ADVERTISEMENT

IPL 2021: ರವಿಶಾಸ್ತ್ರಿ ಮೆಚ್ಚುಗೆ; ದೀಪಕ್ ಚಾಹರ್‌ಗೆ ಖುಷಿ

ಪಿಟಿಐ
Published 17 ಏಪ್ರಿಲ್ 2021, 14:15 IST
Last Updated 17 ಏಪ್ರಿಲ್ 2021, 14:15 IST
ಪಂಜಾಬ್ ಕಿಂಗ್ಸ್ ತಂಡದ ಮಯಂಕ್ ಅಗರವಾಲ್ ವಿಕೆಟ್ ಪಡೆದ ದೀಪಕ್ ಚಾಹರ್ (ಮಧ್ಯ) ಸಂಭ್ರಮ –ಪಿಟಿಐ ಚಿತ್ರ
ಪಂಜಾಬ್ ಕಿಂಗ್ಸ್ ತಂಡದ ಮಯಂಕ್ ಅಗರವಾಲ್ ವಿಕೆಟ್ ಪಡೆದ ದೀಪಕ್ ಚಾಹರ್ (ಮಧ್ಯ) ಸಂಭ್ರಮ –ಪಿಟಿಐ ಚಿತ್ರ   

ಮುಂಬೈ: ವೇಗದ ಬೌಲಿಂಗ್‌ಗೆ ಅನುಕೂಲಕರ ವಾತಾವರಣ ಇದ್ದಲ್ಲಿ ತಾನು ಅಪಾಯಕಾರಿ ಎಂಬುದನ್ನು ದೀಪಕ್ ಚಾಹರ್ ಅನೇಕ ಸಂದರ್ಭದಲ್ಲಿ ಸಾಬೀತು ಮಾಡಿದ್ದಾರೆ. ಆದರೆ ತಮ್ಮ ಸಾಮರ್ಥ್ಯದ ಬಗ್ಗೆ ಟೀಕೆ ಮಾಡಿದರೆ ಸುಮ್ಮನಿರುವುದಿಲ್ಲ ಎಂಬುದನ್ನು ಶುಕ್ರವಾರದ ಐಪಿಎಲ್ ಪಂದ್ಯದಲ್ಲಿ ತೋರಿಸಿಕೊಟ್ಟಿದ್ದಾರೆ.

ಈ ಬಾರಿ ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ 36 ರನ್ ನೀಡಿದ ಅವರನ್ನು ಹಲವರು ಟೀಕಿಸಿದ್ದರು. ಒಬ್ಬರು ಅಭಿಮಾನಿ ‘ಚೆನ್ನೈ ಸೂಪರ್ ಕಿಂಗ್ಸ್‌ ತಂಡದಿಂದ ಅವರನ್ನು ಕೈಬಿಡಬೇಕು’ ಎಂದು ಟ್ವೀಟ್ ಮಾಡಿದ್ದರು. ಅದರೆ ಎರಡನೇ ಪಂದ್ಯದಲ್ಲಿ ಅಮೋಘ ಸಾಮರ್ಥ್ಯ ತೋರಿದ ದೀಪಕ್ ಪಂಜಾಬ್ ಕಿಂಗ್ಸ್ ಎದುರು ಸುಲಭ ಜಯಕ್ಕೆ ಕಾರಣರಾಗಿದ್ದರು.

ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ದೀಪಕ್ ನಾಲ್ಕು ಓವರ್‌ಗಳಲ್ಲಿ 13 ರನ್ ನೀಡಿ ಪಂಜಾಬ್ ಕಿಂಗ್ಸ್‌ನ ಅಗ್ರ ಕ್ರಮಾಂಕದ ನಾಲ್ವರನ್ನು ವಾಪಸ್ ಕಳುಹಿಸಿದ್ದರು. ಈ ಪೈಕಿ ಒಂದು ಓವರ್ ಮೇಡನ್ ಆಗಿತ್ತು. ಅವರ ಬೌಲಿಂಗ್‌ನಲ್ಲಿ ಒಟ್ಟು 18 ಡಾಟ್ ಬಾಲ್‌ಗಳು ಇದ್ದವು.‍ ‍

ADVERTISEMENT

ಪಂದ್ಯದಲ್ಲಿ ಪಂಜಾಬ್ ಎಂಟು ವಿಕೆಟ್‌ಗಳಿಗೆ 106 ರನ್ ಗಳಿಸಿತ್ತು. 15.4 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳಿಗೆ 107 ರನ್ ಗಳಿಸಿ ಚೆನ್ನೈ ಸೂಪರ್ ಕಿಂಗ್ಸ್‌ ಗೆಲುವಿನ ದಡ ಸೇರಿತ್ತು.

ದೀಪಕ್ ಅವರ ಸಾಧನೆಯನ್ನು ಹೊಗಳಿದ ರಾಷ್ಟ್ರೀಯ ತಂಡದ ಕೋಚ್ ರವಿಶಾಸ್ತ್ರಿ ‘ದೀಪಕ್ ವಿಶೇಷ ಸಾಮರ್ಥ್ಯ ತೋರಿದ್ದಾರೆ. ವಿಕೆಟ್‌ನ ಎರಡೂ ಬದಿಗಳಿಗೆ ಸ್ವಿಂಗ್ ಮಾಡಿದ ಅವರು ಚೆಂಡನ್ನು ಚೆನ್ನಾಗಿ ನಿಯಂತ್ರಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದರು. ರವಿಶಾಸ್ತ್ರಿ ಅವರ ಮೆಚ್ಚುಗೆಯ ನುಡಿ ಖುಷಿ ನೀಡಿದೆ ಎಂದು ದೀಪಕ್ ಚಾಹರ್ಹೇಳಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ಬರುವ ಟೀಕೆಗಳನ್ನು ಕ್ರಿಕೆಟ್ ಆಟಗಾರರು ಸಾಮಾನ್ಯವಾಗಿ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ದೀಪಕ್ ಚಾಹರ್ ಇದಕ್ಕೆ ಅಪವಾದ. ಅವರು ಟೀಕೆಗಳಿಗೆ ಬೌಲಿಂಗ್ ಮೂಲಕವೇ ಉತ್ತರ ನೀಡುತ್ತಾರೆ.

’ಕ್ರಿಕೆಟ್ ಪ್ರಿಯರು ಅಪಾರ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಆದ್ದರಿಂದ ಪ್ರತಿ ಪಂದ್ಯದಲ್ಲೂ ಅತ್ಯುತ್ತಮ ಸಾಮರ್ಥ್ಯ ಪ್ರದರ್ಶಿಸಲು ಪ್ರಯತ್ನಿಸಬೇಕು. ಇಂದಿನ ಪಂದ್ಯದಲ್ಲಿ ತೋರಿದ ಸಾಮರ್ಥ್ಯವು ನನ್ನನ್ನು ‍ತಂಡದಿಂದ ಹೊರಹಾಕುವಂತೆ ಒತ್ತಾಯಿಸಿದ ವ್ಯಕ್ತಿಗೆ ನೀಡಿದ ಉತ್ತರ. ನಾನು ಆಡದೇ ಇದ್ದಿದ್ದರೆ ಎದುರಾಳಿ ತಂಡದ ನಾಲ್ಕು ವಿಕೆಟ್‌ಗಳು ಉರುಳುತ್ತಿದ್ದವೇ’ ಎಂದು ಚಾಹರ್ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.