ADVERTISEMENT

IPL 2021 | ಹಾರ್ದಿಕ್ ಬೌಲಿಂಗ್ ಮಾಡದಿರುವುದು ಭಾರತಕ್ಕೆ ಹೊಡೆತ: ಗವಾಸ್ಕರ್

ಪಿಟಿಐ
Published 5 ಅಕ್ಟೋಬರ್ 2021, 12:38 IST
Last Updated 5 ಅಕ್ಟೋಬರ್ 2021, 12:38 IST
ಹಾರ್ದಿಕ್ ಪಾಂಡ್ಯ ಮತ್ತು ಸುನಿಲ್ ಗವಾಸ್ಕರ್
ಹಾರ್ದಿಕ್ ಪಾಂಡ್ಯ ಮತ್ತು ಸುನಿಲ್ ಗವಾಸ್ಕರ್   

ದುಬೈ: ‘ಪ್ರಸಕ್ತ ಐಪಿಎಲ್‌ ಟೂರ್ನಿಯಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದಿರುವುದು ಕೇವಲ ಮುಂಬೈ ಇಂಡಿಯನ್ಸ್‌ಗೆ ಮಾತ್ರವಲ್ಲ, ಟಿ–20 ವಿಶ್ವಕಪ್‌ನಲ್ಲಿ ಭಾಗಿಯಾಗಲಿರುವ ಭಾರತ ತಂಡಕ್ಕೂ ದೊಡ್ಡ ಹೊಡೆತ ನೀಡಲಿದೆ’ ಎಂದು ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಹಾರ್ದಿಕ್ ಪಾಂಡ್ಯ ಅವರನ್ನು ಟಿ–20 ವಿಶ್ವಕಪ್‌ನಲ್ಲಿ ಭಾಗವಹಿಸಲು ಭಾರತ ತಂಡದ ಆಲ್‌ರೌಂಡರ್ ಆಗಿ ಆಯ್ಕೆ ಮಾಡಲಾಗಿದ್ದು, ಅವರು 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಲಿರುವ ಭರವಸೆಯ ಆಟಗಾರ ಎನ್ನಿಸಿದ್ದಾರೆ’ ಎಂದು ಗವಾಸ್ಕರ್ ಹೇಳಿದ್ದಾರೆ.

ಹಾರ್ದಿಕ್‌ ಪಾಂಡ್ಯ ಅವರನ್ನು ಮುಂಬರುವ ಟಿ–20 ವಿಶ್ವಕಪ್‌ ತಂಡಕ್ಕೆ ಬಿಸಿಸಿಐ ಆಯ್ಕೆ ಮಾಡಿದೆ. ಆದರೆ, ಇಂಗ್ಲೆಂಡ್‌ನಲ್ಲಿ ಸರಣಿ ವೇಳೆ ಗಾಯಗೊಂಡಿದ್ದ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಕಣಕ್ಕಿಳಿದಿರುವ ಹಾರ್ದಿಕ್‌ ಬೌಲಿಂಗ್‌ ಮಾಡದಿರುವುದು ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ವಿಶ್ವಕಪ್‌ ಹಿನ್ನೆಲೆಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿರುವ ಮುಂಬೈ ಇಂಡಿಯನ್ಸ್‌ ತಂಡದ ಸೂರ್ಯಕುಮಾರ್ ಯಾದವ್‌ ಮತ್ತು ಇಶಾನ್‌ ಕಿಶಾನ್‌ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಪ್ರಾಂಚೈಸಿ ತಿಳಿಸಿದೆ.

ಸೂರ್ಯಕುಮಾರ್ ಈ ಬಾರಿ ಐಪಿಎಲ್‌ನಲ್ಲಿ ಆಡಿರುವ 12 ಪಂದ್ಯಗಳಲ್ಲಿ 222 ರನ್ ಗಳಿಸಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೂರ್ಯ ಕುಮಾರ್ ಅಂತರಾಷ್ಟ್ರೀಯ ಟಿ–20ಗೆ ಪಾದಾರ್ಪಣೆ ಮಾಡಿದ್ದರು. ಜುಲೈನಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಮೊದಲ ಏಕದಿನ ಪಂದ್ಯವನ್ನು ಆಡಿದ್ದರು.

ವಿಕೆಟ್ ಕೀಪರ್ ಇಶಾನ್, ಈ ಬಾರಿ ಐಪಿಎಲ್‌ನಲ್ಲಿ ಆಡಿದ 8 ಪಂದ್ಯಗಳಲ್ಲಿ ಕೇವಲ 107 ರನ್ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.