ADVERTISEMENT

IPL 2021: ಪಂದ್ಯ ಗೆದ್ದ ಚೆನ್ನೈ, ಹೃದಯ ಗೆದ್ದ ರಸೆಲ್..!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಏಪ್ರಿಲ್ 2021, 10:58 IST
Last Updated 22 ಏಪ್ರಿಲ್ 2021, 10:58 IST
(ಚಿತ್ರ ಕೃಪೆ: ಟ್ವಿಟರ್ ಸ್ಕ್ರೀನ್‌ಶಾಟ್)
(ಚಿತ್ರ ಕೃಪೆ: ಟ್ವಿಟರ್ ಸ್ಕ್ರೀನ್‌ಶಾಟ್)   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರೋಚಕ ಗೆಲುವು ದಾಖಲಿಸಿರಬಹುದು.

ಆದರೆ ದಿಟ್ಟ ಹೋರಾಟ ನೀಡಿರುವ ಕೆಕೆಆರ್ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಔಟ್ ಆದ ಬಳಿಕ ಪೆವಿಲಿಯನ್‌ಗೆ ಹಿಂತಿರುಗದೇ ಸ್ಟೇಡಿಯಂ ಮೆಟ್ಟಿಲಲ್ಲಿ ಕುಳಿತುಕೊಂಡು ಪಂದ್ಯ ವೀಕ್ಷಿಸುತ್ತಿರುವ ರಸೆಲ್ ಚಿತ್ರವು ವೈರಲ್ ಆಗಿದೆ.

ADVERTISEMENT

ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್‌ಕೆ, ಫಫ್ ಡುಪ್ಲೆಸಿ (95*)ಹಾಗೂ ಋತುರಾಜ್ ಗಾಯಕವಾಡ್ (64) ಶತಕದ ಜೊತೆಯಾಟದ ಬೆಂಬಲದೊಂದಿಗೆ ಮೂರು ವಿಕೆಟ್ ನಷ್ಟಕ್ಕೆ 220 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಕೋಲ್ಕತ್ತ ಒಂದು ಹಂತದಲ್ಲಿ ಪವರ್ ಪ್ಲೇನಲ್ಲೇ ಕೇವಲ 5.2 ಓವರ್‌ಗಳಲ್ಲಿ 31 ರನ್ನಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೊಳಗಾಗಿತ್ತು.

ಈ ಹಂತದಲ್ಲಿ ಕ್ರೀಸಿಗಿಳಿದ ಆ್ಯಂಡ್ರೆ ರಸೆಲ್ ಬಿರುಸಿನ ಆಟವಾಡುವ ಮೂಲಕ ಪ್ರತಿ ಹೋರಾಟ ನೀಡುವಲ್ಲಿ ನೆರವಾದರು. ದಿನೇಕ್ ಕಾರ್ತಿಕ್ ಜೊತೆಗೆ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದ ರಸೆಲ್ ಕೇವಲ 22 ಎಸೆತಗಳಲ್ಲಿ 54 ರನ್ ಚಚ್ಚಿದರು.

ರಸೆಲ್ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿ ಹಾಗೂ ಆರು ಸಿಕ್ಸರ್‌ಗಳು ಸೇರಿದ್ದವು. ಈ ಹಂತದಲ್ಲಿ ದಾಳಿಗಿಳಿದ ಸ್ಯಾಮ್ ಕರನ್, ರಸೆಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದರು. ಉತ್ತಮ ಲಯದಲ್ಲಿದ್ದ ರಸೆಲ್, ಕರನ್ ದಾಳಿಯನ್ನು ಅಂದಾಜಿಸುವಲ್ಲಿ ವಿಫಲವಾಗಿದ್ದರು.

ಪಂದ್ಯ ಗೆಲ್ಲಿಸಬೇಕೆಂಬ ಅಚಲ ಛಲವನ್ನು ರಸೆಲ್ ಹೊಂದಿದ್ದರು. ಅದೇ ಕಾರಣಕ್ಕಾಗಿ ಔಟಾದರೂ ಡ್ರೆಸ್ಸಿಂಗ್ ರೂಮ್‌ಗೆ ಹಿಂತಿರುಗದೇ ಸ್ಟೇಡಿಯಂ ಮೆಟ್ಟಿಲಲ್ಲೇ ಕುಳಿತುಕೊಂಡು ಪಂದ್ಯವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು.

ಪ್ರಸ್ತುತ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಕೊನೆಯ ಹಂತದಲ್ಲಿ ಕೇವಲ 34 ಎಸೆತಗಳಲ್ಲಿ ಅಜೇಯ 66 ರನ್ ಗಳಿಸಿದ ಪ್ಯಾಟ್ ಕಮಿನ್ಸ್ ಹೋರಾಟ ಸಹ ವ್ಯರ್ಥವಾಗಿತ್ತು. ಅಭಿಮಾನಿಗಳು ಇದನ್ನೇ ಉಲ್ಲೇಖಿಸಿದ್ದು, ಚೆನ್ನೈ ಪಂದ್ಯವನ್ನು ಗೆದ್ದಿರಬಹುದು. ಆದರೆ ರಸೆಲ್ ಹಾಗೂ ಕಮಿನ್ಸ್ ಹೃದಯವನ್ನು ಗೆದ್ದಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.