ADVERTISEMENT

IPL 2021 – ಆಟಗಾರರು ವಾಪಸಾಗಲು ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು: ಆಸ್ಟ್ರೇಲಿಯಾ

ಪಿಟಿಐ
Published 27 ಏಪ್ರಿಲ್ 2021, 11:04 IST
Last Updated 27 ಏಪ್ರಿಲ್ 2021, 11:04 IST
ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ – ಎಪಿ ಚಿತ್ರ
ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ – ಎಪಿ ಚಿತ್ರ   

ಮೆಲ್ಬರ್ನ್: ಭಾರತದಲ್ಲಿ ಕೋವಿಡ್–19 ಪರಿಸ್ಥಿತಿ ಉಲ್ಬಣಿಸಿರುವ ಕಾರಣ ಮೇ 15ರವರೆಗೆ ಅಲ್ಲಿಂದ ಬರುವ ಎಲ್ಲ ಪ್ರಯಾಣಿಕ ವಿಮಾನಗಳನ್ನು ನಿಷೇಧಿಸಿ ಆಸ್ಟ್ರೇಲಿಯಾ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಆಟಗಾರರು ತವರಿಗೆ ಮರಳಲು ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ.

ಅವರು (ಕ್ರಿಕೆಟಿಗರು) ಖಾಸಗಿಯಾಗಿ ಪ್ರಯಾಣಿಸಿದ್ದಾರೆ. ಅದು ಆಸ್ಟ್ರೇಲಿಯಾ ತಂಡದ ಪ್ರವಾಸದ ಭಾಗವಲ್ಲ. ಅವರು ಅವರದ್ದೇ ಆದ ವ್ಯವಸ್ಥೆಯಲ್ಲಿದ್ದಾರೆ ಮತ್ತು ಅದರ ಭಾಗವಾಗಿದ್ದಾರೆ. ಹೀಗಾಗಿ ವಾಪಸಾಗಲು ಅವರೇ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಮಾರಿಸನ್ ಹೇಳಿರುವುದಾಗಿ ‘ದಿ ಗಾರ್ಡಿಯನ್’ ವರದಿ ಮಾಡಿದೆ.

ಭಾರತದಲ್ಲಿ ಕೋವಿಡ್ ಹೆಚ್ಚುತ್ತಿರುವ ಬೆನ್ನಲ್ಲೇ ಆಸ್ಟ್ರೇಲಿಯಾದ ಆಟಗಾರರಾದ ಕೇನ್ ರಿಚರ್ಡ್ಸನ್, ಆ್ಯಡಂ ಜಂಪಾ (ಆರ್‌ಸಿಬಿ) ಹಾಗೂ ಆಂಡ್ರ್ಯೂ ಟೈ (ರಾಜಸ್ಥಾನ್ ರಾಯಲ್ಸ್) ಐಪಿಎಲ್‌ ಕಣದಿಂದ ಹಿಂದೆ ಸರಿದಿದ್ದಾರೆ. ಇವರು ಈಗಾಗಲೇ ಶಿಬಿರವನ್ನು ತೊರೆದಿದ್ದು, ಅತಿ ಶೀಘ್ರದಲ್ಲೇ ಸ್ವದೇಶಕ್ಕೆ ಮರಳಲಿದ್ದಾರೆ ಎಂದು ಸೋಮವಾರ ವರದಿಯಾಗಿತ್ತು.

ಸದ್ಯ ಸ್ಟೀವ್ ಸ್ಮಿತ್ (ಡೆಲ್ಲಿ ಕ್ಯಾಪಿಟಲ್ಸ್), ಡೇವಿಡ್ ವಾರ್ನರ್ (ಸನ್‌ರೈಸರ್ಸ್ ಹೈದರಾಬಾದ್), ಪ್ಯಾಟ್ ಕಮಿನ್ಸ್ (ಕೋಲ್ಕತ್ತ ನೈಟ್‌ ರೈಡರ್ಸ್), ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್, ಆರ್‌ಸಿಬಿಯ ಸೈಮನ್ ಕ್ಯಾಟಿಚ್‌ ಸೇರಿ ಆಸ್ಟ್ರೇಲಿಯಾದ 14 ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸುತ್ತಿದ್ದಾರೆ.

ವೀಕ್ಷಕ ವಿವರಣೆಗಾರರಾಗಿ ಮ್ಯಾಥ್ಯೂ ಹೇಡನ್, ಬ್ರೆಟ್‌ ಲೀ, ಮೈಕೆಲ್ ಸ್ಲಾಟೆರ್ ಹಾಗೂ ಲೀಸಾ ಸ್ಥಲೇಕರ್‌ ಸಹ ಐಪಿಎಲ್‌ನಲ್ಲಿ ಭಾಗಿಯಾಗಿದ್ದಾರೆ.

ಐಪಿಎಲ್‌ ಟೂರ್ನಿ ಮುಕ್ತಾಯವಾದ ಬಳಿಕ ಆಟಗಾರರು ಆಸ್ಟ್ರೇಲಿಯಾಕ್ಕೆ ತೆರಳಲು ವಿಮಾನದ ವ್ಯವಸ್ಥೆ ಮಾಡಬೇಕೆಂದು ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಆಸ್ಟ್ರೇಲಿಯಾ ಆಟಗಾರ ಕ್ರಿಸ್ ಲಿನ್ ಇತ್ತೀಚೆಗೆ ‘ಕ್ರಿಕೆಟ್ ಆಸ್ಟ್ರೇಲಿಯಾ’ಕ್ಕೆ ಮನವಿ ಮಾಡಿದ್ದರು.

ಮೇ 30ರಂದು ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.