ADVERTISEMENT

ಐಪಿಎಲ್ 2021: ಶಾರ್ಜಾ ಕ್ರೀಡಾಂಗಣದಲ್ಲಿ ನೂತನ ಸೌಲಭ್ಯಗಳು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 16:20 IST
Last Updated 14 ಆಗಸ್ಟ್ 2021, 16:20 IST
ಆರ್‌ಸಿಬಿ ತಂಡ  –ಸಾಂದರ್ಭಿಕ ಚಿತ್ರ
ಆರ್‌ಸಿಬಿ ತಂಡ  –ಸಾಂದರ್ಭಿಕ ಚಿತ್ರ   

ಶಾರ್ಜಾ (ಪಿಟಿಐ): ಮುಂದಿನ ತಿಂಗಳು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ಆಯೋಜಿಸಲಿರುವ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಹೊಸ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಪ್ರಸಕ್ತ ಋತುವಿನ ಐಪಿಎಲ್ ಟೂರ್ನಿಯನ್ನು ಹೋದ ಮೇ ತಿಂಗಳಲ್ಲಿ ಭಾರತದಲ್ಲಿಯೇ ಆಯೋಜಿಸಲಾಗಿತ್ತು. ಆದರೆ, ಬಯೋಬಬಲ್‌ನಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾದಾಗ ಟೂರ್ನಿಯನ್ನು ಮುಂದೂಡಲಾಗಿತ್ತು.

ಇದೀಗ ಉಳಿದರ್ಧ ಭಾಗದ ಟೂರ್ನಿಯನ್ನು ಯುನೈಟೆಡ್ ಅರಬ್‌ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ಆಯೋಜಿಸಲಾಗುತ್ತಿದೆ. ದುಬೈ, ಅಬುಧಾಬಿ ಮತ್ತು ಶಾರ್ಜಾಗಳಲ್ಲಿ ಪಂದ್ಯಗಳು ನಡೆಯಲಿವೆ.

ADVERTISEMENT

ಈ ಸಂದರ್ಭಕ್ಕಾಗಿ ಕೆಲವು ಮೂಲಸೌಲಭ್ಯಗಳನ್ನು ಶಾರ್ಜಾದಲ್ಲಿ ಅಭಿವೃದ್ಧಿಗೊಳಿಲಾಗಿದೆ.

‘ಹೊಸ ಹುಲ್ಲಿನ ಹೊದಿಕೆಯನ್ನು ಹಾಕಿರುವ ಆರು ಪಿಚ್‌ಗಳು ಸಿದ್ಧವಾಗಿವೆ. ಅದರಲ್ಲಿ ಎರಡು ಅಭ್ಯಾಸದ ಪಿಚ್‌ಗಳೂ ಇವೆ. ಇನ್ನೊಂದು ಭಾಗದಲ್ಲಿ ಅಭ್ಯಾಸಕ್ಕಾಗಿ ನಾಲ್ಕು ಟರ್ಫ್‌ ಪಿಚ್‌ಗಳು ಇರುವ ಸೌಲಭ್ಯವನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಇವು ಐಪಿಎಲ್ ವೇಳೆಗೆ ಸಿದ್ಧವಾಗಲಿವೆ’ ಎಂದು ಶನಿವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಇದಲ್ಲದೇ, ಫಿಟ್ ಕ್ಯಾಪಿಟಲ್ ಜಿಮ್ನಾಷಿಯಂ, ಒಳಾಂಗಣ ಈಜುಕೊಳ, ಸ್ಟೀಮ್ ಮತ್ತು ಸೋನಾ ಬಾತ್ ಸೌಲಭ್ಯಗಳು ಸಿದ್ಧವಾಗಿವೆ. ಗಣ್ಯರಿಗಾಗಿ 11 ಐಷಾರಾಮಿ ಕೋಣೆಗಳು, ವೈಭವೋಪೇತ ಭೋಜನಾಲಯ ಮತ್ತು ಆತಿಥಿ ಗೃಹಗಳು ಸಿದ್ಧವಾಗಿವೆ. ಇದು ಪೆವಿಲಿಯನ್ ತುದಿಯ ಮೇಲ್ಭಾಗದಲ್ಲಿವೆ’ ಎಂದು ತಿಳಿಸಲಾಗಿದೆ.

‘ಶಾರ್ಜಾದ ಮ್ಯಾಜಿಕ್ ಯುಎಇಯ ಬೇರೆಲ್ಲ ಕ್ರೀಡಾಂಗಣಗಳಿಗಿಂತ ವಿಶಿಷ್ಟವಾದದ್ದು. ಅದಕ್ಕಾಗಿ ಇಲ್ಲಿ ವಿಭಿನ್ನ ರೀತಿಯ ಸೌಲಭ್ಯಗಳನ್ನು ಅಭಿವೃದ್ಧಿಮಾಡಲಾಗಿದೆ‘ ಎಂದು ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದ ಸಿಇಒ ಖಲಾಫ್ ಬುಕಾತಿರ್ ತಿಳಿಸಿದ್ದಾರೆ.

‘ಐಪಿಎಲ್ ಪಂದ್ಯಗಳಿಗೆ ಪ್ರೇಕ್ಷಕರಿಗೆ ಪ್ರವೇಶ ನೀಡುವ ಬಗ್ಗೆ ಇನ್ನೂ ಖಚಿತವಾಗಿ ತಿಳಿದಿಲ್ಲ. ಆದರೆ, ಮುಂಬರುವ ವಿಶ್ವಮಟ್ಟದ ಕ್ರಿಕೆಟ್‌ ಟೂರ್ನಿ ಆಯೋಜನೆಗೆ ನಾವು ಸಂಪೂರ್ಣ ಸಜ್ಜಾಗಿದ್ದೇವೆ’ ಎಂದೂ ಬುಕಾತಿರ್ ಹೇಳಿದ್ದಾರೆ.

ಶಾರ್ಜಾದಲ್ಲಿ ಸೆ. 24ರಂದು ನಡೆಯುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಮುಖಾಮುಖಿಯಾಗಲಿವೆ. ಇದೇ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್ 2 ಮತ್ತು ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.