡಿವೆ. ಮುಂಬೈ ಇಂಡಿಯನ್ಸ್ ’ಎಂಐ ಲೈವ್’ ಮತ್ತು ’ಪಲ್ಟಾನ್ ಪ್ಲೇ‘ ಕಾರ್ಯಕ್ರಮಗಳ ಮೂಲಕ, ರಾಜಸ್ಥಾನ ‘ಸೂಪರ್‌ ರಾಯಲ್ಸ್‌’ ಕಾರ್ಯಕ್ರಮದ ಮೂಲಕ ಈ ಕಾರ್ಯ ಮಾಡಿವೆ’ ಎಂದು ಬ್ರಿಜೇಶ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.