ADVERTISEMENT

IPL 2021: ರಾಹುಲ್ ಕ್ಲಾಸ್ ಆಟ, ದೀಪಕ್ ಹೂಡಾ ವರ್ಷನ್ 2.0

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 16:51 IST
Last Updated 12 ಏಪ್ರಿಲ್ 2021, 16:51 IST
ಕೆಎಲ್ ರಾಹುಲ್, ದೀಪಕ್ ಹೂಡಾ
ಕೆಎಲ್ ರಾಹುಲ್, ದೀಪಕ್ ಹೂಡಾ   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಬ್ಯಾಟ್ಸ್‌ಮನ್‌ಗಳು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಗಮನ ಸೆಳೆದಿದ್ದಾರೆ.

ಕನ್ನಡಿಗ ಹಾಗೂ ನಾಯಕ ಕೆಎಲ್ ರಾಹುಲ್ 91 ರನ್ ಗಳಿಸಿದರೆ ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೂಡಾ 64 ರನ್ ಸಿಡಿಸಿ ಅಬ್ಬರಿಸಿದರು. ಈ ನಡುವೆ ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಬಿರುಸಿನ 40 ರನ್ ಪೇರಿಸಿ, ರಾಜಸ್ಥಾನ ಬೌಲರ್‌ಗಳನ್ನು ಹಿಗ್ಗಾಮುಗ್ಗ ಥಳಿಸಿದರು.

ಅಷ್ಟೇ ಯಾಕೆ ಐಪಿಎಲ್ 2021ನೇ ಆವೃತ್ತಿಯಲ್ಲಿ ಇನ್ನಿಂಗ್ಸ್‌ವೊಂದರಲ್ಲಿ 200 ಅಥವಾ ಅದಕ್ಕಿಂತಲೂ ಹೆಚ್ಚು ರನ್ ಪೇರಿಸಿದ ಮೊದಲ ತಂಡವೆಂಬ ಖ್ಯಾತಿಗೆ ಪಾತ್ರವಾಗಿದೆ.

ADVERTISEMENT

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಪಂಜಾಬ್ ಯೋಜನೆಗಳಿಗೆ ಯಾವುದೇ ಧಕ್ಕೆಯುಂಟಾಗಲಿಲ್ಲ. ಮೊದಲು ರಾಹುಲ್ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರೆ ಅತ್ತ ಕ್ರಿಸ್ ಗೇಲ್ ಮನಬಂದಂತೆ ದಂಡಿಸಿದರು.

28 ಎತೆಗಳನ್ನು ಎದುರಿಸಿದ ಗೇಲ್ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 40 ರನ್ ಗಳಿಸಿದರು. ಇದರಲ್ಲಿ ಎರಡು ಸಿಕ್ಸರ್‌ಗಳು ಸೇರಿದ್ದವು. ಈ ಮೂಲಕ ಐಪಿಎಲ್‌ನಲ್ಲಿ 350 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರರಾದರು.

ಗೇಲ್ ಪತನದ ಬಳಿಕ ಕ್ರೀಸಿಗಿಳಿದ ದೀಪಕ್ ಹೂಡಾ, ಅಕ್ಷರಶಃ ರಾಜಸ್ಥಾನ ಬೌಲರ್‌ಗಳನ್ನು ದಂಡಿಸಿದರು. ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದ ಹೂಡಾ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಆರು ಸಿಕ್ಸರ್‌ಗಳು ಸೇರಿದ್ದವು. ಅಂತಿಮವಾಗಿ 28 ಎಸೆತಗಳಲ್ಲಿ 64 ರನ್ ಸಿಡಿಸಿ ಅಬ್ಬರಿಸಿದರು.

ಐಪಿಎಲ್‌ನಲ್ಲಿ ಕಳೆದ ಕೆಲವು ವರ್ಷಗಳಿಂದಲೂ ಆಡುತ್ತಿದ್ದರೂ ದೀಪಕ್ ಹೂಡಾ ಅಸ್ಥಿರತೆಯ ಫಾರ್ಮ್‌ನಿಂದಾಗಿ ಬದಿಗೆ ಸರಿಸಲ್ಪಟ್ಟಿದ್ದರು. ಆದರೆ ಈ ಬಾರಿ ಸ್ಪಷ್ಟ ಯೋಜನೆಯೊಂದಿಗೆ ಕ್ರೀಸಿಗಿಳಿದಿದ್ದಾರೆ. ಈ ಮೂಲಕ ದೀಪಕ್ ಹೂಡಾ ವರ್ಷನ್ 2.0 ಕಾರ್ಯಾಚರಣೆಯನ್ನು ಆರಂಭಿಸಿದೆ.

ಅತ್ತ ನಾಯಕನ ಇನ್ನಿಂಗ್ಸ್ ಕಟ್ಟಿದ ರಾಹುಲ್, ಇನ್ನೇನು ಶತಕದಂಚಿನಲ್ಲಿ ರಾಹುಲ್ ತೇವಾತಿಯಾ ಅದ್ಭುತ ಕ್ಯಾಚ್‌‌ಗೆ ಬಲಿಯಾದರು. ಇದರಿಂದಾಗಿ ಕೇವಲ ಒಂಬತ್ತು ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡರು. 50 ಎಸೆತಗಳನ್ನು ಎದುರಿಸಿದ ರಾಹುಲ್ ಏಳು ಬೌಂಡರಿ ಹಾಗೂ ಐದು ಸಿಕ್ಸರ್ ನೆರವಿನಿಂದ 91 ರನ್ ಗಳಿಸಿದರು. ಅಲ್ಲದೆ ಪಂಜಾಬ್ ತಂಡದ ಪರ 2,000 ರನ್‌ಗಳ ಮೈಲುಗಲ್ಲನ್ನು ತಲುಪಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.