ADVERTISEMENT

ಪೊಲಾರ್ಡ್ ಸಿಡಿಲಬ್ಬರಕ್ಕೆ ಚೆನ್ನೈ ಚಲ್ಲಾಪಿಲ್ಲಿ; ಮುಂಬೈಗೆ ರೋಚಕ ಗೆಲುವು

​ಪ್ರಜಾವಾಣಿ ವಾರ್ತೆ
Published 1 ಮೇ 2021, 18:29 IST
Last Updated 1 ಮೇ 2021, 18:29 IST
   

ನವದೆಹಲಿ: ಕೀರಾನ್ ಪೊಲಾರ್ಡ್ ಬ್ಯಾಟಿಂಗ್ ಅಬ್ಬರದ (87*) ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಬೌಲಿಂಗ್‌ನಲ್ಲಿ ಮಿಂಚಿದ್ದ ಪೊಲಾರ್ಡ್ ಎರಡು ವಿಕೆಟ್ ಪಡೆದಿದ್ದರು. ಬ್ಯಾಟಿಂಗ್‌ನಲ್ಲೂ ಸ್ಫೋಟಿಸಿದ ಪೊಲಾರ್ಡ್ ಕೊನೆಯ ಎಸೆತದಲ್ಲಿ ಗೆಲುವಿನ ರನ್ ಬಾರಿಸುವ ಮೂಲಕ ಮುಂಬೈಗೆ ಸ್ಮರಣೀಯ ಗೆಲುವು ಒದಗಿಸಿಕೊಟ್ಟರು. ಈ ಗೆಲುವಿನೊಂದಿಗೆ ಆಡಿರುವ ಏಳು ಪಂದ್ಯಗಳಲ್ಲಿ ನಾಲ್ಕು ಗೆಲುವುಗಳೊಂದಿಗೆ ಒಟ್ಟು ಎಂಟು ಅಂಕಗಳನ್ನು ಸಂಪಾದಿಸಿರುವ ಮುಂಬೈ, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಕಾಯ್ದುಕೊಂಡಿದೆ. ಅತ್ತ ಈ ಸೋಲಿನ ಹೊರತಾಗಿಯೂ 10 ಅಂಕಗಳೊಂದಿಗೆ ಚೆನ್ನೈ ಅಗ್ರಸ್ಥಾನ ಕಾಯ್ದುಕೊಂಡಿದೆ.

219 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಮುಂಬೈಗೆ ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿ ಕಾಕ್ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 8.4 ಓವರ್‌ಗಳಲ್ಲಿ 71 ರನ್‌ಗಳ ಜೊತೆಯಾಟ ನೀಡಿದರು. ಆದರೆ ಇವರಿಬ್ಬರ ಪತನದ ಬೆನ್ನಲ್ಲೇ 9.4 ಓವರ್‌ಗಳಲ್ಲಿ 81 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ADVERTISEMENT

ಈ ಹಂತದಲ್ಲಿ ಕ್ರೀಸಿಗಿಳಿದ ವಿಂಡೀಸ್ ದೈತ್ಯ ಪೊಲಾರ್ಡ್, ಮೈದಾನದಲ್ಲಿ ಸಿಕ್ಸರ್‌‌ಗಳ ಸುರಿಮಳೆಗೈದರು. ಪೊಲಾರ್ಡ್ ಅಬ್ಬರಕ್ಕೆ ಚೆನ್ನೈ ಬೌಲರ್‌‌ಗಳ ಬಳಿ ಉತ್ತರವೇ ಇರಲಿಲ್ಲ.

ಕೇವಲ 17 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಪೊಲಾರ್ಡ್, ಕೃಣಾಲ್ ಪಾಂಡ್ಯ ಜೊತೆಗೆ 89 ರನ್‌‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಇಲ್ಲಿಗೂ ಪೊಲಾರ್ಡ್ ಆರ್ಭಟ ನಿಲ್ಲನಿಲ್ಲ. ಅಂತಿಮವಾಗಿ ಭರ್ತಿ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು.

ಪೊಲಾರ್ಡ್‌ಗೆ ತಕ್ಕ ಸಾಥ್ ನೀಡಿದ ಪಾಂಡ್ಯ ಸೋದರರಾದ ಕೃಣಾಲ್ (32) ಹಾಗೂ ಹಾರ್ದಿಕ್ (16) ರನ್ ಗಳಿಸಿದರು. ಪೊಲಾರ್ಡ್ ಅಬ್ಬರಕ್ಕೆ ಸಾಕ್ಷಿಯೆಂಬಂತೆ 13ನೇ ಓವರ್‌ನಲ್ಲಿ 20, 14ನೇ ಓವರ್‌ನಲ್ಲಿ 16, 15ನೇ ಓವರ್‌ನಲ್ಲಿ 23 ಹಾಗೂ 16ನೇ ಓವರ್‌ನಲ್ಲಿ 16 ಸೇರಿದಂತೆ ನಾಲ್ಕು ಓವರ್‌ಗಳ ಅಂತರದಲ್ಲಿ 76 ರನ್‌ಗಳು ಹರಿದುಬಂದಿದ್ದವು.

ಈ ನಡುವೆ ಮೂರು ವಿಕೆಟ್ ಪಡೆದ ಸ್ಯಾಮ್ ಕರನ್ ಮುಂಬೈ ಗೆಲುವನ್ನು ಕಠಿಣಗೊಳಿಸಿದರು. ಆದರೆ ಅಂತಿಮ ಓವರ್‌ನಲ್ಲಿ ಗೆಲುವಿಗೆ ಬೇಕಾಗಿದ್ದ 16 ರನ್ ಸೊರೆಗೈದ ಪೊಲಾರ್ಡ್, ಮುಂಬೈಗೆ ರೋಚಕಗೆಲುವು ಒದಗಿಸಿಕೊಡುವಲ್ಲಿ ನೆರವಾದರು.

34 ಎಸೆತಗಳನ್ನು ಎದುರಿಸಿದ ಪೊಲಾರ್ಡ್ 87 ರನ್ ಗಳಿಸಿ ಅಜೇಯರಾಗುಳಿದರು. ಅವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ ಹಾಗೂ ಎಂಟು ಭರ್ಜರಿ ಸಿಕ್ಸರ್‌ಗಳು ಸೇರಿದ್ದವು. ಈ ಮೂಲಕ ಅಂತಿಮ 10 ಓವರ್‌ಗಳಲ್ಲಿ 138 ರನ್ ಸೊರೆಗೈಯಲು ನೆರವಾದರು.

ಲುಂಗಿ ಗಿಡಿ ಹಾಗೂ ಠಾಕೂರ್ ಅನುಕ್ರಮವಾಗಿ 62 ಹಾಗೂ 56 ರನ್ ಬಿಟ್ಟುಕೊಟ್ಟು ದುಬಾರಿಯೆನಿಸಿದರು.

ಈ ಮೊದಲು ಅಂಬಟಿ ರಾಯುಡು (72*), ಮೊಯಿನ್ ಅಲಿ (58) ಹಾಗೂ ಫಫ್ ಡುಪ್ಲೆಸಿ (50) ಸ್ಫೋಟಕ ಅರ್ಧಶತಕಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ 218 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಇದು ಮುಂಬೈ ವಿರುದ್ಧ ಚೆನ್ನೈ ದಾಖಲಿಸಿದ ಗರಿಷ್ಠ ಮೊತ್ತವಾಗಿತ್ತು. ಆ ಗುರಿಯನ್ನೀಗ ಯಶಸ್ವಿಯಾಗಿ ಚೇಸ್ ಮಾಡುವಲ್ಲಿ ರೋಹಿತ್ ಪಡೆ ಯಶಸ್ವಿಯಾಗಿದೆ. ಇದರ ಎಲ್ಲ ಶ್ರೇಯಸ್ಸು ಪೊಲಾರ್ಡ್ ಅವರಿಗೆ ಸಲ್ಲುತ್ತದೆ.

ರಾಯುಡು, ಮೋಯಿನ್, ಫಫ್ ಮಿಂಚಿನ ಬ್ಯಾಟಿಂಗ್...
ಕೇವಲ ಇಪ್ಪತ್ತು ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಂಬಟಿ ರಾಯುಡು ಅಬ್ಬರದ ಬ್ಯಾಟಿಂಗ್ ಮುಂದೆ ಮುಂಬೈ ಇಂಡಿಯನ್ಸ್‌ ಬೌಲರ್‌ಗಳು ದಿಕ್ಕು ತಪ್ಪಿದರು.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 218 ರನ್‌ಗಳ ಬೃಹತ್ ಮೊತ್ತ ಗಳಿಸಿತು. ಅಂಬಟಿ ರಾಯುಡು (ಔಟಾಗದೆ 72; 27ಎಸೆತ, 3ಬೌಂಡರಿ, 7ಸಿಕ್ಸರ್) ಕೊನೆಯ ಐದು ಓವರ್‌ಗಳಲ್ಲಿ 82 ರನ್‌ಗಳು ಹರಿದುಬಂದವು.

ಚೆನ್ನೈ ಇನಿಂಗ್ಸ್‌ಗೆ ಶತಕದ ಎರಡು ಜೊತೆಯಾಟಗಳು ಬಲ ತುಂಬಿದವು. ಫಫ್ ಡುಪ್ಲೆಸಿ (50; 28ಎ) ಮತ್ತು ಮೋಯಿನ್ ಅಲಿ (58; 36ಎ) ಎರಡನೇ ವಿಕೆಟ್‌ ಜೊತೆಯಾಟದಲ್ಲಿ 108 ರನ್‌ ಸೇರಿಸಿ ಉತ್ತಮ ಅಡಿಪಾಯ ಹಾಕಿದರು. ಇವರಿಬ್ಬರ ಅಬ್ಬರದಿಂದಾಗಿ 11 ಓವರ್‌ಗಳಲ್ಲಿಯೇ ತಂಡವು 112 ರನ್‌ ಗಳಿಸಿತ್ತು. ಆದರೆ ಈ ಮೊತ್ತಕ್ಕೆ ಮುಂದೆ ನಾಲ್ಕು ರನ್‌ಗಳು ಸೇರುವಷ್ಟರಲ್ಲಿ ಮೂರು ವಿಕೆಟ್‌ಗಳು ಪತನವಾದವು. 11ನೇ ಓವರ್‌ನಲ್ಲಿ ಮೋಯಿನ್ ಅಲಿ ವಿಕೆಟ್‌ ಜಸ್‌ಪ್ರೀತ್ ಬೂಮ್ರಾ ಕಬಳಿಸಿದರು.

ನಂತರದ ಓವರ್‌ನಲ್ಲಿ ಕೀರನ್ ಪೊಲಾರ್ಡ್‌ ಡುಪ್ಲೆಸಿ ಮತ್ತು ಸುರೇಶ್ ರೈನಾ ವಿಕೆಟ್ ಪಡೆದು ಸಂಭ್ರಮಿಸಿದರು. ಇದರ ನಂತರ ಮುಂಬೈ ಆಟಗಾರರಿಗೆ ಸಡಗರಪಡುವ ಅವಕಾಶವನ್ನು ಅಂಬಟಿ ಮತ್ತು ರವೀಂದ್ರ ಜಡೇಜ (ಔಟಾಗದೆ 22; 22ಎ) ಕೊಡಲಿಲ್ಲ.

ಅಂಬಟಿ ಅಬ್ಬರಿಸುತ್ತಿದ್ದರೆ, ಜಡೇಜ ಅವರಿಗೆ ಬೆಂಬಲ ಕೊಡುತ್ತ ಶಾಂತಚಿತ್ತದಿಂದ ಬ್ಯಾಟ್ ಬೀಸಿದರು. ಒಂದು ಬಾರಿ ಎಲ್‌ಬಿಡಬ್ಲ್ಯು ಮನವಿಯಲ್ಲಿ ಅಂಪೈರ್ ಔಟ್ ಕೊಟ್ಟಾಗ ಜಡೇಜ ಯುಡಿಆರ್‌ಎಸ್ ಪಡೆದು ಗೆ್ದ್ದರು. ಇದರಿಂದಾಗಿ ಜೊತೆಯಾಟವು ಕೊನೆಯ ಎಸೆತದವರೆಗೂ ಮುಂದುವರೆಯಿತು. 102 ರನ್‌ಗಳು ಹರಿದುಬಂದವು.

ವಿಭಿನ್ನ ಶೈಲಿಯ ಪಾದಚಲನೆಯಿಂದ ಬ್ಯಾಟಿಂಗ್ ಮಾಡಿದ ಅಂಬಟಿ ಆಟ ರಂಗೇರಿತು. 20ನೇ ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಡ್ರೈವ್, ಪುಲ್ ಶಾಟ್‌ಗಳ ಮೂಲಕ ಮನಮೋಹಕ ಸಿಕ್ಸರ್‌ಗಳನ್ನು ಸಿಡಿಸಿದರು. ಗ್ಯಾಪ್‌ಗಳಲ್ಲಿ ಬೌಂಡರಿಗೆ ಚೆಂಡನ್ನು ಅಟ್ಟಿದ ರೀತಿ ಚಿತ್ತಾಪಹಾರಿಯಾಗಿತ್ತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಮಾಡಿದ ಯೋಜನೆಗಳೆಲ್ಲವೂ ತಲೆಕೆಳಗಾದವು. ಮೊದಲ ಓವರ್‌ನಲ್ಲಿ ಎಡಗೈ ಮಧ್ಯಮವೇಗಿ ಟ್ರೆಂಟ್ ಬೌಲ್ಟ್‌ ಬೌಲಿಂಗ್‌ನಲ್ಲಿ ಋತುರಾಜ್ ಗಾಯಕವಾಡ್ (4 ರನ್) ಔಟಾಗಿದರು. ಈ ಹಂತದಲ್ಲಿ ಇನಿಂಗ್ಸ್‌ ಮೇಲೆ ಹಿಡಿತ ಸಾಧಿಸುವಲ್ಲಿ ಮುಂಬೈ ಬೌಲರ್‌ಗಳು ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.