ADVERTISEMENT

IPL 2021 | RCB vs DC: ಜಯದ ಲಯಕ್ಕೆ ಮರಳುವುದೇ ಬೆಂಗಳೂರು?

ವಿರಾಟ್ ಕೊಹ್ಲಿ ಬಳಗಕ್ಕೆ ರಿಷಭ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಸವಾಲು: ಸಮಬಲದ ಹೋರಾಟ ನಿರೀಕ್ಷೆ

ಪಿಟಿಐ
Published 26 ಏಪ್ರಿಲ್ 2021, 14:51 IST
Last Updated 26 ಏಪ್ರಿಲ್ 2021, 14:51 IST
ದೇವದತ್ತ ಪಡಿಕ್ಕಲ್ –ಪಿಟಿಐ ಚಿತ್ರ
ದೇವದತ್ತ ಪಡಿಕ್ಕಲ್ –ಪಿಟಿಐ ಚಿತ್ರ   

ಅಹಮದಾಬಾದ್‌: ಸತತ ನಾಲ್ಕು ಜಯದ ನಂತರ ಸೋಲಿನ ಕಹಿ ಅನುಭವಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೆ ಲಯಕ್ಕೆ ಮರಳಲು ಪ್ರಯತ್ನಿಸಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಆರ್‌ಸಿಬಿಗೆ ಡೆಲ್ಲಿ ಕ್ಯಾಪಿಟಲ್ಸ್ ಎದುರಾಳಿ.

ಚೆನ್ನೈ ಸೂಪರ್ ಕಿಂಗ್ಸ್ ಎದುರು ಭಾನುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ 69 ರನ್‌ಗಳ ಸೋಲು ಕಂಡಿತ್ತು. ಭಾನುವಾರ ನಡೆದ ಮತ್ತೊಂದು ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೂಪರ್ ಓವರ್‌ನಲ್ಲಿ ಮಣಿಸಿರುವ ಡೆಲ್ಲಿ ಆತ್ಮವಿಶ್ವಾಸದಲ್ಲಿದೆ.

ಸಮಾನ ಸಾಮರ್ಥ್ಯದ ತಂಡಗಳ ನಡುವಿನ ಕದನ ಎಂದೇ ಹೇಳಬಹುದಾದ ಈ ಪಂದ್ಯದಲ್ಲಿ ಜಯ ಗಳಿಸಬೇಕಾದರೆ ಆರ್‌ಸಿಬಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ವೈಫಲ್ಯಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಆರಂಭಿಕ ಜೋಡಿ ದೇವದತ್ತ ಪಡಿಕ್ಕಲ್‌ (4 ಪಂದ್ಯಗಳಲ್ಲಿ 171) ಮತ್ತು ವಿರಾಟ್ ಕೊಹ್ಲಿ (5 ಪಂದ್ಯಗಳಲ್ಲಿ 151) ಉತ್ತಮ ಫಾರ್ಮ್‌ನಲ್ಲಿದ್ದು ಅದೇ ಲಯವನ್ನು ಮುಂದುವರಿಸಿದರೆ ತಂಡದ ಇನಿಂಗ್ಸ್‌ಗೆ ಭದ್ರ ಬುನಾದಿ ಸಿಗಲಿದೆ.

ADVERTISEMENT

ಉತ್ತಮ ದಾಳಿ ಸಂಘಟಿಸಬಲ್ಲ ಬೌಲಿಂಗ್ ಪಡೆಯನ್ನು ಹೊಂದಿರುವ ಡೆಲ್ಲಿ ವಿರುದ್ಧ ಸವಾಲಿನ ಮೊತ್ತ ಕಲೆ ಹಾಕಬೇಕಾದರೆ ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್‌ (5 ಪಂದ್ಯಗಳಲ್ಲಿ 198) ಮತ್ತು ಎಬಿ ಡಿವಿಲಿಯರ್ಸ್‌ (5 ಪಂದ್ಯಗಳಲ್ಲಿ 129) ಅವರ ನೈಜ ಆಟದ ಅಗತ್ಯವಿದ್ದು ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಂದ ನೈಜ ಸಾಮರ್ಥ್ಯವೂ ಹೊರಹೊಮ್ಮಬೇಕಾಗಿದೆ.

ಭಾರಿ ಮೌಲ್ಯ ನೀಡಿ ತಂಡಕ್ಕೆ ಸೇರಿಸಿಕೊಂಡಿರುವ ಮ್ಯಾಕ್ಸ್‌ವೆಲ್ ಆರಂಭದ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದರು. ಆದರೆ ನಂತರ ಅವರಿಂದ ನಿರೀಕ್ಷಿತ ಮಟ್ಟದ ರನ್‌ಗಳು ಬಂದಿಲ್ಲ.

ಹಿಂದಿನ ಪಂದ್ಯದಲ್ಲಿ ಚೆನ್ನೈ ಬ್ಯಾಟ್ಸ್‌ಮನ್‌ಗಳ ಮುಂದೆ ದುಬಾರಿಯಾದ ಬೌಲರ್‌ಗಳು ಅದನ್ನು ಮರೆತು ದಾಳಿ ನಡೆಸಬೇಕಾಗಿದೆ. ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಗಳಿಸಿದವರ ಪಟ್ಟಿಯ ಮೊದಲ ಸ್ಥಾನದಲ್ಲಿರುವ ಹರ್ಷಲ್ ಪಟೇಲ್ ಒಂದೇ ಓವರ್‌ನಲ್ಲಿ ನೀಡಿದ 37 ರನ್‌ ಒಳಗೊಂಡಂತೆ ಪಂದ್ಯದಲ್ಲಿ ಒಟ್ಟು 51 ರನ್‌ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಅವರ ಮೇಲೆ ಮಂಗಳವಾರದ ಪಂದ್ಯದಲ್ಲಿ ಕಣ್ಣಿಡಬೇಕಾಗಿದೆ.

ವೇಗಿಗಳಾದ ಮೊಹಮ್ಮದ್ ಸಿರಾಜ್‌, ಕೈಲ್ ಜೆಮೀಸನ್, ಸ್ಪಿನ್ ಜೋಡಿ ಯಜುವೇಂದ್ರ ಚಾಹಲ್‌ ಮತ್ತು ವಾಷಿಂಗ್ಟನ್ ಸುಂದರ್ ಡೆಲ್ಲಿಯ ಬಲಿಷ್ಠ ಬ್ಯಾಟಿಂಗ್ ಬಳಗವನ್ನು ನಿಯಂತ್ರಿಸಲು ಯಾವ ತಂತ್ರಕ್ಕೆ ಮೊರೆಹೋಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಶಿಖರ್‌–ಪೃಥ್ವಿ ಕಟ್ಟಿಹಾಕುವ ಸವಾಲು

ಅತ್ಯುತ್ತಮ ಫಾರ್ಮ್‌ನಲ್ಲಿರುವ ಶಿಖರ್ ಧವನ್ (5 ಪಂದ್ಯ; 259 ರನ್‌) ಮತ್ತು ಅವರ ಆರಂಭಿಕ ಜೋಡಿ ಪೃಥ್ವಿ ಶಾ (5 ಪಂದ್ಯ; 166) ಅವರನ್ನು ಕಟ್ಟಿಹಾಕುವ ಜವಾಬ್ದಾರಿ ಆರ್‌ಸಿಬಿ ಬೌಲರ್‌ಗಳ ಮೇಲೆ ಇದೆ. ರಿಷಭ್ ಪಂತ್‌ (125 ರನ್‌), ಸ್ಟೀವ್‌ ಸ್ಮಿತ್‌, ಮಾರ್ಕಸ್ ಸ್ಟೋಯಿನಿಸ್ ಮತ್ತು ಶಿಮ್ರಾನ್ ಹೆಟ್ಮೆಯರ್‌ ಅವರನ್ನು ಒಳಗೊಂಡ ಮಧ್ಯಮ ಕ್ರಮಾಂಕವೂ ಬೌಲರ್‌ಗಳಿಗೆ ಸವಾಲಾಗಬಲ್ಲುದು.]

ರವಿಚಂದ್ರನ್ ಅಶ್ವಿನ್ ಅವರ ಅನುಪಸ್ಥಿತಿಯಲ್ಲಿ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಮತ್ತು ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರ ಜವಾಬ್ದಾರಿ ಹೆಚ್ಚಿದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಆವೇಶ್ ಖಾನ್ ಮತ್ತು ಕಗಿಸೊ ರಬಾಡ ಭರವಸೆ ಮೂಡಿಸಿದ್ದಾರೆ. ಅಶ್ವಿನ್ ಬದಲಿಗೆ ಲಲಿತ್ ಯಾದವ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಲಲಿತ್ ಯಾದವ್‌, ಬ್ಯಾಟಿಂಗ್ ಮತ್ತು ಆಫ್‌ ಸ್ಪಿನ್‌ ಬೌಲಿಂಗ್ ಮಾಡಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.