ADVERTISEMENT

IPL-2021: ರಾಹುಲ್ ಪಡೆಗೆ ‘ಬೆಂಗಳೂರು’ ಸವಾಲು

ರಾಯಲ್ ಚಾಲೆಂಜರ್ಸ್–ಪಂಜಾಬ್‌ ಕಿಂಗ್ಸ್‌ ಹಣಾಹಣಿ ಇಂದು

ಪಿಟಿಐ
Published 29 ಏಪ್ರಿಲ್ 2021, 19:37 IST
Last Updated 29 ಏಪ್ರಿಲ್ 2021, 19:37 IST
ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಕೆ
ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಕೆ   

ಅಹಮದಾಬಾದ್: ಬೆಂಗಳೂರು ಹುಡುಗ ಕೆ.ಎಲ್. ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಶುಕ್ರವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಇಲ್ಲಿಯರವರೆಗೆ ಆಡಿರುವ ಆರು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಸೋತಿದೆ. ಒಟ್ಟು ಹತ್ತು ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಅಂಕಗಳ ಲೆಕ್ಕಾಚಾರದಲ್ಲಿ ಮೊದಲ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್‌ ಜೊತೆ ನಿಕಟ ಪೈಪೋಟಿ ನಡೆಸುತ್ತಿದೆ.

ಆರಂಭಿಕ ಜೋಡಿ ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ ಉತ್ತಮ ಲಯದಲ್ಲಿದ್ದಾರೆ. ಒಂದೊಮ್ಮೆ ಅವರಿಬ್ಬರೂ ಬೇಗನೆ ಔಟಾದರೂ, ಎಬಿ ಡಿವಿಲಿಯರ್ಸ್‌ ಇದ್ದೇ ಇದ್ದಾರೆ ಎನ್ನುವ ಧೈರ್ಯ ತಂಡಕ್ಕೆ ಇದೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಅವರ ಅಬ್ಬರದ ಬ್ಯಾಟಿಂಗ್‌ ರಂಗೇರಿತ್ತು. ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ADVERTISEMENT

ವಾಷಿಂಗ್ಟನ್ ಸುಂದರ್, ಡೇನಿಯಲ್ ಸ್ಯಾಮ್ಸ್‌ ಮತ್ತು ಕೈಲ್ ಜೆಮಿಸನ್ ಕೊನೆಯ ಹಂತದಲ್ಲಿ ಒಂದಷ್ಟು ರನ್‌ ಸೇರಿಸಬಲ್ಲರು. ಬೌಲಿಂಗ್‌ನಲ್ಲಿಯೂ ತಂಡಕ್ಕೆ ಆಸರೆಯಾಗುವ ಸಮರ್ಥರು. ಕೊನೆಯ ಎಸೆತದವರೆಗೂ ಛಲದ ಹೋರಾಟ ಮಾಡುವ ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್ ಕೂಡ ತಂಡದ ಗೆಲುವಿಗೆ ಬಲ ತುಂಬಬಲ್ಲರು.

ಆದರೆ, ಪಂಜಾಬ್ ತಂಡದ ಪರಿಸ್ಥಿತಿ ಬೇರೆ ಇದೆ. ನಾಲ್ಕರಲ್ಲಿ ಸೋತು, ಎರಡರಲ್ಲಿ ಮಾತ್ರ ಜಯಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ ವಿಭಾಗಗಳೆರಡರಲ್ಲೂ ಅಸ್ಥಿರತೆಯೇ ತಂಡದ ವೈಫಲ್ಯಕ್ಕೆ ಕಾರಣವಾಗಿದೆ. ರಾಹುಲ್, ಮಯಂಕ್ ಅಗರವಾಲ್, ಕ್ರಿಸ್ ಗೇಲ್ ಮತ್ತು ನಿಕೋಲಸ್ ಪೂರನ್ ಅವರ ಮೇಲೆಯೇ ಬ್ಯಾಟಿಂಗ್ ವಿಭಾಗ ಸಂಪೂರ್ಣ ಅವಲಂಬಿತವಾಗಿದೆ. ದೀಪಕ್ ಹೂಡಾ ಮತ್ತು ಡೇವಿಡ್ ಮಲಾನ್ ಚೆನ್ನಾಗಿ ಆಡಿದರೆ ಬೋನಸ್‌ ಎಂಬಂತಾಗಿದೆ. ಕೋಲ್ಕತ್ತ ನೈಟ್‌ರೈಡರ್ಸ್‌ ಎದುರಿನ ಪಂದ್ಯದಲ್ಲಿ ಸೋಲಲು ಬ್ಯಾಟಿಂಗ್ ವೈಫಲ್ಯವೇ ಕಾರಣವಾಗಿತ್ತು.

ಬೌಲಿಂಗ್‌ನಲ್ಲಿಯೂ ಇದೇ ಪರಿಸ್ಥಿತಿ ಇದೆ. ಆರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ ಮತ್ತು ರವಿ ಬಿಷ್ಣೋಯಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಬೌಲಿಂಗ್ ಮಾಡಿದರೆ, ಕೊಹ್ಲಿ ಬಳಗಕ್ಕೆ ಕಠಿಣ ಸವಾಲು ಎದುರಾಗಬಹುದು.

ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ದೇವದತ್ತ ಪಡಿಕ್ಕಲ್, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್(ವಿಕೆಟ್‌ಕೀಪರ್), ವಾಷಿಂಗ್ಟನ್ ಸುಂದರ್, ಡೇನಿಯಲ್ ಸ್ಯಾಮ್ಸ್‌, ಕೈಲ್ ಜೆಮಿಸನ್, ಹರ್ಷಲ್ ಪಟೇಲ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್.

ಪಂಜಾಬ್ ಕಿಂಗ್ಸ್‌: ಕೆ.ಎಲ್. ರಾಹುಲ್ (ನಾಯಕ/ವಿಕೆಟ್‌ಕೀಪರ್), ಮಯಂಕ್ ಅಗರವಾಲ್, ಕ್ರಿಸ್ ಗೇಲ್, ಡೇವಿಡ್ ಮಲಾನ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಶಾರೂಕ್ ಖಾನ್, ಮೋಯಿಸಸ್‌ ಹೆನ್ರಿಕ್ಸ್‌, ಕ್ರಿಸ್‌ ಜೋರ್ಡಾನ್, ರೀಲಿ ಮೆರಿಡಿತ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಆರ್ಷದೀಪ್ ಸಿಂಗ್.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.