ADVERTISEMENT

IPL 2021: ಚೆನ್ನೈನಲ್ಲಿ ಫೆ.18 ಅಥವಾ 19ರಂದು ಮಿನಿ ಹರಾಜು

ಏಜೆನ್ಸೀಸ್
Published 23 ಜನವರಿ 2021, 6:36 IST
Last Updated 23 ಜನವರಿ 2021, 6:36 IST
ಮುಂಬೈ ಚಾಂಪಿಯನ್ (ಸಂಗ್ರಹ ಚಿತ್ರ)
ಮುಂಬೈ ಚಾಂಪಿಯನ್ (ಸಂಗ್ರಹ ಚಿತ್ರ)   

ಚೆನ್ನೈ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಟೂರ್ನಿಗೂ ಮುಂಚಿತವಾಗಿ ಫೆಬ್ರವರಿ 18 ಅಥವಾ 19ರಂದು ಚೆನ್ನೈನಲ್ಲಿ ಮಿನಿ ಹರಾಜು ಆಯೋಜನೆಯಾಗಲಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಣ ಚೆನ್ನೈನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯವು ಫೆಬ್ರವರಿ 17ರಂದು ಮುಕ್ತಾಯವಾಗಲಿದೆ. ಇದರಂತೆ ಫೆಬ್ರವರಿ 18 ಅಥವಾ 19ರಂದು ಹರಾಜು ಆಯೋಜಿಸಲು ಯೋಜನೆ ಇರಿಸಿಕೊಳ್ಳಲಾಗಿದೆ.

14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸುವ ಯೋಜನೆ ಹೊಂದಲಾಗಿದೆ. ಕಳೆದ ವರ್ಷ ಎಪ್ರಿಲ್-ಮೇ ತಿಂಗಳಲ್ಲಿ ನಡೆಯಬೇಕಾಗಿದ್ದ ಐಪಿಎಲ್ ಟೂರ್ನಿಯನ್ನು ಕೋವಿಡ್-19 ಹಿನ್ನೆಲೆಯಲ್ಲಿ ವಿಳಂಬವಾಗಿ ಯುಎಇನಲ್ಲಿ ಆಯೋಜಿಸಲಾಗಿತ್ತು.

ADVERTISEMENT

ಐಪಿಎಲ್ ಆತಿಥ್ಯಕ್ಕೆ ಭಾರತವೇ ಮೊದಲ ಆದ್ಯತೆಯಾಗಿದೆ. ಆದರೆ ಪರಿಸ್ಥಿತಿ ಮೇಲೆ ಸಾಕಷ್ಟು ಅವಲಂಬಿತವಾಗಿದೆ. ಮುಷ್ತಾಕ್ ಅಲಿ ಟೂರ್ನಿಯ ಬಳಿಕ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಯುಎಇ ಅತ್ಯುತ್ತಮವಾಗಿತ್ತು. ಅಲ್ಲಿನ ಎಮಿರೇಟ್ಸ್ ಕ್ರಿಕೆಟ್ ಮಂಡಳಿ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಯೋಜಿಸಲು ಎಲ್ಲ ರೀತಿಯ ಬೆಂಬಲವನ್ನು ಒದಗಿಸಿದೆ. ಆದರೆ ಐಪಿಎಲ್ ಭಾರತದ ದೇಶೀಯ ಟಿ20 ಟೂರ್ನಿ ಆಗಿದ್ದರಿಂದ ಸರ್ಕಾರದ ಅನುಮತಿಯೊಂದಿಗೆ ಭಾರತದಲ್ಲೇ ಆಯೋಜಿಸಲು ಎದುರು ನೋಡುತ್ತಿರುವುದಾಗಿ ತಿಳಿಸಿದೆ.

ಐಪಿಎಲ್ 2021 ಟೂರ್ನಿಗೆ ಪೂರ್ವ ಸಿದ್ಧತೆ ನಡೆಸುತ್ತಿರುವ ಎಲ್ಲ ಫ್ರಾಂಚೈಸಿಗಳು ತಮಗೆ ಬೇಡವಾದ ಆಟಗಾರರನ್ನು ಬಿಡುಗಡೆಗೊಳಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಸ್ಟಾರ್ ಆಟಗಾರರಾದ ಆ್ಯರೋನ್ ಫಿಂಚ್, ಕ್ರಿಸ್ ಮೊರಿಸ್ ಸೇರಿದಂತೆ 10 ಆಟಗಾರರನ್ನು ಬಿಡುಗಡೆಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.