ADVERTISEMENT

IPL 2021: ಧೋನಿ vs ಕೊಹ್ಲಿ; ಐಪಿಎಲ್ ನಾಯಕರಾಗಿ ಕೊನೆಯ ಬಾರಿಗೆ ಮುಖಾಮುಖಿ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಸೆಪ್ಟೆಂಬರ್ 2021, 12:02 IST
Last Updated 24 ಸೆಪ್ಟೆಂಬರ್ 2021, 12:02 IST
ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ
ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ   

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಶಾರ್ಜಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸುತ್ತಿದೆ.

ಐಪಿಎಲ್‌ನಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಸಿಎಸ್‌ಕೆ ಕಪ್ತಾನ ಮಹೇಂದ್ರ ಸಿಂಗ್ ಧೋನಿ ನಡುವಣ ಕೊನೆಯ ಹಣಾಹಣಿ ಇದಾಗಿದೆ ಎಂಬುದು ವರದಿಯಾಗಿದೆ.

ಪ್ರಸಕ್ತ ಸಾಲಿನ ಐಪಿಎಲ್ ಬಳಿಕ ಆರ್‌ಸಿಬಿ ನಾಯಕ ಸ್ಥಾನ ತೊರೆಯುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ. ಅತ್ತ 40 ವರ್ಷದ ಧೋನಿ, ಮುಂದಿನ ವರ್ಷದಲ್ಲಿ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ಆಡುವುರೇ ಎಂಬುದು ತಿಳಿದು ಬಂದಿಲ್ಲ.

ಹಾಗಾಗಿ ಐಪಿಎಲ್‌ನಲ್ಲಿ ನಾಯಕರಾಗಿ ಮಗದೊಂದು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹಾಗಿದ್ದರೂ ಪ್ರಸಕ್ತ ಸಾಲಿನಲ್ಲೇ ಆರ್‌ಸಿಬಿ ಹಾಗೂ ಚೆನ್ನೈ ತಂಡಗಳು ಪ್ಲೇ-ಆಫ್ ಹಂತವನ್ನು ಪ್ರವೇಶಿಸಿದರೆಮತ್ತೊಂದು ಸಲ ಎದುರಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಸದ್ಯ ಅಂಕಪಟ್ಟಿಯಲ್ಲಿರುವ ಎರಡನೇ ಸ್ಥಾನದಲ್ಲಿರುವ ಚೆನ್ನೈ ಪ್ಲೇ-ಆಫ್ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಅತ್ತ ಮೂರನೇ ಸ್ಥಾನದಲ್ಲಿರುವ ಬೆಂಗಳೂರಿಗೆ ಈ ಪಂದ್ಯವು ಮಹತ್ವದೆನಿಸಿದೆ.

ಈ ಎಲ್ಲದರಿಂದ ಕೂಲ್ ಕ್ಯಾಪ್ಟನ್ ಹಾಗೂ ಕಿಂಗ್ ಕೊಹ್ಲಿ ನಡುವಣ ಮುಖಾಮುಖಿಯು ಹೆಚ್ಚಿನ ರೋಚಕತೆ ಕೆರಳಿಸಿದೆ. 'ದಕ್ಷಿಣ ಡರ್ಬಿ' ಎಂದೇ ಖ್ಯಾತಿ ಪಡೆದಿರುವ ಈ ಪಂದ್ಯವು ಅಭಿಮಾನಿಗಳ ಪಾಲಿಗೂ ಪ್ರತಿಷ್ಠೆಯ ಪಂದ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.