ADVERTISEMENT

ಮಯಂಕ್‌ ಮಾಸ್ಟರ್ ಕ್ಲಾಸ್ ಆಟ; ಕೇವಲ ಒಂದು ರನ್ ಅಂತರದಿಂದ ಶತಕ ಮಿಸ್

​ಪ್ರಜಾವಾಣಿ ವಾರ್ತೆ
Published 2 ಮೇ 2021, 16:30 IST
Last Updated 2 ಮೇ 2021, 16:30 IST
   

ಅಹಮದಾಬಾದ್: ಪಂಜಾಬ್ ಕಿಂಗ್ಸ್ ತಂಡದ ಉಸ್ತುವಾರಿ ನಾಯಕ ಮಯಂಕ್ ಅಗರವಾಲ್, ಬಿರುಸಿನ ಅರ್ಧಶತಕ ಬಾರಿಸುವ ಮೂಲಕ ಅಬ್ಬರಿಸಿದ್ದಾರೆ.

ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಅಂತಿಮ ಎಸೆತದ ವರೆಗೂ ಇನ್ನಿಂಗ್ಸ್ ಬೆಳೆಸಿದ ಮಯಂಕ್, ಕೇವಲ ಒಂದು ರನ್ ಅಂತರದಿಂದ ಶತಕ ಮಿಸ್ ಮಾಡಿಕೊಂಡರು.

ನಾಯಕರಾಗಿ ಪದಾರ್ಪಣೆ ಪಂದ್ಯದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರ ಸಾಲಿನಲ್ಲಿ ಸಂಜು ಸ್ಯಾಮ್ಸನ್ ಬಳಿಕದ ಸ್ಥಾನದಲ್ಲಿ ಮಯಂಕ್ ಅಗರವಾಲ್ ಗುರುತಿಸಿಕೊಂಡರು. ಇದೇ ಆವೃತ್ತಿಯ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ಪರ ಸಂಜು ಶತಕ (119) ಸಾಧನೆ ಮಾಡಿದ್ದರು. ಹಾಗೆಯೇ ಸುರೇಶ್ ರೈನಾ (2013) ಹಾಗೂ ಕ್ರಿಸ್ ಗೇಲ್ (2019) ಬಳಿಕ ಐಪಿಎಲ್‌ನಲ್ಲಿ 99 ರನ್ ಗಳಿಸಿ ಅಜೇಯರಾಗುಳಿದ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ಭಾಜನರಾದರು.

ಮಯಂಕ್ ಶತಕ ಪೂರೈಸಲು ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಅಗತ್ಯವಿತ್ತು. ಆದರೆ ಬೌಂಡರಿ ಸಿಡಿಸುವ ಮೂಲಕ 99 ರನ್ ಗಳಿಸಿ ಅಜೇರಾಗುಳಿದರು.

ADVERTISEMENT

ಮಯಂಕ್ ಅಮೋಘ ಇನ್ನಿಂಗ್ಸ್‌ನಲ್ಲಿ ಎಂಟು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳು ಸೇರಿದ್ದವು.

ಮಯಂಕ್‌ಗೆ ಇತರೆ ಯಾವ ಬ್ಯಾಟ್ಸ್‌ಮನ್‌ನಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಆದರೂ ತಂಡದೆಲ್ಲ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡರು.

ಅನಾರೋಗ್ಯಕ್ಕೆ ತುತ್ತಾಗಿರುವ ಕೆ.ಎಲ್. ರಾಹುಲ್ ಅನುಪಸ್ಥಿತಿಯು ಪಂಜಾಬ್‌ಗೆ ದೊಡ್ಡ ಆಘಾತವನ್ನೇ ನೀಡಿದೆ. ಆದರೆ ಅತಿ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕನ್ನಡಿಗ ಮಯಂಕ್ ಅಗರವಾಲ್ ಯಶಸ್ವಿಯಾಗಿದ್ದಾರೆ.

ಅಂತಿಮವಾಗಿ ಪಂಜಾಬ್ ಆರು ವಿಕೆಟ್ ನಷ್ಟಕ್ಕೆ 166 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.