ADVERTISEMENT

IPL 2021: ಇಶಾನ್-ಸೂರ್ಯ ಸ್ಫೋಟಕ ಆಟ; ಇಲ್ಲಿದೆ ಮುಂಬೈ ದಾಖಲೆಗಳ ಪಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಅಕ್ಟೋಬರ್ 2021, 9:36 IST
Last Updated 9 ಅಕ್ಟೋಬರ್ 2021, 9:36 IST
ಇಶಾನ್ ಕಿಶನ್
ಇಶಾನ್ ಕಿಶನ್   

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ಲೇ-ಆಫ್ ಕನಸು ಭಗ್ನಗೊಂಡಿದೆ. ಶುಕ್ರವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ 42 ರನ್ ಅಂತರದ ಗೆಲುವು ದಾಖಲಿಸಿದರೂ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸುವಲ್ಲಿ ವಿಫಲವಾಗಿದೆ.

ಹಾಗಿದ್ದರೂ ಈ ಪಂದ್ಯದಲ್ಲಿ 235 ರನ್‌ಗಳ ಬೃಹತ್ ಮೊತ್ತ ಪೇರಿಸಿರುವ ಮುಂಬೈ ಇಂಡಿಯನ್ಸ್ ತಂಡವು ಅನೇಕ ದಾಖಲೆಗಳನ್ನು ಬರೆದಿದೆ. ಇಶಾನ್ ಕಿಶನ್ (84) ಹಾಗೂ ಸೂರ್ಯಕುಮಾರ್ ಯಾದವ್ (82) ಮುಂಬೈ ಗೆಲುವಿನ ರೂವಾರಿ ಎನಿಸಿದರು.

ಮುಂಬೈ ಗರಿಷ್ಠ ಮೊತ್ತ 235/9
ಇದು ಐಪಿಎಲ್ ಇತಿಹಾಸದಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಮುಂಬೈ ದಾಖಲಿಸಿದ ಗರಿಷ್ಠ ಮೊತ್ತವಾಗಿದೆ. ಈ ಹಿಂದೆ 2017ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರು ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತ್ತು. ಹಾಗೆಯೇ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ದಾಖಲಾದ ಗರಿಷ್ಠ ಮೊತ್ತ ಇದಾಗಿದೆ.

ಯುಎಇನಲ್ಲಿ ಗರಿಷ್ಠ ಸ್ಕೋರ್...
ಮುಂಬೈ ಗಳಿಸಿದ 235 ರನ್ ಯುಎಇನಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ. ಕಳೆದ ವರ್ಷ ಕೆಕೆಆರ್ ವಿರುದ್ಧ ಡೆಲ್ಲಿ ಏಳು ವಿಕೆಟ್ ನಷ್ಟಕ್ಕೆ 228 ರನ್ ಪೇರಿಸಿತ್ತು.

ಮುಂಬೈ ಪರ ಇಶಾನ್ ಬಿರುಸಿನ ಅರ್ಧಶತಕ...
ಕೇವಲ 16 ಎಸೆತಗಳಲ್ಲಿ ಇಶಾನ್ ಕಿಶನ್ ಅರ್ಧಶತಕ ಗಳಿಸಿದ್ದರು. ಇದು ಐಪಿಎಲ್‌ನಲ್ಲಿ ಮುಂಬೈ ಬ್ಯಾಟರ್‌ನಿಂದ ದಾಖಲಾದ ಅತಿ ವೇಗದ ಅರ್ಧಶತಕವಾಗಿದೆ. ಈ ಹಿಂದೆ ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ ತಲಾ 17 ಎಸೆತಗಳಲ್ಲಿ ಫಿಫ್ಟಿ ಸಾಧನೆ ಮಾಡಿದ್ದರು.

ಐಪಿಎಲ್ 2021ರ ಅತಿ ವೇಗದ ಫಿಫ್ಟಿ...
ಇದು ಐಪಿಎಲ್‌ 14ನೇ ಆವೃತ್ತಿಯಲ್ಲಿ ದಾಖಲಾದ ಅತಿ ವೇಗದ ಅರ್ಧಶತಕ ಸಾಧನೆಯಾಗಿದೆ.

ಐಪಿಎಲ್‌ನ ಮೂರನೇ ಅತಿ ವೇಗದ ಅರ್ಧಶತಕ...
ಒಟ್ಟಾರೆಯಾಗಿ ಐಪಿಎಲ್‌ನಲ್ಲಿ ದಾಖಲಾದ ಮೂರನೇ ಅತಿ ವೇಗದ ಅರ್ಧಶತಕ ದಾಖಲೆ ಇದಾಗಿದೆ. ಈ ಮೂಲಕ ಇಶಾನ್ ಕಿಶಾನ್ ಅವರು ಸುರೇಶ್ ರೈನಾ ಜೊತೆಗೆ ಜಂಟಿ ಮೂರನೇ ಸ್ಥಾನವನ್ನು ಹಂಚಿದ್ದಾರೆ. ಪಂಜಾಬ್ ನಾಯಕ ಕೆ.ಎಲ್. ರಾಹುಲ್ ಡೆಲ್ಲಿ ವಿರುದ್ಧ ಕೇವಲ 14 ಎಸೆತಗಳಲ್ಲಿ ಫಿಫ್ಟಿ ಗಳಿಸಿರುವುದು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಯೂಸುಫ್ ಪಠಾಣ್ ಹಾಗೂ ಸುನಿಲ್ ನಾರಾಯಣ್ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ.

ಮೊದಲ 10 ಓವರ್‌ಗಳಲ್ಲೇ 131 ರನ್...
ಇಶಾನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಮೊದಲ 10 ಓವರ್‌ಗಳಲ್ಲೇ ಮೂರು ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತ್ತು. ಈ ಮೂಲಕ ಮೊದಲ 10 ಓವರ್‌ಗಳಲ್ಲಿ ಗರಿಷ್ಠ ರನ್ ಪೇರಿಸಿದ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಈ ಹಿಂದೆ ಹೈದರಾಬಾದ್ ವಿರುದ್ಧವೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಮೂರು ವಿಕೆಟ್ ನಷ್ಟಕ್ಕೆ 131 ರನ್ ಪೇರಿಸಿತ್ತು.

ಪವರ್ ಪ್ಲೇಯಲ್ಲಿ 83/1
ಮುಂಬೈ ಪವರ್ ಪ್ಲೇಯಲ್ಲಿ ಕಲೆ ಹಾಕಿದ ಎರಡನೇ ಗರಿಷ್ಠ ಮೊತ್ತ ಇದಾಗಿದೆ. ಈ ಹಿಂದೆ 2018ರಲ್ಲಿ ಡೆಲ್ಲಿ ವಿರುದ್ಧ 84 ರನ್ ಗಳಿಸಿತ್ತು.

ಸೂರ್ಯಕುಮಾರ್ ವೈಯಕ್ತಿಕ ಗರಿಷ್ಠ ಮೊತ್ತ 82...
ಇದೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾವದ್ ಐಪಿಎಲ್‌ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.