ADVERTISEMENT

ಹಾಲಿ ಚಾಂಪಿಯನ್ ಮುಂಬೈಗೆ ಸೋಲಿನ ರುಚಿ ತೋರಿಸಿದ ಪಂಜಾಬ್ ಕಿಂಗ್ಸ್

ಇತ್ತಂಡಗಳ ನಾಯಕರಿಂದ ಫಿಫ್ಟಿ ಸಾಧನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 17:49 IST
Last Updated 23 ಏಪ್ರಿಲ್ 2021, 17:49 IST
ಚಿತ್ರ ಕೃಪೆ: ಪಂಜಾಬ್ ಕಿಂಗ್ಸ್, ಟ್ವಿಟರ್
ಚಿತ್ರ ಕೃಪೆ: ಪಂಜಾಬ್ ಕಿಂಗ್ಸ್, ಟ್ವಿಟರ್   

ಚೆನ್ನೈ: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿರುವ ಪಂಜಾಬ್ ಕಿಂಗ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯಲ್ಲಿ ಶುಕ್ರವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಒಂಬತ್ತು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ಸತತ ಮೂರು ಸೋಲುಗಳೊಂದಿಗೆ ಮುಖಭಂಗ ಅನುಭವಿಸಿರುವ ಕೆ.ಎಲ್. ರಾಹುಲ್ ಪಡೆಯು, ಕೊನೆಗೂ ಗೆಲುವಿನ ಹಾದಿಗೆ ಮರಳಿದೆ. ಅತ್ತ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸತತ ಎರಡನೇ ಸೋಲಿಗೆ ಶರಣಾಗಿದೆ.

ಮೊದಲು ಪಂಜಾಬ್ ಸಾಂಘಿಕ ದಾಳಿಗೆ ತತ್ತರಿಸಿದ ಮುಂಬೈ, ನಾಯಕ ರೋಹಿತ್ ಶರ್ಮಾ ಅರ್ಧಶತಕದ (63) ಹೊರತಾಗಿಯೂ ಆರು ವಿಕೆಟ್ ನಷ್ಟಕ್ಕೆ 131 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

ADVERTISEMENT

ಬಳಿಕ ಮಯಂಕ್ ಅಗರವಾಲ್ (25) ಹಾಗೂ ಕ್ರಿಸ್ ಗೇಲ್ (43*) ಜೊತೆಗೆ ತಲಾ ಅರ್ಧಶತಕಗಳ ಜೊತೆಯಾಟ ನೀಡಿ ನಾಯಕನ ಇನ್ನಿಂಗ್ಸ್ ಕಟ್ಟಿದ ಕೆ.ಎಲ್. ರಾಹುಲ್, ಸ್ವತಃ ಆಕರ್ಷಕ ಫಿಫ್ಟಿ (60*) ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ 17.4 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ರಾಹುಲ್ ಮೊದಲು ಮಯಂಕ್ ಜೊತೆಗೆ 53 ಬಳಿಕ ಗೇಲ್ ಅವರೊಂದಿಗೆ ಮುರಿಯದ ಎರಡನೇ ವಿಕೆಟ್‌ಗೆ 79 ರನ್‌‌ಗಳ ಜೊತೆಯಾಟ ನೀಡಿದರು. 52 ಎಸೆತಗಳನ್ನು ಎದುರಿಸಿದ ರಾಹುಲ್ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್‌ಗಳ ನೆರವಿನಿಂದ 60 ರನ್ ಗಳಿಸಿ ಅಜೇಯರಾಗುಳಿದರು. ಅತ್ತ ಫಾರ್ಮ್‌ಗೆ ಮರಳಿರುವ ಗೇಲ್ 35 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 43 ರನ್ ಗಳಿಸಿ ಔಟಾಗದೆ ಉಳಿದರು.

ಈ ಮೊದಲು ನಾಯಕ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕದ (63) ಹೊರತಾಗಿಯೂ ಚೆನ್ನೈನ ಸವಾಲಿನ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿರುವ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 131 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

ನಾಯಕನ ಆಟವಾಡಿದ ರೋಹಿತ್ 52 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 63 ರನ್ ಗಳಿಸಿದರು. ಅಲ್ಲದೆ ಸೂರ್ಯಕುಮಾರ್ ಯಾದವ್ (33) ಜೊತೆಗೆ ಮೂರನೇ ವಿಕೆಟ್‌ಗೆ 79 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು.

ಕ್ವಿಂಟನ್ ಡಿ ಕಾಕ್ (3), ಇಶಾನ್ ಕಿಶನ್ (6), ಹಾರ್ದಿಕ್ ಪಾಂಡ್ಯ (1), ಕೃುಣಾಲ್ ಪಾಂಡ್ಯ (3) ನಿರಾಸೆ ಮೂಡಿಸಿದರು. ಕೊನೆಯಲ್ಲಿ ಕೀರಾನ್ ಪೊಲಾರ್ಡ್ 16 ರನ್ ಗಳಿಸಿ ಅಜೇಯರಾಗುಳಿದರು.

ಆದರೆ ಮುಂಬೈ ಪರ ರೋಹಿತ್ ಹಾಗೂ ಸೂರ್ಯ ಹೊರತುಪಡಿಸಿದರೆ ಇತರೆ ಯಾವ ಬ್ಯಾಟ್ಸ್‌ಮನ್ ಮಿಂಚಲಿಲ್ಲ. ಪಂಜಾಬ್ ಪರ ಪ್ರಸಕ್ತ ಸಾಲಿನಲ್ಲಿ ಜೊಚ್ಚಲ ಪಂದ್ಯವನ್ನಾಡುತ್ತಿರುವ ರವಿ ಬಿಶ್ನೋಯ್ 21 ರನ್ ತೆತ್ತು ಎರಡು ವಿಕೆಟ್ ಕಿತ್ತು ಮಿಂಚಿದರು. ಮೊಹಮ್ಮದ್ ಶಮಿ ಕೂಡಾ ಎರಡು ವಿಕೆಟ್ ಪಡೆದು ಮುಂಬೈ ಓಟಕ್ಕೆ ಕಡಿವಾಣ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.