ADVERTISEMENT

ರಾಹುಲ್ ರನೌಟ್ ಮನವಿ ಹಿಂಪಡೆದು ಕ್ರೀಡಾಸ್ಫೂರ್ತಿ ಮೆರೆದ ರೋಹಿತ್, ಕೃಣಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಸೆಪ್ಟೆಂಬರ್ 2021, 11:11 IST
Last Updated 29 ಸೆಪ್ಟೆಂಬರ್ 2021, 11:11 IST
ಕೆ.ಎಲ್. ರಾಹುಲ್ ಹಾಗೂ ರೋಹಿತ್ ಶರ್ಮಾ
ಕೆ.ಎಲ್. ರಾಹುಲ್ ಹಾಗೂ ರೋಹಿತ್ ಶರ್ಮಾ   

ಅಬುಧಾಬಿ: ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್. ರಾಹುಲ್ ಅವರ ರನೌಟ್ ಮನವಿಯನ್ನು ಹಿಂಪಡೆಯುವ ಮೂಲಕ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹಾಗೂ ಕೃಣಾಲ್ ಪಾಂಡ್ಯ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ.

ಐಪಿಎಲ್‌ನಲ್ಲಿ ಮಂಗಳವಾರ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಪಂದ್ಯದ ವೇಳೆ ಈ ಘಟನೆ ನಡೆದಿತ್ತು. ಪಂಜಾಬ್ ಬ್ಯಾಟಿಂಗ್ ವೇಳೆ ಕೃಣಾಲ್ ಪಾಂಡ್ಯ ಎಸೆದ ಇನ್ನಿಂಗ್ಸ್‌ನ ಆರನೇ ಓವರ್‌ನ ಅಂತಿಮ ಎಸೆತದಲ್ಲಿ ಸ್ಟ್ರೈಕರ್‌ನಲ್ಲಿದ್ದ ಕ್ರಿಸ್ ಗೇಲ್ ಬಲವಾಗಿ ಹೊಡೆದಿದ್ದರು.

ಚೆಂಡು ನೇರವಾಗಿ ನಾನ್ ಸ್ಟ್ರೈಕರ್‌ನಲ್ಲಿದ್ದ ಕೆ.ಎಲ್. ರಾಹುಲ್ ಅವರಿಗೆ ಬಡಿದಿತ್ತು. ಚೆಂಡಿನ ಏಟಿನಿಂದ ಪಾರಾಗುವ ಯತ್ನದಲ್ಲಿ ಸಮತೋಲನ ಕಳೆದುಕೊಂಡ ರಾಹುಲ್ ಕ್ರೀಸಿನಿಂದ ಕದಲಿದರು.

ರಾಹುಲ್ ದೇಹಕ್ಕೆ ಬಡಿದ ಚೆಂಡು ಅಲ್ಲೇ ಇದ್ದ ಕೃಣಾಲ್ ಪಾಂಡ್ಯ ಕೈಸೇರಿತ್ತು. ತಕ್ಷಣ ವಿಕೆಟ್‌ಗೆ ಎಸೆದು ರನೌಟ್‌ಗಾಗಿ ಮನವಿಯನ್ನು ಮಾಡಿದರು. ಮನವಿಯನ್ನು ಪುರಸ್ಕರಿಸಿದ ಅಂಪೈರ್ ಇನ್ನೇನು ಥರ್ಡ್ ಅಂಪೈರ್‌ಗೆ ನೀಡುವ ಸಂದರ್ಭದಲ್ಲಿ ಅಲ್ಲೇ ಸಮೀಪದಲ್ಲಿದ್ದ ನಾಯಕ ರೋಹಿತ್ ಜೊತೆ ಸಮಾಲೋಚಿಸಿದ ಕೃಣಾಲ್ ಪಾಂಡ್ಯ ರನೌಟ್ ಮನವಿಯನ್ನು ಹಿಂಪಡೆಯುವುದಾಗಿ ಅಂಪೈರ್‌ಗೆ ಸೂಚಿಸಿದರು.

ಇದರಿಂದಾಗಿ ರಾಹುಲ್ ಬ್ಯಾಟಿಂಗ್ ಮುಂದುರಿಸಲು ಸಾಧ್ಯವಾಯಿತು. ತಕ್ಷಣ ರಾಹುಲ್ ಬಳಿ ತೆರಳಿದ ಕೃಣಾಲ್, ಗಾಯದ ಬಗ್ಗೆ ವಿಚಾರಿಸಿದರು. ರಾಹುಲ್ ಕೂಡಾ ಮುಂಬೈ ನಾಯಕ ರೋಹಿತ್‌ಗೆ 'ಥಂಬ್ಸ್ ಅಪ್' ಮೂಲಕ ಧನ್ಯವಾದವನ್ನು ಸೂಚಿಸಲು ಮರೆಯಲಿಲ್ಲ.

ಮುಂಬೈ ತಂಡದ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಕೃಣಾಲ್ ಪಾಂಡ್ಯ ಮೈದಾನದಲ್ಲಿ ತೋರಿರುವ ಕ್ರೀಡಾಸ್ಫೂರ್ತಿಯು ಅಭಿಮಾನಿಗಳಿಂದ ವ್ಯಾಪಕ ಮನ್ನಣೆಗೆ ಪಾತ್ರವಾಗಿದೆ.

ಅಂದ ಹಾಗೆ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.