ADVERTISEMENT

IPL 2021: ಈ ಸ್ಟಾರ್ ಆಟಗಾರ ಆಗಲಿದ್ದಾರೆ ಆರ್‌ಸಿಬಿ ವಿಕೆಟ್ ಕೀಪರ್!

ಏಜೆನ್ಸೀಸ್
Published 25 ಮಾರ್ಚ್ 2021, 14:39 IST
Last Updated 25 ಮಾರ್ಚ್ 2021, 14:39 IST
ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್
ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್   

ಬೆಂಗಳೂರು: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಮೆಂಟ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಚೊಚ್ಚಲ ಕಿರೀಟವನ್ನು ಎದುರು ನೋಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸಂಯೋಜನೆ ಹೇಗಿರಲಿದೆ ಎಂಬುದು ಬಹಳಷ್ಟು ಕುತೂಹಲ ಮೂಡಿಸಿದೆ.

ಇತ್ತೀಚೆಗಷ್ಟೇ ಆರ್‌ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿಯುವುದಾಗಿ ನಾಯಕ ವಿರಾಟ್ ಕೊಹ್ಲಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಮಗದೊಂದು ಮಹತ್ವದ ರಣನೀತಿಯನ್ನು ಆರ್‌ಸಿಬಿ ನಿರ್ದೇಶಕ ಮೈಕ್ ಹೆಸನ್ ಬಹಿರಂಗಪಡಿಸಿದ್ದಾರೆ.

ಅದೇನೇಂದರೆ ಐಪಿಎಲ್ 2021ನೇ ಆವೃತ್ತಿಯಲ್ಲಿ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಆಟಗಾರ ಎಬಿ ಡಿ ವಿಲಿಯರ್ಸ್ ಪರಿಪೂರ್ಣ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರೂಪದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ADVERTISEMENT

ಎಬಿಡಿ ವಿಲಿಯರ್ಸ್ ಅವರನ್ನು ವಿಕೆಟ್ ಕೀಪರ್ ಆಯ್ಕೆಗೆ ಪರಿಗಣಿಸಲಾಗುತ್ತಿದೆ ಎಂದು ಮೈಕ್ ಹೆಸನ್ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ತಂಡದಲ್ಲಿ ಹೆಚ್ಚುವರಿ ಬ್ಯಾಟ್ಸ್‌ಮನ್ ಅಥವಾ ಬೌಲರ್‌ಗೆ ಅವಕಾಶ ಸಿಗಲಿದೆ.

'ಎಬಿಡಿ ವಿಕೆಟ್ ಕೀಪಿಂಗ್ ಇಷ್ಟಪಡುತ್ತಿದ್ದು ಮತ್ತು ಆ ಜವಾಬ್ದಾರಿ ವಹಿಸಿಕೊಳ್ಳಲು ತಯಾರಾಗಿದ್ದಾರೆ ಎಂಬುದು ನಮ್ಮನ್ನು ಸಂತೋಷಗೊಳಿಸಿದೆ. ವಿಕೆಟ್ ಕೀಪಿಂಗ್ ಹೊಣೆ ವಹಿಸಲು ಎಬಿಡಿ ಉತ್ಸುಕರಾಗಿದ್ದಾರೆ. ಅವರು ನೈಜ ಆಯ್ಕೆಯಾಗಿದ್ದು, ಇನ್ನಿತರ ಒಂದೆರಡು ವಿಕೆಟ್ ಕೀಪಿಂಗ್ ಆಯ್ಕೆಗಳು ನಮ್ಮ ಬಳಿಯಿವೆ' ಎಂದು ಹೆಸನ್ ವಿವರಿಸಿದ್ದಾರೆ.

'ಮೊಹಮ್ಮದ್ ಅಜರುದ್ದೀನ್ ಮತ್ತು ಕೆ.ಎಸ್. ಭರತ್ ಸಹ ಸಮರ್ಥ ವಿಕೆಟ್ ಕೀಪರ್‌ಗಳಾಗಿದ್ದಾರೆ. ಇವರೆಲ್ಲ ವಿಭಿನ್ನ ಆಯ್ಕೆಯನ್ನು ನೀಡುತ್ತಿದ್ದು, ತಂಡದ ಪಾಲಿಗೆ ಉತ್ತಮವಾದ ಅಂಶವಾಗಿದೆ' ಎಂದು ಆರ್‌ಸಿಬಿ ಟ್ವಿಟರ್ ಪುಟದಲ್ಲಿ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಹೆಸನ್ ತಿಳಿಸಿದ್ದಾರೆ.

'ಯಾವ ಆಟಗಾರ ಯಾವ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂಬುದನ್ನು ಈಗಲೇ ಪ್ರಕಟಿಸಲು ಇಷ್ಟಪಡುವುದಿಲ್ಲ. ಆದರೆ ನಮಗೆ ದೊರೆತ ಆಯ್ಕೆಯಿಂದ ಸಂತುಷ್ಟರಾಗಿದ್ದು, ಖಂಡಿತವಾಗಿಯೂ ಎಬಿಡಿ ಕೂಡಾ ಅವರಲ್ಲಿ ಒಬ್ಬರಾಗಿದ್ದಾರೆ' ಎಂದು ಹೇಳಿದ್ದಾರೆ.

ಏಪ್ರಿಲ್ 9ರಂದು ಮುಂಬೈನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತಂಡವು ಐದು ಬಾರಿಯ ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.